ಸಾರಾಂಶ
ಅನೇಕ ಮೇರು ನಟರು ರಂಗಭೂಮಿಯ ಹಿನ್ನೆಲೆಯಲ್ಲಿ ಸಿನಿಮಾ ಕ್ಷೇತ್ರಕ್ಕೆ ಬಂದಿದ್ದಾರೆ.
ಭಟ್ಕಳ: ಅಳಿವಿನಂಚಿನಲ್ಲಿರುವ ನಾಟಕ ಕಲೆಯನ್ನು ಉಳಿಸಿ ಬೆಳೆಸಿ ಪ್ರೋತ್ಸಾಹಿಸುವ ಪ್ರಯತ್ನ ಆಗಬೇಕಿದೆ ಎಂದು ಮಾಜಿ ಶಾಸಕ ಸುನೀಲ ನಾಯ್ಕ ಹೇಳಿದರು.
ಅವರು ತಾಲೂಕಿನ ತಲಗೋಡು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾದ ಶ್ರೀಗುರು ರಂಗಭೂಮಿ ಜನಪದ ಹಾಗೂ ಸಾಂಸ್ಕೃತಿಕ ಕಲಾ ಸಂಘದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಅನೇಕ ಮೇರು ನಟರು ರಂಗಭೂಮಿಯ ಹಿನ್ನೆಲೆಯಲ್ಲಿ ಸಿನಿಮಾ ಕ್ಷೇತ್ರಕ್ಕೆ ಬಂದಿದ್ದಾರೆ. ನಾವು ನಮ್ಮ ಪರಂಪರೆಯನ್ನು ಮರೆತು ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಮೆರೆಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ನಮ್ಮ ಕಲೆ ನಶಿಸಿ ಹೋಗಲು ಕಾರಣವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.ನಾಟಕ ಕಲೆ ಜೀವಂತವಾಗಿರಿಸಬೇಕು. ನಾಟಕ ನೋಡುವ ಖುಷಿಯೇ ಬೇರೆಯದ್ದು ಎಂದರು.
ಸಂಘದ ಅಧ್ಯಕ್ಷ ಜಗದೀಶ ನಾಯ್ಕ ಮಾತನಾಡಿ, ತಾಲೂಕಿನ ಹಿರಿಯ ಕಲಾವಿದರ ಆಸಕ್ತಿಯಿಂದ ಸಂಘ ಸ್ಥಾಪನೆಯಾಯಿತು, ಇದೀಗ ಅದನ್ನು ನಾವೆಲ್ಲ ಸೇರಿ ಉಳಿಸಿಕೊಂಡು ಹೋಗಬೇಕಿದೆ ಎಂದರು. ಹಿರಿಯ ಕಲಾವಿದ ಕೆ.ಆರ್.ನಾಯ್ಕ ಮಾತನಾಡಿದರು.ಸಂಘದ ಪ್ರಧಾನ ಕಾರ್ಯದರ್ಶಿ ದೇವನಾಯ್ಕ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾವಿನಕುರ್ವೆ ಗ್ರಾಪಂ ಸದಸ್ಯ ದಾಸ ನಾಯ್ಕ, ತಲಗೋಡು ನಾಮಧಾರಿ ಅಭಿವೃದ್ಧಿ ಸಂಘದ ಅಧ್ಯಕ್ಷ ವೆಂಕಟರಮಣ ನಾಯ್ಕ, ತಲಗೋಡ ಶಾರದೋತ್ಸವ ಸಮಿತಿ ಅಧ್ಯಕ್ಷ ಶ್ರೀಧರ ನಾಯ್ಕ, ಹಿರಿಯ ಕಲಾವಿದ ಅಶೋಕ ಮಹಾಲೆ ಉಪಸ್ಥಿತರಿದ್ದರು.
ಸಂಘದ ಸದಸ್ಯರಾದ ನಾರಾಯಣ ನಾಯ್ಕ ಸ್ವಾಗತಿಸಿದರು. ಮಂಜುನಾಥ ನಾಯ್ಕ ವಂದಿಸಿದರು. ನಾರಾಯಣ ನಾಯ್ಕ ನಿರೂಪಿಸಿದರು. ಕಾರ್ಯಕ್ರಮದಲ್ಲಿ ರಂಗಭೂಮಿಯಲ್ಲಿ ತೊಡಗಿಸಿಕೊಂಡ ಅನೇಕ ಹಿರಿಯ ಕಲಾವಿದರನ್ನು ಗುರುತಿಸಿ ಗೌರವಿಸಲಾಯಿತು. ಸಭಾ ಕಾರ್ಯಕ್ರಮದಲ್ಲಿ ನಡೆದ ಹೃದಯ ಮೀಟಿದ ಕೋಗಿಲೆ ನಾಟಕ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.ಭಟ್ಕಳದ ತಲಗೋಡಿನಲ್ಲಿ ಗುರು ರಂಗಭೂಮಿ ಜನಪದ ಹಾಗೂ ಸಾಂಸ್ಕೃತಿಕ ಕಲಾ ಸಂಘದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಮಾಜಿ ಶಾಸಕ ಸುನೀಲ ನಾಯ್ಕ ಉದ್ಗಾಟಿಸಿದರು.