ಸಾರಾಂಶ
ಗದಗ: ಸತ್ಸಂಗದಿಂದ ಮನುಷ್ಯನ ಜೀವನವನ್ನೆ ಬದಲಾಯಿಸುವ ಶಕ್ತಿ ಇದೆ ಎಂದು ಆಧ್ಯಾತ್ಮ ವಿದ್ಯಾಶ್ರಮದ ಶರಣೆ ನೀಲಮ್ಮತಾಯಿ ಹೇಳಿದರು.
ನಗರದ ರಾಚೋಟಿ ವೀರಭದ್ರೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಅಂಗವಾಗಿ ನಡೆದ ಶ್ರಾವಣ ಚರಿತಾಮೃತ ಪ್ರವಚನದಲ್ಲಿ ಅವರು ಮಾತನಾಡಿದರು.ಲೌಕಿಕ ಚೌಕಟ್ಟಿನಲ್ಲಿ ಬಾಳುವವರು ಸತ್ಸಂಗದಲ್ಲಿ ಭಾಗವಹಿಸಬೇಕು. ಸತ್ಸಂಗದಲ್ಲಿ ಭಾಗವಹಿಸುವುದರಿಂದ ಮೋಹ ಇರುವುದಿಲ್ಲ, ರತ್ನಾಕರ (ವಾಲ್ಮೀಕಿ) ನಾರದರ ಹಿತೋಪದೇಶದಿಂದ ಒಬ್ಬಕೊಲೆ ಗಡಕನಾಗಿದ್ದ ರತ್ನಾಕರ ಸಂಪೂರ್ಣವಾಗಿ ಬದಲಾವಣೆಯಾದರು. ಅವರಿಗೆ ರಾಮ ರಾಮ ಅಂತಾ ಅನ್ನಲು ಸಹಿತ ಬರುತ್ತಿರಲಿಲ್ಲ. ನಾರದರು ಅವರಿಗೆ ಒಳ್ಳೆಯ ಹಿತೋಪದೇಶ ಮಾಡಿದ್ದರಿಂದ ಅವರ ಮನಸ್ಸು ಪರಿವರ್ತನೆಯಾಗಿ ಮಹಾಕಾವ್ಯ ರಾಮಾಯಣ ಬರೆದರು. ರಾಮ ರಾಮ ಅಂತಾ ಭಜಿಸಿದ್ದರಿಂದ ಬುದ್ಧಿ ಪರಿಶುದ್ಧವಾಯಿತು.ಮಹಾ ಭಾರತದಲ್ಲಿ ದುರ್ಯೋಧನ ಯಾವುದೇ ಸತ್ಸಂಗದಲ್ಲಿ ಭಾಗಿಯಾಗದೇ ಇರುವುದರಿಂದ ಅವನಿಗೆ ಜ್ಞಾನ ಪ್ರಾಪ್ತಿಯಾಗಲಿಲ್ಲ. ದುರ್ಯೋಧನ ನದಿಯದಂಡೆಯ ಮೇಲೆ ತೀರಿಕೊಂಡಾಗ, ಒಂದು ನರಿಯು ದುರ್ಯೋಧನನ್ನು ತಿನ್ನಲು ಬಂದಿತು. ಆಗ ಆ ನರಿಗೆ ಆಕಾಶವಾಣಿ ಆಯಿತು. ದುರ್ಯೋಧನನ್ನು ತಿನ್ನಬೇಡ, ಆ ಶವ ಯಾವುದೇ ಒಳ್ಳೆಯ ಕೆಲಸ ಮಾಡಿಲ್ಲಾ. ದುರ್ಯೋಧನನ ಕೈಯನ್ನು ನರಿ ತಿನ್ನಲು ಹೋದಾಗ ಆಕಾಶವಾಣಿ ಆಗಿ ಆ ಕೈಯಿಂದ ದುರ್ಯೋಧನ ಯಾರಿಗೂ ದಾನ ಧರ್ಮ ಮಾಡಿಲ್ಲ, ಅಣ್ಣನ ಹೆಂಡತಿ ತಾಯಿಯ ಸಮಾನ ಅಂತಹ ಅಣ್ಣನ ಹೆಂಡತಿಯ ಸೀರೆಯನ್ನು ಎಳೆದಿರುವನು. ಅವನನ್ನು ತಿನ್ನಬೇಡ. ಅವನು ಯಾವುದೇ ಪುಣ್ಯದ ಕೆಲಸ ಮಾಡಿಲ್ಲ. ಅವನ ಕಣ್ಣು ಕೂಡಾ ಸಾಧು ಸಂತರನ್ನು ನೋಡಿಲ್ಲ. ಒಳ್ಳೆಯದನ್ನು ನೋಡಿಲ್ಲ. ಕಿವಿಯಿಂದ ಒಳ್ಳೆಯದನ್ನು ಕೇಳಿಲ್ಲ. ಅವನು ಶರಣರ ಪ್ರವಚನ ಕೇಳಿಲ್ಲ. ಕೇವಲ ಶಕುನಿಯ ಮಾತನ್ನು ಕೇಳಿರುವನು. ತಲೆಯನ್ನು ತಿನ್ನಬೇಡ, ಆ ತಲೆಯಲ್ಲಿ ಗರ್ವವನ್ನು ತುಂಬಿಕೊಂಡಿದ್ದ. ದುರ್ಯೋಧನನ ತಲೆಯಲ್ಲಿ ಯಾವುದೇ ಒಳ್ಳೆಯ ವಿಷಯಗಳು ತುಂಬಿರುವುದಿಲ್ಲ, ಸಂತರಿಗೆ, ಶರಣರಿಗೆ, ಗುರುಗಳಿಗೆ ಬಾಗಿದ ತಲೆಯಲ್ಲಾ. ಅನ್ಯಾಯದಿಂದ ಪಾಂಡವರ ಸಂಪತನ್ನು ತಿಂದ ಹೊಟ್ಟೆ, ಅದನ್ನು ತಿನ್ನಬೇಡ ಕಾಲನ್ನು ತಿನ್ನಬೇಡ. ಪಾಪವನ್ನು ತುಂಬಿಕೊಂಡ ದುರ್ಯೋಧನನ ದೇಹವನ್ನು ತಿನ್ನದೇ ನರಿ ಕೂಡ ಓಡಿಹೋಯಿತು.ಮನುಷ್ಯ, ಮನುಷ್ಯನಾಗಿ ಸಾಯಬಾರದು, ಮನಷ್ಯ ಶರಣರಂತೆ ಸಾಯಬೇಕು. ಶ್ರಾವಣ ಮಾಸದಲ್ಲಿ ಒಳ್ಳೆಯದನ್ನು ಕೇಳಬೇಕು. ಒಳ್ಳೆಯದನ್ನು ಕೇಳಿದಂತೆ ನಡೆದುಕೊಳ್ಳಬೇಕು. ಸತ್ಸಂಗ ಮದ, ಮೋಹ, ಮತ್ಸರ ಬಿಡಿಸುತ್ತದೆ. ಸತ್ಸಂಗದ ಜ್ಞಾನ ಇದ್ದರೆ ಮನುಷ್ಯ ಸಮಾಜದಲ್ಲಿ ಒಳ್ಳೆಯನಾಗಿ ಬದುಕುವನು. ಭಕ್ತಿ ಭಾವನೆ ಬಂದರೆ ಶರಣನಾಗುವ ಎಂದರು.ಈ ಸಂದರ್ಭದಲ್ಲಿ ಕೊಟ್ರಪ್ಪ ಕಮತರ, ಎಂ.ಎಂ. ಹಿರೇಮಠ, ಶಿವಣ್ಣ ಕತ್ತಿ, ಮುರಿಗೆಪ್ಪ ನಾಲವಾಡ, ವಿರುಪಾಕ್ಷಪ್ಪ ಅಕ್ಕಿ, ಬಸವರಾಜ ಜಂತ್ಲಿ, ಶಿವಣ್ಣ ಇಟ್ನಳ್ಳಿ, ಶೇಖಪ್ಪ ಹೊಂಬಳ, ಸಿದ್ದಣ್ಣ ಅರಳಿ, ಗಂಗಾಧರ ಮೇಲಗಿರಿ, ಗಂಗಾಧರ ನಂದಿಕೋಲಮಠ, ಶ್ರಿಶೈಲಪ್ಪ ಪಟ್ಟಣಶೆಟ್ಟಿ, ಸುರೇಶ ಮಾಳವಾಡ, ಪ್ರಭು ಶೆಟ್ಟರ, ಸುಭಾಸ ಹವಳೆ, ವಿರುಪಾಕ್ಷಪ್ಪ ಅಂಗಡಿ, ಮಲ್ಲಿಕಾರ್ಜುನ ಹಿರೇಮಠ, ಶಂಕರ ನೀರಲಕೇರಿ, ಪಂಚಾಕ್ಷರ ಅಂಗಡಿ, ನವೀನ ನಾಲ್ವಾಡ, ಸುರೇಶ ಹೆಬಸೂರ, ಪ್ರಕಾಶ ಜಂತ್ಲಿ, ಸುನಂದಾ ಜೋಬಾಳೆ, ಬೀನಾ ಮಾನ್ವಿ, ಉಮಾ ಪಟ್ಟಣಶೆಟ್ಟಿ, ಜಯಶ್ರೀ ನಿಲೂಗಲ್, ಕಸ್ತೂರಕ್ಕ ಮಾನ್ವಿ, ಶರಣಮ್ಮ ಶಿರೂರ, ಸುಶೀಲಾ ನಿಲೂಗಲ್ಲ, ನೀಲಕ್ಕ ಕಗನಳ್ಳಿ, ಅನಸಕ್ಕ ಮೇಲಗಿರಿ, ಕಲ್ಪನಾ ಹಿರೇಮಠ, ಸರಸ್ವತಿ ನಂದಿಕೋಲಮಠ, ಶೈಲಾ ಮಾನ್ವಿ ಮುತಾದವರು ಇದ್ದರು.