ಉನ್ನತ ಸ್ಥಾನದಲ್ಲಿದ್ದವರಿಗೆ ಜನ್ಮ ನೀಡಿದ ಸಾಸನೂರ ಗ್ರಾಮ

| Published : Aug 12 2024, 01:03 AM IST

ಉನ್ನತ ಸ್ಥಾನದಲ್ಲಿದ್ದವರಿಗೆ ಜನ್ಮ ನೀಡಿದ ಸಾಸನೂರ ಗ್ರಾಮ
Share this Article
  • FB
  • TW
  • Linkdin
  • Email

ಸಾರಾಂಶ

ಅನೇಕ ಜನರು ಉನ್ನತ ಸ್ಥಾನದಲ್ಲಿರುವವರಿಗೆ, ಹತ್ತು ಹಲವಾರು ಶ್ರೀಗಳಿಗೆ ಸಾಸನೂರ ಗ್ರಾಮ ಜನ್ಮ ನೀಡಿದೆ. ಇಲ್ಲಿ ಅನೇಕರು ನಾಡಿನ ನಾನಾ ಭಾಗಗಳಲ್ಲಿ ಹೆಸರು ಪಡೆದುಕೊಂಡಿದ್ದಾರೆ ಎಂದು ಶಿರಸಿ ಬಣ್ಣದ ಮಠದ ಶಿವಲಿಂಗ ಮಹಾಸ್ವಾಮಿಗಳು ನುಡಿದರು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ಅನೇಕ ಜನರು ಉನ್ನತ ಸ್ಥಾನದಲ್ಲಿರುವವರಿಗೆ, ಹತ್ತು ಹಲವಾರು ಶ್ರೀಗಳಿಗೆ ಸಾಸನೂರ ಗ್ರಾಮ ಜನ್ಮ ನೀಡಿದೆ. ಇಲ್ಲಿ ಅನೇಕರು ನಾಡಿನ ನಾನಾ ಭಾಗಗಳಲ್ಲಿ ಹೆಸರು ಪಡೆದುಕೊಂಡಿದ್ದಾರೆ ಎಂದು ಶಿರಸಿ ಬಣ್ಣದ ಮಠದ ಶಿವಲಿಂಗ ಮಹಾಸ್ವಾಮಿಗಳು ನುಡಿದರು.

ತಾಲೂಕಿನ ಸಾಸನೂರಿನಲ್ಲಿ ಮಡಿವಾಳೇಶ್ವರ ಹಿರೇಮಠದಲ್ಲಿ ಏರ್ಪಡಿಸಿದ್ದ ಲಿಂ.ಮ.ನಿ.ಪ್ರ.ಗುರುಸಿದ್ದರಾಜ ಯೋಗಿಂದ್ರ ಮಹಾಸ್ವಾಮಿಗಳವರ ೧೧೧ನೇ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, ಗುರುಸಿದ್ದರಾಜ ಶ್ರೀಗಳು ಸಾಸನೂರ ಗ್ರಾಮದವರು. ಇಂತಹ 8 ರಿಂದ 10 ಶ್ರೀಗಳನ್ನು ನಾಡಿಗೆ ನೀಡಿದ ಕೀರ್ತಿ ಸಾಸನೂರ ಗ್ರಾಮಕ್ಕೆ ಸಲ್ಲುತ್ತದೆ ಎಂದು ಬಣ್ಣಿಸಿದರು.ಕೊಡುವ ಕೈಗಳು ಸಾಕಷ್ಟಿವೆ. ಆದರೆ, ಬೇಡುವ ಬಾಯಿಗೆ ನಿಯತ್ತು ಎಂಬುದಿರಬೇಕು. ಇಂತಹ ಭಾವನೆ ನನ್ನಲಿದೆ. ಮನುಕುಲವೇ ನನ್ನ ಕುಟುಂಬ. ಇಡೀ ಜಗತ್ತೇ ನನ್ನ ಮನೆಯಾಗಿದೆ. ಎಲ್ಲರೂ ನಮ್ಮವರೆ. ಶ್ರೀಮಠಕ್ಕೆ ಮಲ್ಲಿಕಾರ್ಜುನ ಶ್ರೀಗಳನ್ನು ಉತ್ತರಾಧಿಕಾರಿ ಎಂದು ನೇಮಕ ಮಾಡಿದ್ದೇನೆ. ಈ ಕುರಿತು ಕಾಗದ ಪತ್ರಗಳನ್ನು ಸಹ ಮಾಡಲಾಗಿದೆ ಎಂದು ತಿಳಿಸಿದರು.ಅನುಗ್ರಹ ಕಣ್ಣಿನ ಆಸ್ಪತ್ರೆ ಖ್ಯಾತ ನೇತ್ರತಜ್ಞ ಡಾ.ಪ್ರಭುಗೌಡ ಲಿಂಗದಳ್ಳಿ(ಚಬನೂರ) ಮಾತನಾಡಿ, ಈ ಹಿಂದೆ ಅಧ್ಯಾತ್ಮ, ಸಂಸ್ಕಾರ ಹೆಚ್ಚಾಗಿತ್ತು. ಈಗ ಸಂಸ್ಕಾರ ಕಡಿಮೆಯಾಗಿ ಅಧ್ಯಾತ್ಮದ ಒಲವು ಹೆಚ್ಚಾಗುತ್ತಿದೆ. ಈ ಕಾರಣದಿಂದಲೇ ಶಿರಸಿ ಶ್ರೀಗಳು ಅಧ್ಯಾತ್ಮದ ವಿಚಾರ ಉಣಬಡಿಸಲು ಬಂದಿದ್ದಾರೆ ಎಂದು ತಿಳಿಸಿದರು.ಕೆಪಿಸಿಸಿ ಸದಸ್ಯ ಬಿ.ಎಸ್.ಪಾಟೀಲ(ಯಾಳಗಿ) ಮಾತನಾಡಿ, ಈ ಭಾಗದಲ್ಲಿ ಗುರುಕುಲ ಸ್ಥಾಪನೆ ಮಾಡುವ ಕುರಿತು ಸಜ್ಜಾಗಿರುವ ಶ್ರೀ ಶಿವಲಿಂಗ ಮಹಾಸ್ವಾಮಿಗಳ ಸೇವಾಕಾರ್ಯ ಅತೀವ ಮಹತ್ವದ್ದಾಗಿದೆ. ಗುರುಕುಲವಾದರೆ ಸುತ್ತಮುತ್ತಲಿನ ಗ್ರಾಮಗಳಿಗೆ ಅನುಕೂಲವಾಗಲಿದೆ. ಇಂತಹ ಕಾರ್ಯಕ್ಕೆ ತಮ್ಮ ಸಹಕಾರ ಇರಲಿದೆ ಎಂದರು.ಮಾಜಿ ಶಾಸಕರಾದ ಶಿವಪುತ್ರಪ್ಪ ಎಂ.ದೇಸಾಯಿ ಅಧ್ಯಕ್ಷತೆ ವಹಿಸಿದ್ದರು. ಶ್ರೀಮಠದ ಉತ್ತರಾಧಿಕಾರಿಯಾಗಿ ನಾಮಕರಣಗೊಂಡ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಗುರುಸಿದ್ದರಾಜ ಯೋಗಿಂದ್ರಮಹಾಸ್ವಾಮಿಗಳವರ ಅನೇಕ ಪವಾಡಗಳ ಕುರಿತು ವಿವರಿಸಿದರು. ಈ ವೇಳೆ ರವಿಕುಮಾರ ಹಯ್ಯಾಳ, ಅಯ್ಯನಗೌಡ.ಸಿ.ಪಾಟೀಲ, ಶಿವಾನಂದ ದೇಸಾಯಿ, ಬಸವನಗೌಡ ಬಿಂಜಲಬಾವಿ, ಬಾಪುಗೌಡ ಪಾಟೀಲ, ಸೋಮನಗೌಡ ಯರಲಡ್ಡಿ, ಬಸವನಗೌಡ ಪಾಟೀಲ, ಸಂಗನಗೌಡ ಪಾಟೀಲ, ಗಬಸಾವಳಗಿ ಉಪಸ್ಥಿತರಿದ್ದರು. ಮುತ್ತುಗೌಡ ಪಾಟೀಲ ಪ್ರಾರ್ಥಿಸಿದರು. ನಿಂಗಣ್ಣ ಹಯ್ಯಾಳ ಸ್ವಾಗತಿಸಿದರು, ಎಚ್.ಬಿ.ದೇವರೆಡ್ಡಿ ವಂದಿಸಿದರು.ಸಾಸನೂರ ಗ್ರಾಮದಲ್ಲಿ ಸಾಕಷ್ಟು ಜನರು ಕುಸ್ತಿಪಟುಗಳಾಗಿ ಹೋಗಿದ್ದಾರೆ. ಗುಂಡು ಸಗ್ರಾಣಿ ಕಲ್ಲುಗಳನ್ನು ಎತ್ತುವ ಕಾರ್ಯ ಮಾಡುತ್ತಿದ್ದರು. ಈ ಗ್ರಾಮಕ್ಕೆ ಸಾಹಸಮಯ ಗ್ರಾಮವೆಂದೂ ಕರೆಯಲಾಗುತಿತ್ತು. ಇಲ್ಲಿ ಗುರುಕುಲ ಸ್ಥಾಪನೆಗಾಗಿ ಸಜ್ಜಾಗಿದ್ದೇನೆ. ಇದರಿಂದ ಆಸರೆ ಇಲ್ಲದವರು ಮತ್ತು ಮಾನಸಿಕ ನೆಮ್ಮದಿ ಇಲ್ಲದವರಿಗೂ ಆಶ್ರಯವಾಗಲು ಗುರುಕುಲ ಸ್ಥಾಪನೆಗೆ ಸಜ್ಜಾಗಿದ್ದೇವೆ. ಇದಕ್ಕೆ ಎಲ್ಲರ ಸಹಾಯ, ಸಹಕಾರ ಬೇಕು.

-ಶಿವಲಿಂಗ ಮಹಾಸ್ವಾಮಿಗಳು, ಶಿರಸಿ ಬಣ್ಣದ ಮಠ.

ಯಾವ ಚಟ ಮಾಡಬೇಕು ಯಾವುದು ಮಾಡಬಾರದು ಎಂಬುವುದನ್ನು ಹಿರಿಯರು ಈ ಹಿಂದೆ ಕಲಿಸುತ್ತಿದ್ದರು. ಇದರಿಂದ ಆರೋಗ್ಯ ಎಂಬುವುದು ಸದೃಢವಾಗಿರುತ್ತಿತ್ತು. ಈಗ ನಗರ ಪಟ್ಟಣಗಳಲ್ಲಿ ಆಸ್ಪತ್ರೆಗಳು ಹೆಚ್ಚಾಗುತ್ತಿರುವುದನ್ನು ನೋಡಿದರೇ ಆರೋಗ್ಯ ಹದಗೆಡುತ್ತಿರುವುದೇ ಕಾರಣವಾಗಿದೆ.

-ಡಾ.ಪ್ರಭುಗೌಡ ಲಿಂಗದಳ್ಳಿ(ಚಬನೂರ), ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್‌ನ ರಜತ ಸಾಧಕರು ಪ್ರಶಸ್ತಿ ಪುರಸ್ಕೃತರು.