ಜೆಜೆಎಂ ಕಾಮಗಾರಿ ಸಮರ್ಪಕವಾಗಿ ಅನುಷ್ಠಾನ ಮಾಡಲು ಸತೀಶ ಹೆಗಡೆ ಸೂಚನೆ

| Published : Aug 07 2024, 01:05 AM IST

ಸಾರಾಂಶ

ಜೆಜೆಎಂ ಕಾಮಗಾರಿಯ ಪೈಪ್ ಅಳವಡಿಸಲು ಅಗೆದ ರಸ್ತೆಗಳನ್ನು ಗುತ್ತಿಗೆದಾರರು ಹಾಗೆಯೇ ಬಿಟ್ಟಿದ್ದಾರೆ. ಇದರಿಂದ ವಾಹನ ಅಪಘಾತ ಉಂಟಾಗುತ್ತಿದೆ.

ಶಿರಸಿ: ನೀರಿನ ಮೂಲಗಳನ್ನು ಮೊದಲು ಗುರುತಿಸದೇ, ಕಾಮಗಾರಿ ಆರಂಭಿಸಿರುವುದರಿಂದ ಜಲಜೀವನ ಮಿಷನ್ ಯೋಜನೆ ವಿಫಲವಾಗುತ್ತಿದ್ದು, ಸರ್ಕಾರದ ಹಣ ದುರುಪಯೋಗವಾಗದೇ ಹಂತ- ಹಂತವಾಗಿ ಜೆಜೆಎಂ ಕಾಮಗಾರಿ ಮುಕ್ತಾಯಗೊಳಿಸುವ ಕುರಿತು ಕ್ರಮ ವಹಿಸುವುದರ ಕುರಿತು ತಾಪಂ ಕೆಡಿಪಿ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು.ನಗರದ ತಾಲೂಕು ಪಂಚಾಯಿತಿಯ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ನಡೆದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ತಾಪಂ ಪ್ರಭಾರಿ ಕಾರ್ಯನಿರ್ವಹಣಾಧಿಕಾರಿ ಸತೀಶ ಹೆಗಡೆ ವಿಷಯ ಪ್ರಸ್ತಾಪಿಸಿದರು.ಜೆಜೆಎಂ ಕಾಮಗಾರಿ ಸಂಪೂರ್ಣ ಮುಗಿದು ಎಲ್ಲ ಮನೆಗಳಿಗೂ ನೀರು ಸರಬರಾಜು ಆಗುತ್ತಿದೆಯೇ ಎಂಬುದನ್ನು ಪರೀಕ್ಷೆ ನಡೆಸಿಕೊಂಡು ಗ್ರಾಪಂ ಸುಪರ್ದಿಗೆ ಪಡೆದುಕೊಳ್ಳುವಂತೆ ಪಿಡಿಒಗಳಿಗೆ ಸೂಚನೆ ನೀಡಲಾಗಿದೆ. ಕೆಲವೊಂದು ಕಡೆ ಸಮಸ್ಯೆಯಿದೆ. ಸಭೆ ನಡೆಸಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದರ ಕುರಿತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಇಚ್ಛಾಶಕ್ತಿ ತೋರಿಸಬೇಕಿದೆ ಎಂದರು.ತಹಸೀಲ್ದಾರ್ ಶ್ರೀಧರ ಮುಂದಲಮನಿ ಪ್ರತಿಕ್ರಿಯಿಸಿ, ಜೆಜೆಎಂ ಕಾಮಗಾರಿಯ ಪೈಪ್ ಅಳವಡಿಸಲು ಅಗೆದ ರಸ್ತೆಗಳನ್ನು ಗುತ್ತಿಗೆದಾರರು ಹಾಗೆಯೇ ಬಿಟ್ಟಿದ್ದಾರೆ. ಇದರಿಂದ ವಾಹನ ಅಪಘಾತ ಉಂಟಾಗುತ್ತಿದೆ. ಪೈಪ್ ಅಳವಡಿಸಿದ ನಂತರ ಸಮರ್ಪಕವಾಗಿ ದುರಸ್ತಿ ಮಾಡಬೇಕು. ಅಗೆದ ರಸ್ತೆಗಳನ್ನು ಗುತ್ತಿಗೆದಾರರ ಕಡೆಯಿಂದ ಪುನಃ ನಿರ್ಮಾಣ ಮಾಡುವಂತೆ ಆದೇಶ ಮಾಡುವಂತೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಭಿಯಂತರಿಗೆ ಸೂಚಿಸಿದರು.ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಭಿಯಂತರ ಎಸ್.ಎಸ್. ಪಾಟೀಲ ಮಾತನಾಡಿ, ಪ್ರಸಕ್ತ ಸಾಲಿನ ೧೦ ಕಾಮಗಾರಿಯಲ್ಲಿ ೮ ಮುಕ್ತಾಯಗೊಂಡಿದೆ. ತಾಲೂಕಿನ ಕುಳವೆ ಮತ್ತು ಐಗಳಕೊಪ್ಪ ಕಾಮಗಾರಿ ಆರಂಭವಾಗಿಲ್ಲ. ಕುಳವೆಯಲ್ಲಿ ಬಾವಿ ನಿರ್ಮಾಣಕ್ಕೆ ₹೧.೫ ಲಕ್ಷ ಇದೆ. ಇದರಿಂದ ಕಾಮಗಾರಿ ಸಾಧ್ಯವಿಲ್ಲ ಎಂದು ಯಾರೂ ಟೆಂಡರ್ ಹಾಕಿಲ್ಲ. ಟಾಸ್ಕ್‌ಫೋರ್ಸ್‌ನಲ್ಲಿ ಹಣ ಇಟ್ಟು ಕಾಮಗಾರಿ ಆರಂಭ ಮಾಡಲಾಗುತ್ತದೆ. ಜಲಜೀವನ ಮಿಷನ್ ಯೋಜನೆಯ ಮೊದಲ ಹಂತದ ೪೦ ಕಾಮಗಾರಿಯಲ್ಲಿ ಬದನೋಡ, ಗಿಡಮಾವಿನಕಟ್ಟೆ, ಸಂತೊಳ್ಳಿ, ಬೊಮ್ಮನಳ್ಳಿಯಲ್ಲಿ ಬಾಕಿ ಇದೆ ಎಂದರು.೨ನೇ ಹಂತದ ೩೩ ಕಾಮಗಾರಿಯಲ್ಲಿ ೧೩ ನಡೆಯುತ್ತಿದೆ. ನಾಲ್ಕನೆಯ ಹಂತದಲ್ಲಿ ೪೬ರಲ್ಲಿ ೩೪ ಪ್ರಗತಿಯಲ್ಲಿದೆ. ತಾಪಂ ಕಾರ್ಯನಿರ್ವಹಣಾಧಿಕಾರಿಯ ಸೂಚನೆಯಂತೆ ಸಮಸ್ಯೆಯಿರುವ ಸ್ಥಳಗಳಲ್ಲಿ ಸಾರ್ವಜನಿಕರ ಜತೆ ಸಭೆ ನಡೆಸಿ, ಶೀಘ್ರ ಕಾಮಗಾರಿ ಆರಂಭಕ್ಕೆ ಕ್ರಮ ವಹಿಸಲಾಗುತ್ತದೆ ಎಂದರು.ತಾಲೂಕು ಆರೋಗ್ಯಾಧಿಕಾರಿ ಡಾ. ವಿನಾಯಕ ಭಟ್ಟ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ೨೧ ಪ್ರಕರಣ ಡೆಂಘೀ ಪ್ರಕರಣ ದೃಢಪಟ್ಟಿದೆ. ಅವರೆಲ್ಲರೂ ಗುಣಮುಖರಾಗಿದ್ದಾರೆ. ಆಗಸ್ಟ್ ತಿಂಗಳಿನಿಂದ ಡೆಂಘೀ ಪ್ರಕರಣ ಇಳಿಮುಖವಾಗುತ್ತಿದೆ. ಭೇದಿ ಪ್ರಕರಣ ಜಾಸ್ತಿಯಾಗುತ್ತಿದ್ದು, ಈ ವರ್ಷ ೪೦೭ ಪ್ರಕರಣ ಬಂದಿದೆ. ಕಾಯಿಸಿದ ನೀರು ಕುಡಿಯುವುದರಿಂದ ಭೇದಿ ನಿಯಂತ್ರಣ ಸಾಧ್ಯ. ಹೆಗಡೆಕಟ್ಟಾ ಪ್ರಾಥಮಿಕ ಕೇಂದ್ರ ಸೋರುತ್ತಿರುವುದು ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಅದನ್ನು ಪಿಆರ್‌ಇಡಿ ಇಂಜಿನಿಯರಿಂಗ್ ವಿಭಾಗಕ್ಕೆ ಮಾಹಿತಿ ನೀಡಿದಾಗ, ಅಧಿಕಾರಿಗಳು ಪರಿಶೀಲಿಸಿ, ದುರಸ್ತಿಗೆ ಕ್ರಮ ವಹಿಸಲಾಗುತ್ತದೆ ಎಂದರು.ಬನವಾಸಿ ಪ್ರಾಥಮಿಕ ಆರೋಗ್ಯ ಕೇಂದ್ರ ದುರಸ್ತಿಗೆ ₹೪೨ ಲಕ್ಷ ಮಂಜೂರಿಯಾಗಿ, ಟೆಂಡರ್ ಸಹ ಆಗಿದೆ. ಮಳೆ ಸ್ವಲ್ಪ ಕಡಿಮೆಯಾದ ನಂತರ ದುರಸ್ತಿ ಕಾಮಗಾರಿ ಪ್ರಾರಂಭಿಸಲಾಗುತ್ತದೆ ಎಂದು ಗುತ್ತಿಗೆದಾರರು ತಿಳಿಸಿದ್ದಾರೆ ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ ನಾಯ್ಕ ಮಾತನಾಡಿ, ಶಾಲೆಗಳು ಪ್ರಾರಂಭವಾಗಿ ೨ ತಿಂಗಳು ಕಳೆದಿದೆ. ೧೬ ಮಕ್ಕಳು ದಾಖಲಾದರೆ, ಶೇ. ೧೦೦ರಷ್ಟು ದಾಖಲಾತಿಯಾಗುತ್ತದೆ. ೧೫೬ ಶಿಕ್ಷಕರ ಹುದ್ದೆಗಳು ಖಾಲಿಯಿದೆ. ೬೬ ಅತಿಥಿ ಶಿಕ್ಷಕರನ್ನು ನೇಮಕ ಮಾಡಿರುವುದರಿಂದ ಶಿಕ್ಷಕರ ಕೊರತೆಯಿಲ್ಲ. ದಾಖಲಾತಿ ಹೆಚ್ಚಳವಾಗಿರುವ ಶಾಲೆಗಳಿಗೆ ಹೆಚ್ಚುವರಿ ಶಿಕ್ಷಕರನ್ನು ಕೇಳಿದ್ದಾರೆ. ಮುಂದಿನ ವರ್ಷದಲ್ಲಿ ನೀಡಲಾಗುತ್ತದೆ. ಎಸ್‌ಎಸ್‌ಎಲ್‌ಸಿ ೩ ಪರೀಕ್ಷೆ ನಡೆಯುವುದರಿಂದ ೨ನೇ ಮುಖ್ಯ ಪರೀಕ್ಷೆಯಾಗಿ ಫಲಿತಾಂಶ ಬಂದಿದೆ. ೯೯ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಮೂರನೆಯ ಮುಖ್ಯ ಪರೀಕ್ಷೆಯು ಆ. ೨ರಿಂದ ೮ರ ವರೆಗೆ ನಡೆಯುತ್ತಿದೆ. ೭೬ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ ಎಂದರು.ಕೃಷಿ ಇಲಾಖೆ ಅಧಿಕಾರಿ ನಂದೀಶ ಮಾಹಿತಿ ನೀಡಿ, ಆ. ೫ರ ವರೆಗೆ ೧೮೩೬ ಮಿಮೀ ವಾಡಿಕೆ ಮಳೆ ಇತ್ತು. ಈ ವರ್ಷ ೨೯೨೧ ಮಿಮೀ ಮಳೆಯಾಗಿದೆ. ೨.೫೧೭ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಕಾರ್ಯ ಮುಗಿದಿದೆ. ರೈತ ಸಂಪರ್ಕ ಕೇಂದ್ರದ ಮೂಲಕ ಬಿತ್ತನೆ ಬೀಜ ವಿತರಣೆ ಮುಗಿದಿದ್ದು, ೩೦೦ ಕ್ವಿಂಟಲ್ ಬಿತ್ತನೆ ಬೀಜ ದಾಸ್ತಾನಿದೆ. ೨೧೧೯ ಮೆಟ್ರಿಕ್ ಟನ್ ರಸಗೊಬ್ಬರಗಳು ದಾಸ್ತಾನಿದ್ದು, ಬನವಾಸಿ ಭಾಗದಲ್ಲಿ ೪೩ ಎಕರೆ ಮುಸುಕಿನ ಜೋಳ ಬೆಳೆ ಹಾನಿ, ತಾಲೂಕಿನಲ್ಲಿ ಈವರೆಗೆ ೧೧ ಎಕರೆ ಭತ್ತದ ಕ್ಷೇತ್ರ ವರದಿಯಾಗಿದೆ. ಬಾಶಿ, ಮೊಗಳ್ಳಿ ಭಾಗದಲ್ಲಿ ವರದಾ ನದಿ ನೆರೆ ಇಳಿಯದ ಕಾರಣ ಹಾನಿ ಅಂದಾಜು ಮಾಡಲಾಗಿಲ್ಲ ಎಂದರು.

ಅರಣ್ಯ, ತೋಟಗಾರಿಕೆ, ಹಿಂದುಳಿದ ವರ್ಗಗಳ ಕಲ್ಯಾಣ, ಸಮಾಜ ಕಲ್ಯಾಣ, ಆಯುಷ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು ಇಲಾಖಾ ವರದಿಯನ್ನು ಮಂಡಿಸಿದರು.ಬಾಂದಾರ್‌, ಸೇತುವೆಗೆ ಹಾನಿ: ತಾಲೂಕಿನ ದೇವರಹೊಳೆ ಬಾಂದಾರ್ ಸಹಿತ ಸೇತುವೆ ಕೆಳ ಭಾಗದಲ್ಲಿ ಬೃಹತ್ ಮರದ ದಿಮ್ಮಿಗಳು ಸಿಲುಕಿಕೊಂಡಿರುವುದರಿಂದ ಬಾಂದಾರ್ ಮತ್ತು ಸೇತುವೆಗೆ ಹಾನಿಯಾಗುತ್ತದೆ. ಅರಣ್ಯ ಇಲಾಖೆ ಮತ್ತು ಸಣ್ಣ ನೀರಾವರಿ ಇಲಾಖೆ ಜಂಟಿಯಾಗಿ ತೆರವು ಕಾರ್ಯಾಚರಣೆ ಮಾಡಬೇಕು. ಸೇತುವೆ, ಕಟ್ಟಡ ಸೇರಿದಂತೆ ಸರ್ಕಾರದ ಆಸ್ತಿಗಳಿಗೆ ಹಾನಿಯಾಗುವ ಸಂಭವಿರುವುದನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ವಹಿಸಲು ಅಧಿಕಾರಿಗಳು ಮುಂದಾಗಬೇಕು ಎಂದು ತಹಸೀಲ್ದಾರ್ ಶ್ರೀಧರ ಮುಂದಲನಿ ಸೂಚಿಸಿದರು.