ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿಮಸ್ಕತ್‌ನಲ್ಲಿ ‘ಬಿರುವ ಜವನೆರ್’ ಸಂಘಟನೆ ಆಶ್ರಯದಲ್ಲಿ ದಾರಸೈಟ್ ಶ್ರೀ ಕೃಷ್ಣ ದೇವಸ್ಥಾನದಲ್ಲಿ ಪೂಜಾಸಹಿತ ಚಾರಿತ್ರಿಕ ‘ಶ್ರೀ ಸತ್ಯನಾರಾಯಣ ವ್ರತ ಮಹಾತ್ಮೆ’ ಯಕ್ಷಗಾನ ತಾಳಮದ್ದಳೆ ರೂಪದಲ್ಲಿ ಜರುಗಿತು.ಹೊರ ರಾಷ್ಟ್ರದಲ್ಲಿ ಮೊದಲ ಬಾರಿ ಶನೀಶ್ವರ ಯಕ್ಷಗಾನ ಪ್ರದರ್ಶನ ಮಾಡಿದ ಕೀರ್ತಿ ಪಡೆದ ಮಂಗಳೂರು ಪಕ್ಷಿಕೆರೆಯ ಪದ್ಮನಾಭ ಶೆಟ್ಟಿಗಾರ್ ಸಂಚಾಲಕತ್ವದ ಶ್ರೀ ಶನೀಶ್ವರ ಭಕ್ತ ವೃಂದದವರಿಂದ ಸತ್ಯನಾರಾಯಣ ಪೂಜೆ ನಂತರ ತಾಳಮದ್ದಳೆ ಸಂಪನ್ನಗೊಂಡಿತು.ಕಳೆದ ಮೂರು ದಶಕಗಳಿಂದ ತಾಳಮದ್ದಳೆ ಕಾರ್ಯಕ್ರಮಗಳನ್ನು ದೇಶ ವಿದೇಶಗಳಲ್ಲಿ ನೀಡಿರುವ ತುಳುನಾಡಿನ ಈ ಖ್ಯಾತ ತಂಡವು ಕರ್ನಾಟಕ, ಕೇರಳ, ಮಹಾರಾಷ್ಟ್ರ ರಾಜ್ಯಗಳಲ್ಲಿ ಹಾಗೂ ದುಬೈ, ಅಬುಧಾಬಿ, ಮಸ್ಕತ್ ರಾಷ್ಟ್ರಗಳಲ್ಲಿ ಪೂಜಾ ಸಹಿತ ಶನೀಶ್ವರ ತಾಳಮದ್ದಳೆ ನಡೆಸಿ ಯಶಸ್ವಿಯಾಗಿದೆ.ಮಸ್ಕತ್‌ನಲ್ಲಿ ನೆಲೆಸಿರುವ ತುಳುನಾಡಿನ ಎಲ್ಲ ಸಮುದಾಯದವರು, ಕನ್ನಡ ಸಂಘದವರು ನಾಲ್ಕುಗಂಟೆಗಳ ಕಾಲ ಚಾಪೆಯಲ್ಲಿ ಕುಳಿತು ಕಥೆಯನ್ನು ಆಲಿಸಿದರು. ಸುಮಾರು ಒಂದೂವರೆ ಸಾವಿರ ಭಕ್ತರು ಪೂಜೆಯಲ್ಲಿ ಭಾಗವಹಿಸಿ ಪ್ರಸಾದ ಭೋಜನ ಸ್ವೀಕರಿಸಿದರು.ಹಿಮ್ಮೇಳದಲ್ಲಿ ಡಾ. ಪ್ರಖ್ಯಾತ್ ಶೆಟ್ಟಿ, ಪದ್ಮನಾಭ ಶೆಟ್ಟಿಗಾರ್ ಪಕ್ಷಿಕೆರೆ, ದಯಾನಂದ ಕೋಡಿಕಲ್ ಹಾಗೂ ಅರ್ಥಧಾರಿಗಳಾಗಿ ಕದ್ರಿ ನವನೀತ ಶೆಟ್ಟಿ, ವಿಜಯ ಕುಮಾರ್ ಶೆಟ್ಟಿ ಮೊಯ್ಲೊಟ್ಟು, ಸದಾಶಿವ ಆಳ್ವ ತಲಪಾಡಿ, ಶಶಿಕಾಂತ್ ಶೆಟ್ಟಿ ಕಾರ್ಲ, ಪ್ರಸನ್ನ ಶೆಟ್ಟಿ ಅತ್ತೂರುಗುತ್ತು, ಮನೋಹರ ಕುಂದರ್ ಎರ್ಮಾಳ್, ಪ್ರಜ್ವಲ್ ಶೆಟ್ಟಿ ಗುರುವಾಯನಕೆರೆ, ನಿತಿನ್ ಹುಣಸೆಕಟ್ಟೆ ಮತ್ತು ರವಿ ಭಟ್ ಪಡುಬಿದ್ರಿ ಅವರು ಸಹಕರಿಸಿದ್ದರು. ಎಲ್ಲ ಕಲಾವಿದರನ್ನು ಒಮಾನ್ ಲಾಂಛನದ ಪ್ರತಿಕೃತಿ ನೀಡಿ ಗೌರವಿಸಲಾಯಿತು.ಉಮೇಶ್ ಬಂಟ್ವಾಳ್ - ಪ್ರೇಮ ಹಾಗೂ ವಾಸು ಅಣ್ಣಯ್ಯ ಪೂಜಾರಿ - ಯಶೋಧ ದಂಪತಿ ಸತ್ಯನಾರಾಯಣ ಪೂಜಾ ಸಂಕಲ್ಪ ದೀಕ್ಷಿತರಾಗಿದ್ದರು.ಮುಖ್ಯ ಅತಿಥಿಗಳಾಗಿ ಅಲ್ ಅನ್ಸಾರಿ ಟ್ರೇಡಿಂಗ್‌ನ ಕಿರಣ್ ಆಶರ್ ದಂಪತಿ, ಮಸ್ಕತ್ ಫಾರ್ಮಸಿಯ ರವಿಕುಮಾರ್ ದಂಪತಿ ಪಾಲ್ಗೊಂಡಿದ್ದರು. ಗುರುಪ್ರಸಾದ್ ನಾನಿಲ್ ಸ್ವಾಗತಿಸಿದರು. ನಿತಿನ್ ಹುಣಸೆಕಟ್ಟೆ ವಂದಿಸಿದರು. ಕದ್ರಿ ನವನೀತ ಶೆಟ್ಟಿ ನಿರೂಪಿಸಿದರು.