ಮನುಷ್ಯ ಜೀವನದ ಜಂಜಾಟಗಳಿಂದ ಹೊರಬರಬೇಕಾದರೆ ಸತ್ಸಂಗ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು, ಒಳ್ಳೆಯ ವಿಚಾರಗಳನ್ನು ಆಲಿಸಿ ಅಳವಡಿಸಿಕೊಂಡರೆ ಬದುಕಿನಲ್ಲಿ ನೆಮ್ಮದಿ ಕಾಣಲು ಸಾಧ್ಯ ಎಂದು ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ತಿಳಿಸಿದರು.

ಶಿಗ್ಗಾಂವಿ: ಮನುಷ್ಯ ಜೀವನದ ಜಂಜಾಟಗಳಿಂದ ಹೊರಬರಬೇಕಾದರೆ ಸತ್ಸಂಗ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು, ಒಳ್ಳೆಯ ವಿಚಾರಗಳನ್ನು ಆಲಿಸಿ ಅಳವಡಿಸಿಕೊಂಡರೆ ಬದುಕಿನಲ್ಲಿ ನೆಮ್ಮದಿ ಕಾಣಲು ಸಾಧ್ಯ ಎಂದು ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ತಿಳಿಸಿದರು.ಪಟ್ಟಣದ ವಿರಕ್ತಮಠದ ಆವಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಶಿಗ್ಗಾಂವಿ ಘಟಕದಿಂದ ಆಯೋಜಿಸಿದ್ದ ಬೆಳದಿಂಗಳ ನೋಟ ಸತ್ಸಂಗದ ಕೂಟ ೦೧ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಅವರು, ಮನುಷ್ಯ ಗಳಿಸಿ ಕೂಡಿಡುವ ಬದಲು ದಾನ ಧರ್ಮದ ಕಾರ್ಯಗಳಿಗೆ ಮುಂದಾಗಬೇಕು, ಒತ್ತಡದ ಬದುಕಿನಿಂದ ಹೊರಬರಲು ಸಾಮಾಜಿಕ, ಧಾರ್ಮಿಕ, ಆಧ್ಯಾತ್ಮಿಕ ಕಾರ್ಯಗಳಲ್ಲಿ ಭಾಗಿಯಾಗಬೇಕು, ಬೆಳದಿಂಗಳೂಟಕ್ಕೆ ತನ್ನದೆ ಆದ ಇತಿಹಾಸವಿದೆ. ಇದು ಭಾವೈಕ್ಯತೆಯ ಸಂಕೇತವಾಗಿದ್ದು, ಒಡೆದ ಮನಸ್ಸುಗಳನ್ನು ಒಟ್ಟುಗೂಡಿಸಿ ಗಟ್ಟಿಗೊಳಿಸುವ ವೇದಿಕೆಯಾಗಿ, ಹಂಚಿ ತಿನ್ನುವ, ಪ್ರೀತಿ, ವಿಶ್ವಾಸ ನಂಬಿಕೆಗಳನ್ನು ಬೆಸೆಯುವ ಕಾರ್ಯಕ್ರಮವಾಗಿದೆ. ಇಲ್ಲಿ ಸಕಾರಾತ್ಮಕವಾಗಿ ಆಹಾರನ್ನು ಸವಿಯುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ, ಇಂತಹ ಕಾರ್ಯಕ್ರಮವನ್ನು ಪ್ರಥಮವಾಗಿ ಆಯೋಜನೆ ಮಾಡಿದ ಕನ್ನಡ ಸಾಹಿತ್ಯ ಪರಿಷತ್‌ನ ಸರ್ವ ಪದಾಧಿಕಾರಿಗಳಿಗೆ ಅಭಿನಂದನೆಗಳು ಹಾಗೂ ಇಂತಹ ಕಾರ್ಯಕ್ರಮಗಳಿಗೆ ವಿರಕ್ತಮಠವು ಸದಾ ಬಾಗಿಲನ್ನು ತೆರೆದಿರುತ್ತದೆ. ಇಂತಹ ಕಾರ್ಯಕ್ರಮಗಳು ಇನ್ನೂ ಹೆಚ್ಚು ಹೆಚ್ಚು ನಡೆಯಬೇಕು, ಮನುಷ್ಯನ ವಿಕಾಸಕ್ಕೆ ದಾರಿದೀಪವಾಗಬೇಕು ಎಂದರು. ಶಿಕ್ಷಕಿ ಪ್ರತಿಭಾ ಗಾಂಜಿ ಮಾತನಾಡಿದರು. ಡಾ. ಲತಾ ನಿಡಗುಂದಿ ಮಾತನಾಡಿ, ಬೆಳದಿಂಗಳೂಟದ ವೈಜ್ಞಾನಿಕ ಮಹತ್ವ ಹಾಗೂ ಪ್ರಯೋಜನೆಗಳ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿವಾನಂದ ಮ್ಯಾಗೇರಿ, ಸಾಹಿತಿಗಳಾದ ದೇವರಾಜ ಸುಣಗಾರ ಹಾಗೂ ವಿಶ್ವನಾಥ ಬಂಡಿವಡ್ಡರ ಕವನವಾಚಿಸಿದರು.ಕನ್ನಡ ಸಾಹಿತ್ಯ ಪರಿಷತ್ತು ಶಿಗ್ಗಾಂವಿ ಹೋಬಳಿ ಘಟಕದ ಅಧ್ಯಕ್ಷೆ ಲಲಿತಾ ಹಿರೇಮಠ ಬೆಳದಿಂಗಳ ನೋಟ ಸತ್ಸಂಗದ ಕೂಟ ಈ ಕಾರ್ಯಕ್ರಮಕ್ಕೆ ರುಚಿಯಾದ ಹೋಳಿಗೆ ಊಟದ ವ್ಯವಸ್ಥೆಯನ್ನು ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.ಕಾರ್ಯಕ್ರಮದಲ್ಲಿ ಕಸಾಪ ತಾಲೂಕು ಅಧ್ಯಕ್ಷ ನಾಗಪ್ಪ ಬೆಂತೂರ, ಕಸಾಪ ಬಂಕಾಪೂರ ಹೋಬಳಿ ಘಟಕದ ಅಧ್ಯಕ್ಷ ಎ.ಕೆ. ಅದ್ವಾನಿಮಠ, ಸಿ.ಡಿ. ಯತ್ನಳ್ಳಿ, ಶಶಿಕಾಂತ ರಾಠೋಡ, ಬಸುವರಾಜ ಶಿಗ್ಗಾವಿ, ಫಕ್ಕಿರೇಶ ಕೊಂಡಾಯಿ, ಹನುಮಂತಪ ಯು.ವಿ., ರಮೇಶ ಎಚ್., ಅಶೋಕ ಕಾಳೆ, ಶಿವಾನಂದ ಹೊಸಮನಿ, ಶಂಭು ಕೇರಿ, ಸಿ. ಎನ್. ಕಲಕೋಟಿ, ಸಂಜನಾ ರಾಯ್ಕರ, ರವಿ ಕಡಕೋಳ ಸೇರಿದಂತೆ ಕಸಾಪ ಪದಾಧಿಕಾರಿಗಳು ವಿದ್ಯಾರ್ಥಿಗಳು ಹಾಗೂ ಮಠದ ಭಕ್ತರು ಜೊತೆಗೂಡಿ ಬೆಳದಿಂಗಳೂಟ ಸವಿದರು. ಶಿಕ್ಷಕ ಮಾಂತೇಶ ನಾಯ್ಕೋಡಿ ಕಾರ್ಯಕ್ರಮ ನಿರ್ವಹಿಸಿದರು.