ಸಾರಾಂಶ
ಕೆ.ಆರ್.ನಗರದ ಮಹಿಳೆ ಕಿಡ್ನಾಪ್ ಪ್ರಕರಣದಲ್ಲಿ ಎಫ್ಐಆರ್ ದಾಖಲಾಗುವ ಮುನ್ನವೇ ಆರೋಪಿತ ಸತೀಶ್ ಬಾಬುವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಜೆಡಿಎಸ್ ಕಾರ್ಯಾಧ್ಯಕ್ಷರೂ ಆಗಿರುವ ಮಾಜಿ ಸಚಿವ ಸಾ.ರಾ.ಮಹೇಶ್ ಆರೋಪಿಸಿದರು.
ಮೈಸೂರು: ಕೆ.ಆರ್.ನಗರದ ಮಹಿಳೆ ಕಿಡ್ನಾಪ್ ಪ್ರಕರಣದಲ್ಲಿ ಎಫ್ಐಆರ್ ದಾಖಲಾಗುವ ಮುನ್ನವೇ ಆರೋಪಿತ ಸತೀಶ್ ಬಾಬುವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಜೆಡಿಎಸ್ ಕಾರ್ಯಾಧ್ಯಕ್ಷರೂ ಆಗಿರುವ ಮಾಜಿ ಸಚಿವ ಸಾ.ರಾ.ಮಹೇಶ್ ಆರೋಪಿಸಿದರು. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಎಫ್ಐಆರ್ ಆಗುತ್ತದೆ ಎಂದು ಇವರಿಗೆ ಮೊದಲೇ ಕನಸು ಬಿದ್ದಿತ್ತಾ? ರಾತ್ರಿ 9.05 ರಲ್ಲಿ ಎಫ್ಐಆರ್ ಆಗಿದೆ. ಆದರೆ ಅದಕ್ಕೂ ಮುನ್ನವೇ ಮಧ್ಯಾಹ್ನ 12 ಗಂಟೆಗೆ ಸತೀಶ್ ಬಾಬುವನ್ನು ಕರೆದುಕೊಂಡು ಹೋಗಿದ್ದಾರೆ ಎಂದು ದೂರಿದರು. ಸತೀಶ್‌ರನ್ನು ಕರೆದೊಯ್ದಿರುವ ದೃಶ್ಯ ಬೇಕರಿಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದು ಗೊತ್ತಾಗುತ್ತಿದ್ದಂತೆ ಬೇಕರಿಯ ಹಾರ್ಡ್ ಡಿಸ್ಕ್ ತೆಗೆದುಕೊಂಡು ಹೋಗಿ ಈಗ ಡಿಲೀಟ್ ಮಾಡಿ ಕೊಟ್ಟಿದ್ದಾರೆ. ಆದರೆ, ಮತ್ತೊಬ್ಬ ವ್ಯಕ್ತಿ ಆ ದೃಶ್ಯವನ್ನು ಮೊಬೈಲ್ ಮೂಲಕ ವೀಡಿಯೋ ಮಾಡಿ ಬೇರೊಬ್ಬರಿಗೆ ಕಳುಹಿಸಿದ್ದಾನೆ. ಇಷ್ಟೆಲ್ಲ ಸಾಕ್ಷಿಗಳು ನಮ್ಮ ಬಳಿ ಇವೆ. ಇದನ್ನು ನಮ್ಮ ವಕೀಲರು ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ ಎಂದು ಹೇಳಿದರು.
ಇದಕ್ಕಾಗಿ ಮೈಸೂರಿನಿಂದ ಸಬ್ ಇನ್ಸ್‌ಪೆಕ್ಟರ್ ಆಲ್ಟೋ ಕಾರಿನಲ್ಲಿ ಹೋಗಿದ್ದರು. ಇದೆಲ್ಲ ದಾಖಲೆಗಳು ನಮ್ಮ ಬಳಿ ಇದೆ. ತಾಯಿ ನಾಪತ್ತೆಯಾಗಿದ್ದಾರೆಂದು ದೂರು ಕೊಟ್ಟ ಹುಡುಗ ಅಮಾಯಕ. ಆತನ ಬಳಿ ಹಣ ನೀಡಿ, ಖಾಲಿ ಪೇಪರ್ ನಲ್ಲಿ ಸಹಿ ಪಡೆದಿದ್ದಾರೆ. ಆತ ಇದೀಗ ಎಲ್ಲಿದ್ದಾನೆ? ಈವರೆಗೂ ಆತ ಎಲ್ಲಿ ಹೋಗಿದ್ದಾನೆಂದೇ ಗೊತ್ತಿಲ್ಲ. ಆ ಮಹಿಳೆ ಬಳಿಯೂ ಈವರೆಗೆ 164ಎ ಹೇಳಿಕೆ ಏಕೆ ದಾಖಲಿಸಿಲ್ಲ ಎಂದು ಪ್ರಶ್ನಿಸಿದರು.