ಸಾರಾಂಶ
ಬಳ್ಳಾರಿ: ಅನುಭವ ಮಂಟಪದ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯ ಪಡೆದ ಸತ್ಯಕ್ಕ ಅನಿಷ್ಟಕಾರಿ ಸಾಮಾಜಿಕ ಆಚರಣೆಗಳ ವಿರುದ್ಧ ಪ್ರತಿರೋಧ ಒಡ್ಡಿದ್ದರು. ಅನ್ಯಾಯ, ಭ್ರಷ್ಟಾಚಾರದಿಂದ ಗಳಿಸುವ ಸಂಪತ್ತು ಅಯೋಗ್ಯ ಎಂದು ಬಗೆದಿದ್ದರು ಎಂದು ರೂಪನಗುಡಿ ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕಿ ಬಿ.ರಾಜೇಶ್ವರಿ ಅಭಿಪ್ರಾಯಪಟ್ಟರು.
ತಾಲೂಕಿನ ಹಂದಿಹಾಳು ಗ್ರಾಮದ ಶಿವಶರಣರ ಮಠದಲ್ಲಿ ಆಯೋಜಿಸಿದ್ದ ಶಿವ ಚಿಂತನ ಗೋಷ್ಠಿಯಲ್ಲಿ ಸತ್ಯಕ್ಕನ ವಚನಗಳಲ್ಲಿ ಜೀವನ ಮೌಲ್ಯಗಳು ಎನ್ನುವ ವಿಷಯದ ಕುರಿತು ಉಪನ್ಯಾಸ ನೀಡಿದರು.ಸತ್ಯಕ್ಕನ ವಚನಗಳಲ್ಲಿ ಕಾಯಕ ಮತ್ತು ದಾಸೋಹ ಪ್ರಜ್ಞೆ, ಸ್ತ್ರೀ ಸಮಾನತೆ, ಸಾಮಾಜಿಕ ಕಳಕಳಿ ಬದುಕಿನ ಮುಖ್ಯ ಮೌಲ್ಯಗಳಾಗಿದ್ದವು. ಶಿವಶರಣರ ಸತ್ಯ ಮಾರ್ಗದ ಬದುಕು, ಜೀವನಾನುಭವ, ಲೋಕಾನುಭವವನ್ನು ನಿಜದ ನೆಲೆಯಲ್ಲಿ ನಮ್ಮದಾಗಿಸಿಕೊಂಡಾಗ ನಮ್ಮ ಬದುಕು ಸಾರ್ಥಕವಾಗುತ್ತದೆ ಎಂದು ಮಾರ್ಮಿಕವಾಗಿ ಹೇಳಿದರು.ವಿಶ್ರಾಂತ ಮುಖ್ಯಗುರು ಜೋಳದರಾಶಿ ಪಂಪನಗೌಡ ಮಾತನಾಡಿ, ಶಿವಶರಣರು ಅಂತರಂಗ ಮತ್ತು ಬಹಿರಂಗ ಸಾಮರಸ್ಯದ ಸಾಧಕರಾಗಿದ್ದರು. ಮಾನವನ ಘನತೆಯನ್ನು ಅವನ ಕಾಯಕ ನಿಷ್ಠೆಯಿಂದಲೇ ಎತ್ತಿ ಹಿಡಿದರು ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ಮಠದ ಧರ್ಮದರ್ಶಿ ಡಾ.ಎಚ್.ಮಲ್ಲಿಕಾರ್ಜನ ಗೌಡ, ಇಂದಿನ ರೋಗಗ್ರಸ್ತ ಸಮಾಜಕ್ಕೆ ಶರಣರ ಚಿಂತನೆಗಳು ಸಂಜೀವಿನಿಯಂತಿವೆ. ಅವರ ಆಲೋಚನೆ ಮತ್ತು ಅರ್ಥಪೂರ್ಣವಾದ ಬದುಕು ಎಂದೆಂದೂ ಮಾದರಿ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸರಳಾದೇವಿ ಕಾಲೇಜಿನ ಪ್ರಾಧ್ಯಾಪಕ ಡಾ.ದಸ್ತಗೀರಸಾಬ್ ದಿನ್ನಿ, ಶರಣ ಸಾಹಿತ್ಯದಲ್ಲಿ ನೇರ ನಡೆ ನುಡಿಯ ಸತ್ಯಕ್ಕಗೆ ಅಪರೂಪದ ಸ್ಥಾನವಿದೆ. ಅವರು ಸಂಖ್ಯಾ ದೃಷ್ಟಿಯಿಂದ ಕೆಲವೇ ವಚನಗಳನ್ನು ಬರೆದಿದ್ದರೂ ಅವು ಸತ್ವಯುತವಾಗಿವೆ. ಕಸ ಗುಡಿಸುವ ಕಾಯಕದಲ್ಲಿ ನಿರತಳಾಗಿದ್ದ ಸತ್ಯಕ್ಕ ಅಕ್ಕಮಹಾದೇವಿಯಂತೆ ವಿರಾಗಿಣಿಯ ಬದುಕನ್ನು ಸಾಗಿಸಿದವರು. ಕಾಯಕ ತತ್ವದೊಂದಿಗೆ ಶಿವಪಾರಮ್ಯ ಮತ್ತು ಏಕದೇವತಾ ನಿಷ್ಠೆ ಮೆರೆದಿದ್ದಾರೆ ಎಂದರು.ವಿಶ್ರಾಂತ ಉಪನ್ಯಾಸಕ ಶಿವಾನಂದ ಹೊಂಬಾಳ, ಡಾ.ಶ್ರೀನಿವಾಸ ಮೂರ್ತಿ, ರಂಗಕರ್ಮಿ ಎಂ.ಎಂ.ಪಿ. ವೀರೇಶ ಸ್ವಾಮಿ ಮಾತನಾಡಿದರು. ಶ್ರೀಪಾದ ಭಟ್, ಚಾಂದಪಾಷಾ, ವನಜಾಕ್ಷಿ, ಪುರುಷೋತ್ತಮ ಮತ್ತಿತರರಿದ್ದರು.