ಸಾರಾಂಶ
ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಬೆಳಗಾವಿ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಅಥಣಿ ಮತ್ತು ಕುಡಚಿ ಶಾಸಕರು ಚುನಾವಣೆಗೆ ಸಹಕಾರ ನೀಡಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಪುನರುಚ್ಚರಿಸಿದ್ದಾರೆ.
- ಬೆಳಗಾವಿ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟಕನ್ನಡಪ್ರಭ ವಾರ್ತೆ ಬೆಂಗಳೂರು
ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಬೆಳಗಾವಿ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಅಥಣಿ ಮತ್ತು ಕುಡಚಿ ಶಾಸಕರು ಚುನಾವಣೆಗೆ ಸಹಕಾರ ನೀಡಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಪುನರುಚ್ಚರಿಸಿದ್ದಾರೆ.ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಥಣಿ ಶಾಸಕ ಲಕ್ಷ್ಮಣ ಸವದಿ ಮತ್ತು ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣನವರ್ ತಮ್ಮ ಕ್ಷೇತ್ರಗಳಲ್ಲಿ ಪಕ್ಷದ ವಿರುದ್ಧ ಕೆಲಸ ಮಾಡಿದ್ದಾರೆ. ಅಥಣಿಯಲ್ಲಿ ಕಾಂಗ್ರೆಸ್‌ಗೆ ಹೆಚ್ಚಿನ ಮತಗಳು ಸಿಗುವ ಅವಕಾಶವಿತ್ತು. ಆದರೆ, ಯಾಕೆ ಹೆಚ್ಚು ಮತಗಳು ಸಿಗಲಿಲ್ಲ ಎಂಬುದನ್ನು ಸವದಿಯವರೇ ಹೇಳಬೇಕು. ಈ ಕುರಿತು ನಮಗೂ ಆತಂಕವಿದ್ದು ಅಲ್ಲಿ ನಮಗೆ ಒಳೇಟು ಬಿದ್ದಿರುವುದು ನಿಜ. ಇದರ ಬಗ್ಗೆ ಜಿಲ್ಲೆಯಲ್ಲಿ ಚರ್ಚೆ ಆಗಬೇಕಿದೆ ಎಂದು ಹೇಳಿದರು.
ಚಿಕ್ಕೋಡಿ ವಿಧಾನಸಭಾ ಭಾಗದಲ್ಲಿ ಪಕ್ಷದ ಎಲ್ಲ ಶಾಸಕರು ಪಕ್ಷಕ್ಕೆ ಮುನ್ನಡೆ ಸಾಧಿಸಲು ಸಹಾಯ ಮಾಡಿದ್ದಾರೆ. ಬಿಜೆಪಿಯ ಅಣ್ಣಾಸಾಹೇಬ ಜೊಲ್ಲೆ ಕ್ಷೇತ್ರದಲ್ಲೇ ಕಾಂಗ್ರೆಸ್‌ಗೆ ಹೆಚ್ಚು ಮತಗಳು ಸಿಕ್ಕಿವೆ. ಆದರೆ ಅಥಣಿಯಲ್ಲಿ ಸಿಗಲಿಲ್ಲ. ಕುಡಚಿ ಶಾಸಕರು ಕಡೆಯ ಎರಡು ದಿನ ಸಂಪರ್ಕಕ್ಕೆ ಸಿಗಲಿಲ್ಲ. ಅವರು ಮೊಬೈಲ್ ಸ್ವಿಚ್‌ಆಫ್ ಮಾಡಿಕೊಂಡು ಎಲ್ಲೋ ಮಲಗಿಬಿಟ್ಟಿದ್ದರು. ಮತದಾನದ ದಿನ ಶಾಸಕರು ಮತಗಟ್ಟೆ ಕೇಂದ್ರಗಳಲ್ಲಿ ಓಡಾಡುವುದು ಕರ್ತವ್ಯ. ಆದರೆ ಆವತ್ತು ಕಾಣಿಸಲಿಲ್ಲ. ಅದಕ್ಕಾಗಿ ಅನುಮಾನವಿದೆ. ಅಲ್ಲಿನ ಕಾರ್ಯಕರ್ತರನ್ನು ಕೇಳಿದರು ಶಾಸಕರು ಯಾರ ಪರವಾಗಿ ಕೆಲಸ ಮಾಡಿದ್ದಾರೆ ಎನ್ನುವುದು ಗೊತ್ತಾಗುತ್ತದೆ ಎಂದರು.