ಸುಂದರ ಸಮಾಜಕ್ಕೆ ಸರ್ವಜ್ಞನ ವಚನಗಳು ದಾರಿದೀಪ: ಎಸ್.ಎಸ್. ಪಾಟೀಲ

| Published : Feb 24 2025, 12:36 AM IST

ಸುಂದರ ಸಮಾಜಕ್ಕೆ ಸರ್ವಜ್ಞನ ವಚನಗಳು ದಾರಿದೀಪ: ಎಸ್.ಎಸ್. ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಸ್ತುತದಲ್ಲಿ ಸರ್ವಜ್ಞನ ಚಿಂತನೆಗಳು ಅತಿ ಅವಶ್ಯಕವಾಗಿವೆ. ಪ್ರತಿಯೊಬ್ಬರೂ ಇಚ್ಛಾಶಕ್ತಿ ತೋರುವ ಮೂಲಕ ಸರ್ವಜ್ಞನ ಚಿಂತನೆಗಳು ಹಾಗೂ ಕ್ಷೇತ್ರಗಳ ಅಭಿವೃದ್ಧಿಪಡಿಸುವತ್ತ ಹೆಚ್ಚು ಗಮನ ನೀಡಬೇಕು.

ಹಿರೇಕೆರೂರು: ಸರ್ವಜ್ಞ ತಮ್ಮ ತ್ರಿಪದಿಗಳಲ್ಲಿ ಲೋಕಾನುಭವವನ್ನು ಬಹಳ ಸರಳವಾಗಿ ಮತ್ತು ಮಾರ್ಮಿಕವಾಗಿ ತಿಳಿಸಿದ್ದಾರೆ. ಸಮಾಜದಲ್ಲಿ ನಡೆಯುವ ಪ್ರತಿಯೊಂದು ವಿಷಯಗಳ ಬಗೆಗೂ ತ್ರಿಪದಿಗಳನ್ನು ರಚಿಸಿದ್ದಾರೆ. ಸುಂದರ ಸಮಾಜ ನಿರ್ಮಾಣಕ್ಕೆ ಸರ್ವಜ್ಞನ ವಚನಗಳು ದಾರಿದೀಪಗಳಾಗಿವೆ ಎಂದು ಸರ್ವಜ್ಞ ಸ್ಮಾರಕ ಸಮಿತಿ ಅಧ್ಯಕ್ಷ ಎಸ್.ಎಸ್. ಪಾಟೀಲ ತಿಳಿಸಿದರು.ತಾಲೂಕಿನ ಸರ್ವಜ್ಞನ ಅಬಲೂರು ಗ್ರಾಮದಲ್ಲಿ ಸರ್ವಜ್ಞ ಯುವಕ ಸಂಘ ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ನಡೆದ ಸರ್ವಜ್ಞ ಜಯಂತ್ಯುತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.ಪ್ರಸ್ತುತದಲ್ಲಿ ಸರ್ವಜ್ಞನ ಚಿಂತನೆಗಳು ಅತಿ ಅವಶ್ಯಕವಾಗಿವೆ. ಪ್ರತಿಯೊಬ್ಬರೂ ಇಚ್ಛಾಶಕ್ತಿ ತೋರುವ ಮೂಲಕ ಸರ್ವಜ್ಞನ ಚಿಂತನೆಗಳು ಹಾಗೂ ಕ್ಷೇತ್ರಗಳ ಅಭಿವೃದ್ಧಿಪಡಿಸುವತ್ತ ಹೆಚ್ಚು ಗಮನ ನೀಡಬೇಕು. ಸರ್ವಜ್ಞನ ನಾಡು ಮಾದರಿಯಾಗುವಂತೆ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ನಿಮ್ಮೆಲ್ಲೆರ ಹೋರಾಟಕ್ಕೆ ಸದಾ ಬೆಂಬಲ ನೀಡುತ್ತೇವೆ ಎಂದರು.ಉಪನ್ಯಾಸ ನೀಡಿದ ಸುಣಕಲ್‌ಬಿದರಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ. ಎಸ್.ಪಿ. ಗೌಡರ್, ಸರ್ವಜ್ಞ ತನ್ನ ತ್ರಿಪದಿಗಳ ಮೂಲಕ ಸಮಾಜವನ್ನು ತಿದ್ದಿದ ವೈದ್ಯ. ಇಡೀ ನಾಡನ್ನು ಅಲೆದಾಡಿ ತನ್ನ ವಿಚಾರಗಳನ್ನು ಮಂಡಿಸಿದ ಕವಿ ಹಾಗೂ ದೇವರ ಸ್ವರೂಪವಾಗಿ ಬಂದು ನಮಗೆ ತಿಳಿವಳಿಕೆ ಕೊಟ್ಟವರು. ಹೀಗಾಗಿ ಇಂದಿಗೂ ಅವರ ತ್ರಿಪದಿಗಳು ಪ್ರಸ್ತುತವಾಗಿವೆ. ಸರ್ವಜ್ಞನ ಚಿಂತನೆಗಳು, ಅವರ ವಿಚಾರಧಾರೆಗಳು ಮುಖ್ಯವಾಗಬೇಕು ಎಂದರು.ಸರ್ವಜ್ಞ ಜಯಂತಿ ನಿಮಿತ್ತ ಗ್ರಾಮದಲ್ಲಿ ಸರ್ವಜ್ಞ ಮೂರ್ತಿಯ ಮೆರವಣಿಗೆ ಮಾಡಲಾಯಿತು. ನಂತರ ಸರ್ವಜ್ಞನ ಕಂಚಿನ ಪುತ್ಥಳಿಗೆ ಹೂವಿನ ಹಾರ ಹಾಕಲಾಯಿತು. ಸರ್ವಜ್ಞನ ವಚನಗಳ ಕಂಠಪಾಠ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.

ಗ್ರಾಪಂ ಅಧ್ಯಕ್ಷೆ ರೇಣುಕಾ ಮಾದೇವಪ್ಪ ವೀರಾಪುರ, ಸದಸ್ಯರಾದ ಉಜ್ಜನಗೌಡ ಮಳವಳ್ಳಿ, ಹನುಮಂತಪ್ಪ ಹರಿಜನ, ಗೀತಾ ಇಂಗಳಗೊಂದಿ, ಯಲ್ಲಮ್ಮ ಆಡೂರ, ಕಸಾಪ ತಾಲೂಕು ಘಟಕದ ಕೋಶಾಧ್ಯಕ್ಷ ಮಹೇಂದ್ರ ಬಡಳ್ಳಿ, ತಾಲೂಕು ಕುಂಬಾರ ಸಮಾಜದ ಅಧ್ಯಕ್ಷ ಚನ್ನಬಸಪ್ಪ ಚಕ್ರಸಾಲಿ, ಡಾ. ಬಸವರಾಜ ಪೂಜಾರ, ಶಿಕ್ಷಕ ಎನ್.ಎಸ್. ಹೆಗ್ಗೇರಿ, ಬಸವರಾಜ ಮಳವಳ್ಳಿ, ಮಹಾಲಿಂಗಪ್ಪ ಗುಳಲಕಾಯಿ, ಶಂಕ್ರಪ್ಪ ಗೌಡ್ರ, ಸುರೇಶ ಕುರುವತ್ತೇರ, ರೂಪಾ ಆಡೂರ, ರುದ್ರಮುನಿ ಕಣವೇರ, ಮಂಜುನಾಥ ಕಣವೇರ ಸೇರಿದಂತೆ ಸರ್ವಜ್ಞ ಯುವಕ ಸಂಘದ ಪದಾಧಿಕಾರಿಗಳು, ಗ್ರಾಮಸ್ಥರು, ಶಾಲಾ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿದ್ದರು. ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.