ಸಾರಾಂಶ
ಈ ದಿನದ ವಿಶೇಷವಾಗಿ ಶ್ರೀ ಕೃಷ್ಣ ದೇವರಿಗೆ ಕಿರಿಯ ಶ್ರೀಪಾದರು ಗೀತೋಪದೇಶ ಅಲಂಕಾರವನ್ನು ಮಾಡಿದರು. ನಂತರ ಹಿರಿಯ ಶ್ರೀಪಾದರು ಮಹಾ ಪೂಜೆಯನ್ನು ನೆರವೇರಿಸಿದರು. ನಂತರ ಅಷ್ಟಾವಧಾನ ಸೇವೆಯೊಂದಿಗೆ ತೊಟ್ಟಿಲು ಪೂಜೆ ನಡೆಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಶ್ರೀ ಕೃಷ್ಣಮಠದಲ್ಲಿ ಭಾನುವಾರ ಸೌರ ಯುಗಾದಿಯ ಪ್ರಯುಕ್ತ ವಿಶೇಷವಾಗಿ ಶ್ರೀಕೃಷ್ಣ ಮುಖ್ಯಪ್ರಾಣ ದೇವರ ಚಿನ್ನದ ರಥ ಉತ್ಸವ ನಡೆಯಿತು. ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥರು ಹಾಗೂ ಕಿರಿಯ ಯತಿಗಳಾದ ಶ್ರೀ ಸುಶ್ರೀಂದ್ರ ತೀರ್ಥ ಶ್ರೀ ಪಾದರು ಉತ್ಸವದಲ್ಲಿ ಉಪಸ್ಥಿತರಿದ್ದರು.ಈ ದಿನದ ವಿಶೇಷವಾಗಿ ಶ್ರೀ ಕೃಷ್ಣ ದೇವರಿಗೆ ಕಿರಿಯ ಶ್ರೀಪಾದರು ಗೀತೋಪದೇಶ ಅಲಂಕಾರವನ್ನು ಮಾಡಿದರು. ನಂತರ ಹಿರಿಯ ಶ್ರೀಪಾದರು ಮಹಾ ಪೂಜೆಯನ್ನು ನೆರವೇರಿಸಿದರು. ನಂತರ ಅಷ್ಟಾವಧಾನ ಸೇವೆಯೊಂದಿಗೆ ತೊಟ್ಟಿಲು ಪೂಜೆ ನಡೆಯಿತು.
ಇದೇ ಸಂದರ್ಭದಲ್ಲಿ ಸೌರಯುಗಾದಿಯ ಪ್ರಯುಕ್ತ ಪರ್ಯಾಯ ಮಠದ ಪುರೋಹಿತರಾದ ಹೆರ್ಗ ವೇದವ್ಯಾಸ ಭಟ್ ಅವರು ಕ್ರೋಧಿ ನಾಮ ಸಂವತ್ಸರದ ಪಂಚಾಂಗ ಶ್ರವಣ ನಡೆಸಿದರು.ಪರ್ಯಾಯ ಶ್ರೀ ಪಾದರು ನೂತನ ಸಂವತ್ಸರದಲ್ಲಿ ಭಕ್ತಜನರಿಗೆ ಶುಭ ಆಶೀರ್ವಚನ ನೀಡಿ ಹರಸಿದರು.
ಶ್ರೀ ಕೃಷ್ಣಮಠದಲ್ಲಿ ನಿರಂತರ ಜ್ಞಾನಯಜ್ಞ ಕಾರ್ಯಕ್ರಮದ ಅಂಗವಾಗಿ ಭಾನುವಾರ ಭಗವದ್ಗೀತೆಯಲ್ಲಿ ಚಾತುರ್ವರ್ಣ್ಯ ಎಂಬ ವಿಷಯದ ಬಗ್ಗೆ ವಿದ್ವಾನ್ ಕೃಷ್ಣರಾಜ ಕುತ್ಪಾಡಿ ಅವರು ಪ್ರವಚನ ಮಂಗಳ ನಡೆಸಿದರು. ಅವರನ್ನು ಶ್ರೀಗಳು ಗೌರವಿಸಿದರು.