ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಮಾ.25ರಿಂದ ಆರಂಭವಾಗಲಿರುವ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಜಿಲ್ಲೆಯ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಸಮಸ್ಯೆಗಳಾಗದಂತೆ ಎಚ್ಚರಿಕೆ ವಹಿಸಲು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಸೂಚಿಸಿದ್ದಾರೆ. ಈ ಬಾರಿ ಜಿಲ್ಲೆಯಲ್ಲಿ ಜಿಲ್ಲೆಯಲ್ಲಿ 30,348 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿದ್ದಾರೆ.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಎಸ್‌ಎಸ್ಎಲ್‌ಸಿ ಪರೀಕ್ಷಾ ಸಿದ್ಧತೆ ಕುರಿತು ಹಮ್ಮಿಕೊಳ್ಳಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆ ಆಗಬಾರದು. ಮುಖ್ಯವಾಗಿ ಮಕ್ಕಳ ಓಡಾಟಕ್ಕೆ ಬಸ್ಸಿನ ತೊಂದರೆ ಆಗಬಾರದು, ಇದಕ್ಕಾಗಿ ಪ್ರತಿ ತಾಲೂಕುಗಳ ತಹಸೀಲ್ದಾರರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕೆಎಸ್ಆರ್‌ಟಿಸಿ ಅಧಿಕಾರಿಗಳು ಚರ್ಚಿಸಿ ಪರೀಕ್ಷೆಗೆ ಅನುಕೂಲವಾಗುವಂತೆ ಬಸ್ಸಿನ ಸಮಯ, ಸಾಗುವ ಮಾರ್ಗದ ಬಗ್ಗೆ ಪಟ್ಟಿ ತಯಾರಿಸಿ ವಿದ್ಯಾರ್ಥಿಗಳಿಗೆ ಮಾಹಿತಿಗೆ ನೀಡಬೇಕು ಎಂದು ಹೇಳಿದರು.ವಿದ್ಯಾರ್ಥಿಗಳ ವಿವರ: ಜಿಲ್ಲೆಯಲ್ಲಿ 27,663 ಶಾಲಾ ವಿದ್ಯಾರ್ಥಿಗಳು, 1,053 ಖಾಸಗಿ ಅಭ್ಯರ್ಥಿಗಳು, 1,632 ಪುನರಾವರ್ತಿತ ಅಭ್ಯರ್ಥಿಗಳು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟಾರೆ 30,348 ವಿದ್ಯಾರ್ಥಿಗಳು ಈ ಬಾರಿ ಎಸ್‌ಎಸ್ಎಲ್ಸಿ ಪರೀಕ್ಷೆಯನ್ನು ಎದುರಿಸಲಿದ್ದಾರೆ.
ತಾಲೂಕುವಾರು ವಿವರ:ಬಂಟ್ವಾಳ ತಾಲೂಕು ವ್ಯಾಪ್ತಿಯಲ್ಲಿ ಶಾಲಾ ಅಭ್ಯರ್ಥಿಗಳು 5,505, ಖಾಸಗಿ ಅಭ್ಯರ್ಥಿಗಳು 163, ಪುನರಾವರ್ತಿತ ಅಭ್ಯರ್ಥಿಗಳು 455, ಒಟ್ಟು 6,123. ಬೆಳ್ತಂಗಡಿ ತಾಲೂಕು ವ್ಯಾಪ್ತಿಯಲ್ಲಿ ಶಾಲಾ ಅಭ್ಯರ್ಥಿಗಳು 3,793, ಖಾಸಗಿ ಅಭ್ಯರ್ಥಿಗಳು 82, ಪುನರಾವರ್ತಿತ ಅಭ್ಯರ್ಥಿಗಳು 160, ಒಟ್ಟು 4,035. ಮಂಗಳೂರು ಉತ್ತರ ವ್ಯಾಪ್ತಿಯಲ್ಲಿ ಶಾಲಾ ಅಭ್ಯರ್ಥಿಗಳು 5,119, ಖಾಸಗಿ ಅಭ್ಯರ್ಥಿಗಳು 390, ಪುನರಾವರ್ತಿತ ಅಭ್ಯರ್ಥಿಗಳು 301, ಒಟ್ಟು 5,810. ಮಂಗಳೂರು ದಕ್ಷಿಣ ವ್ಯಾಪ್ತಿಯಲ್ಲಿ ಶಾಲಾ ಅಭ್ಯರ್ಥಿಗಳು 4,952, ಖಾಸಗಿ ಅಭ್ಯರ್ಥಿಗಳು 139, ಪುನರಾವರ್ತಿತ ಅಭ್ಯರ್ಥಿಗಳು 361, ಒಟ್ಟು 5452. ಮೂಡುಬಿದಿರೆ ತಾಲೂಕು ವ್ಯಾಪ್ತಿಯಲ್ಲಿ ಶಾಲಾ ಅಭ್ಯರ್ಥಿಗಳು 1,859, ಖಾಸಗಿ ಅಭ್ಯರ್ಥಿಗಳು 25, ಪುನರಾವರ್ತಿತ ಅಭ್ಯರ್ಥಿಗಳು 62, ಒಟ್ಟು 1,948. ಪುತ್ತೂರು ತಾಲೂಕು ವ್ಯಾಪ್ತಿಯಲ್ಲಿ ಶಾಲಾ ಅಭ್ಯರ್ಥಿಗಳು 4,627, ಖಾಸಗಿ ಅಭ್ಯರ್ಥಿಗಳು 153, ಪುನರಾವರ್ತಿತ ಅಭ್ಯರ್ಥಿಗಳು 215, ಒಟ್ಟು 4995. ಸುಳ್ಯ ತಾಲೂಕು ವ್ಯಾಪ್ತಿಯಲ್ಲಿ ಶಾಲಾ ಅಭ್ಯರ್ಥಿಗಳು 1,808, ಖಾಸಗಿ ಅಭ್ಯರ್ಥಿಗಳು 99, ಪುನರಾವರ್ತಿತ ಅಭ್ಯರ್ಥಿಗಳು 78, ಒಟ್ಟು 1,985 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ.
ಪರೀಕ್ಷಾ ಕೇಂದ್ರಗಳು:ಬಂಟ್ವಾಳದಲ್ಲಿ 17, ಬೆಳ್ತಂಗಡಿಯಲ್ಲಿ 13, ಮಂಗಳೂರು ಉತ್ತರ ವ್ಯಾಪ್ತಿಯಲ್ಲಿ 18, ಮಂಗಳೂರು ದಕ್ಷಿಣ ಭಾಗದಲ್ಲಿ 16, ಮೂಡುಬಿದಿರೆಯಲ್ಲಿ 5, ಪುತ್ತೂರು 13 ಹಾಗೂ ಸುಳ್ಯ ವಲಯದಲ್ಲಿ 6 ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 88 ಪರೀಕ್ಷಾ ಕೇಂದ್ರಗಳಿವೆ.
ಅಧಿಕಾರಿಗಳ ವಿವರ: ಮುಖ್ಯ ಅಧೀಕ್ಷಕರು 88, ಉಪಮುಖ್ಯ ಅಧೀಕ್ಷಕರು 42, ಕಸ್ಟೋಡಿಯನ್ 88, ಸ್ಥಾನಿಕ ಜಾಗೃತ ದಳದ ಕಾರ್ಯಕ್ಕೆ ಅಧಿಕಾರಿಗಳು 88, ಮೊಬೈಲ್ ಫೋನ್ ಸ್ವಾಧೀನಾಧಿಕಾರಿಗಳು 88, ಮಾರ್ಗಾಧಿಕಾರಿ 30, ಕೊಠಡಿ ಮೇಲ್ವಿಚಾರಕರಾಗಿ 1,588 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.ಜಿಪಂ ಸಿಇಒ ಡಾ. ಆನಂದ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಸಿ.ಬಿ., ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಸಿದ್ದಾರ್ಥ್ ಗೋಯಲ್, ಅಪರ ಜಿಲ್ಲಾಧಿಕಾರಿ ಡಾ. ಸಂತೋಷ ಕುಮಾರ್, ಸಹಾಯಕ ಆಯುಕ್ತರಾದ ಹರ್ಷವರ್ಧನ್, ಜುಬಿನ್ ಮೊಹಪಾತ್ರ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ವೆಂಕಟೇಶ್ ಎಸ್. ಪಟಗಾರ್, ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು, ನೋಡಲ್ ಅಧಿಕಾರಿಗಳು ಹಾಗೂ ಸಂಬಂಧಿಸಿದವರು ಇದ್ದರು.ಬಾಕ್ಸ್
ಮುನ್ನೆಚ್ಚರಿಕಾ ಕ್ರಮಗಳುಜಿಲ್ಲೆಯ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದ್ದು, ಅಭ್ಯರ್ಥಿಗಳ ಅನುಕೂಲಕ್ಕಾಗಿ ಸೂಕ್ತ ಸೂಚನಾ ಫಲಕಗಳ ವ್ಯವಸ್ಥೆ ಮಾಡಲಾಗಿದೆ. ಕುಡಿಯುವ ನೀರು, ಶೌಚಾಲಯ ಹಾಗೂ ಇತರ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸಲು ಮೊಬೈಲ್ ಸ್ವಾಧೀನಾಧಿಕಾರಿಯನ್ನು ನೇಮಕ ಮಾಡಲಾಗಿದೆ. ಪ್ರಶ್ನೆ ಪತ್ರಿಕೆ ಬಂಡಲ್‌ಗಳನ್ನು ತಾಲೂಕು/ ಜಿಲ್ಲಾ ಖಜಾನೆಯಿಂದ ಪರೀಕ್ಷಾ ಕೇಂದ್ರಗಳಿಗೆ ಸಾಗಾಟ ಮಾಡುವ ವಾಹನಕ್ಕೆ ಪೊಲೀಸ್ ಎಸ್ಕಾರ್ಟ್ ನಿಯೋಜಿಸಲಾಗುವುದು.
ಪರೀಕ್ಷೆ ಮುಗಿದ ನಂತರ ಉತ್ತರ ಪತ್ರಿಕೆಗಳನ್ನು ಸ್ವೀಕರಿಸಿ ಜಿಲ್ಲಾ ಕೇಂದ್ರದ (ಕಪಿತಾನಿಯೋ ಪ್ರೌಢ ಶಾಲೆ, ಪಂಪ್ ವೆಲ್) ಭದ್ರತಾ ಕೊಠಡಿಗೆ ಸುರಕ್ಷಿತವಾಗಿ ಸಾಗಿಸಲಾಗುವುದು.