ಪುತ್ತೂರು: ಮಂಗಳೂರು ಕೃಷಿಕರ ಸಹಕಾರಿ ಸಂಘ ನಿಯಮಿತ (ಮಾಸ್ ಲಿಮಿಟೆಡ್) ಸಂಸ್ಥೆಯು ಚಾಲ್ತಿ ಸಾಲಿನಲ್ಲಿ ಒಟ್ಟು ರು. 30.37 ಲಕ್ಷ ಲಾಭ ದಾಖಲಿಸಿದ್ದು, ಈ ಪೈಕಿ ಸದಸ್ಯರಿಗೆ ಶೇ. 6ರಷ್ಟು ಡಿವಿಡೆಂಡ್‌ ಹಂಚಿಕೆ ಮಾಡಲು ಮಹಾಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಸಂಸ್ಥೆಯ ವಾರ್ಷಿಕ ಮಹಾಸಭೆಯು ಬೈಕಂಪಾಡಿಯಲ್ಲಿರುವ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಭಾನುವಾರ ಅಧ್ಯಕ್ಷ ಕೆ. ಸೀತಾರಾಮ ರೈ ಸವಣೂರು ಅಧ್ಯಕ್ಷತೆಯಲ್ಲಿ ನಡೆದು ಈ ತೀರ್ಮಾನ ಕೈಗೊಳ್ಳಲಾಯಿತು.

ಸಭೆಯಲ್ಲಿ ಮಾತನಾಡಿದ ಅಧ್ಯಕ್ಷ ಕೆ. ಸೀತಾರಾಮ ರೈ ಸವಣೂರು ಅವರು ಅಡಿಕೆ ವ್ಯಾಪಾರಕ್ಕೆ ಮತ್ತಷ್ಟು ವೇಗ ನೀಡುವ ಉದ್ದೇಶದಿಂದ ಕುಂದಾಪುರ ತಾಲೂಕಿನ ಆಜ್ರಿ ಹಾಗೂ ಸಿದ್ದಾಪುರಗಳಲ್ಲಿ ನೂತನ ಅಡಿಕೆ ಖರೀದಿ ಕೇಂದ್ರಗಳನ್ನು ಶೀಘ್ರವೇ ಆರಂಭಿಸಲಾಗುವುದು ಎಂದು ತಿಳಿಸಿದರು. ಜತೆಗೆ, ಸಂಘದ ಸುಸ್ಥಿರ ಬೆಳವಣಿಗೆಗೆ ಸರಕಾರದಿಂದ ದೊರೆಯಬೇಕಾದ ಅನುದಾನ ಹಾಗೂ ವಿವಿಧ ನೆರವುಗಳ ಕುರಿತು ಮನವಿ ಸಲ್ಲಿಸಲು ಶೀಘ್ರದಲ್ಲೇ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಾಗುವುದು ಎಂದು ತಿಳಿಸಿದರು.

ಸಂಘದ ಉಪಾಧ್ಯಕ್ಷ ಪ್ರದೀಪ್ ಯಡಿಯಾಲ್ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಕುಮಾರ್ ಬಿ. ಉಪಸ್ಥಿತರಿದ್ದರು.

ನಿರ್ದೇಶಕರಾದ ಭಾಸ್ಕರ ಎಸ್. ಕೋಟ್ಯಾನ್, ನಿತ್ಯಾನಂದ ಮುಂಡೋಡಿ, ಶ್ರೀರಾಮ ಪಿ.ಸಿ., ಮೋನಪ್ಪ ಶೆಟ್ಟಿ ಎಕ್ಕಾರು, ಅಶೋಕ್ ಬಲ್ಲಾಳ್, ರಾಜೀವಿ ರೈ, ಸುಧಾ ಎಸ್. ರೈ, ಬಿ. ನಾರಾಯಣ ನಾಯ್ಕ್, ಟಿ. ರಾಘವ ಶೆಟ್ಟಿ, ಪಿ. ರಾಜರಾಮ್ ಶೆಟ್ಟಿ, ಸತೀಶ್ ಕೆ., ಪುಷ್ಪರಾಜ ಅಡ್ಡ್ಯಂತಾಯ, ಬಾಲಕೃಷ್ಣ ಗೌಡ ಕೆ., ನಾಗಪ್ಪ ಪೂಜಾರಿ ಸೇರಿದಂತೆ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.