ಜಾನಪದ, ರಂಗಭೂಮಿ, ಕಲಾವಿದರನ್ನು ಕಲೆ ಉಳಿಸಿ ಬೆಳೆಸಿ: ಹಿರಿಯ ನಟಿ ಉಮಾಶ್ರೀ

| Published : Aug 23 2024, 01:09 AM IST

ಜಾನಪದ, ರಂಗಭೂಮಿ, ಕಲಾವಿದರನ್ನು ಕಲೆ ಉಳಿಸಿ ಬೆಳೆಸಿ: ಹಿರಿಯ ನಟಿ ಉಮಾಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ರಂಗಭೂಮಿ ನಟನೆಯಿಂದ ಸಿನಿಮಾ ಹಾಗೂ ಧಾರವಾಹಿಗಳು ಬೆಳಕಿಗೆ ಬಂದವು. ಜಾನಪದ, ರಂಗಭೂಮಿ ಕಲೆ ಹಾಗೂ ಕಲಾವಿದರನ್ನು ಉಳಿಸುವ ಬೆಳೆಸುವ ಜವಾಬ್ದಾರಿ ನಮ್ಮೇಲ್ಲರ ಮೇಲಿದೆ. ಮಳವಳ್ಳಿ ತಾಲೂಕು ಮಂಟೇಸ್ವಾಮಿ ಸಿದ್ದಪ್ಪಾಜಿ, ಮಹದೇಶ್ವರ ನಾಡಾಗಿದ್ದು, ಅವರ ಅನುಯಾಯಿಗಳು ಬಹಳ ಮಂದಿ ಜಾನಪದ ಕಲೆಯನ್ನು ಮೈಗೂಡಿಸಿಕೊಂಡು ಶ್ರೇಷ್ಠ ಕಲಾವಿದರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಪೌರಾಣಿಕ ನಾಟಕಗಳಲ್ಲಿ ಸ್ತ್ರೀ ಪಾತ್ರಗಳನ್ನು ಗಂಡಸರೇ ನಿರ್ವಹಿಸುತ್ತಿದ್ದ ಕಾಲಘಟ್ಟದಲ್ಲಿ ಚಂದನ ವನಕ್ಕೆ ಮೊಟ್ಟ ಮೊದಲ ಬಾರಿಗೆ ಕಾಲಿಟ್ಟ ಮಳವಳ್ಳಿ ಸುಂದ್ರಮ್ಮ ರಂಗಭೂಮಿ ಕಲೆಯಲ್ಲಿ ಹೊಸ ಇತಿಹಾಸಕ್ಕೆ ನಾಂದಿಯಾಡಿದ ಕಲಾವಿದೆ ಎಂದು ಚಲನಚಿತ್ರ ಹಿರಿಯ ನಟಿ ಉಮಾಶ್ರೀ ಸ್ಮರಿಸಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ರಂಗ ಬಂಡಿಯಿಂದ ಹಮ್ಮಿಕೊಂಡಿದ್ದ ಮಳವಳ್ಳಿ ಸುಂದರಮ್ಮ ಸ್ಮರಣಾರ್ಥ ರಂಗೋತ್ಸವದಲ್ಲಿ ರಂಗ ಸನ್ಮಾನ ಸ್ವೀಕರಿಸಿ ಮಾತನಾಡಿ, 1905ರಲ್ಲಿ ಮಳವಳ್ಳಿಯಲ್ಲಿ ಜನಿಸಿದ ಸುಂದ್ರಮ್ಮ ತಮ್ಮ ಪ್ರತಿಭೆ ಮೂಲಕ ನಾಟಕ ರಂಗ ಪ್ರವೇಶ ಮಾಡಿ ಉತ್ತರ ಕರ್ನಾಟಕದಲ್ಲಿ ಮಹಿಳಾ ನಾಟಕ ಕಂಪನಿಯನ್ನು ಪ್ರಾರಂಭಿಸಿದ ಕೀರ್ತಿ ಸಲ್ಲುತ್ತದೆ ಎಂದರು.

ನಾಟಕ ರಂಗದಲ್ಲಿ ಸುಂದ್ರಮ್ಮ ಮಾಡಿದ ಸಾಧನೆಗೆ ನಾಟ್ಯ ಶಾರದೆ ಎಂಬ ಬಿರುದು ನೀಡಿ ಸನ್ಮಾನಿಸಲಾಗಿದೆ. ಜೊತೆಗೆ ಹಲವು ಕನ್ನಡ ಚಲನಚಿತ್ರಗಳಲ್ಲಿಯೂ ತಮ್ಮ ಅಭಿನಯದ ಮೂಲಕ ಗಮನಸೆಳೆದಿದ್ದಾರೆಂದು ಹೇಳಿದರು.

ರಂಗಭೂಮಿ ನಟನೆಯಿಂದ ಸಿನಿಮಾ ಹಾಗೂ ಧಾರವಾಹಿಗಳು ಬೆಳಕಿಗೆ ಬಂದವು. ಜಾನಪದ, ರಂಗಭೂಮಿ ಕಲೆ ಹಾಗೂ ಕಲಾವಿದರನ್ನು ಉಳಿಸುವ ಬೆಳೆಸುವ ಜವಾಬ್ದಾರಿ ನಮ್ಮೇಲ್ಲರ ಮೇಲಿದೆ. ಮಳವಳ್ಳಿ ತಾಲೂಕು ಮಂಟೇಸ್ವಾಮಿ ಸಿದ್ದಪ್ಪಾಜಿ, ಮಹದೇಶ್ವರ ನಾಡಾಗಿದ್ದು, ಅವರ ಅನುಯಾಯಿಗಳು ಬಹಳ ಮಂದಿ ಜಾನಪದ ಕಲೆಯನ್ನು ಮೈಗೂಡಿಸಿಕೊಂಡು ಶ್ರೇಷ್ಠ ಕಲಾವಿದರಾಗಿದ್ದಾರೆ ಎಂದರು.

ಡಾ.ರಾಮನೋಹರ ಲೋಹಿಯಾ ವಿಚಾರ ವೇದಿಕೆ ಅಧ್ಯಕ್ಷ ದಡದಪುರ ಶಿವಣ್ಣ ಮಾತನಾಡಿ, ಆಧುನಿಕ ಯುಗದ ಭರಟೆಯಲ್ಲಿ ಯುವ ಸಮೂಹ ಸಾಮಾಜಿಕ ಜಾಲತಾಣದಲ್ಲಿ ಮೈಮರೆಯುತ್ತಿದೆ. ಪ್ರಸ್ತುತ ಮಾನವೀಯ ಮೌಲ್ಯ ಹಾಗೂ ಸಂಸ್ಕೃತಿ ಸಂಸ್ಕಾರವನ್ನು ಕಲಿಸುವ ಜಾನಪದ ಹಾಗೂ ರಂಗಭೂಮಿ ಕಲೆಗಳು ಹೆಚ್ಚಾಗಿ ಪ್ರದರ್ಶನಗೊಳ್ಳಬೇಕೆಂದು ಅಭಿಪ್ರಾಯಪಟ್ಟರು.

ರಂಗಭೂಮಿ ಕಲೆಯಲ್ಲಿ ಅಂದಿನ ಕಾಲದಲ್ಲಿಯೇ ಅಪಾರವಾದ ಸಾಧನೆ ಮಾಡಿದ ಮಳವಳ್ಳಿ ಸುಂದ್ರಮ್ಮ ಹೆಸರಿನಲ್ಲಿ ರಂಗಭೂಮಿ, ಚಲನಚಿತ್ರ ಹಾಗೂ ರಾಜಕೀಯದಲ್ಲಿ ಅಪಾರ ಸಾಧನೆ ಮಾಡಿದ ಉಮಾಶ್ರೀ ಅವರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಪ್ರಶಸ್ತಿಗೆ ಮತ್ತಷ್ಟು ಮೌಲ್ಯ ಹೆಚ್ಚಿಸಿದೆ ಎಂದರು.

ಪ್ರಜಾಪ್ರಭುತ್ವ ಉಳಿಯಲು ಹಾಗೂ ಪ್ರತಿಯೊಬ್ಬರು ವಿದ್ಯಾವಂತರಾಗಲು ಡಾ.ಬಿ.ಆರ್.ಅಂಬೇಡ್ಕರ್ ಕೊಟ್ಟಂತಹ ಸಂವಿಧಾನವೇ ಕಾರಣವಾಗಿದೆ. ಅಂಬೇಡ್ಕರ್‌ರವರ ಸಂವಿಧಾನ, ಜೀವನ ಮತ್ತು ಅದರ್ಶಗಳನ್ನು ಆಯಾ ಭಾಷೆಯ ಅನುಗುಣವಾಗಿ ಪಠ್ಯ ಪುಸ್ತಕಗಳಲ್ಲಿ ಅಳವಡಿಸಬೇಕೆಂದು ಒತ್ತಾಯಿಸಿದರು.

ಪ್ರತಿಯೊಬ್ಬರು ಪ್ರತಿಭೆಗೆ ಅನುಗುಣವಾಗಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿ ಹುಟ್ಟೂರು ಹಾಗೂ ಜಿಲ್ಲೆಗೆ ಕೀರ್ತಿ ತಂದಾಗ ಮಾತ್ರ ಹುಟ್ಟುವಿಕೆಗೆ ಸಾರ್ಥಕತೆ ಬರುತ್ತದೆ. ಹಣ ಆಸ್ತಿ ಎಂದಿಗೂ ಹೆಸರು ಹೇಳುವುದಿಲ್ಲ. ಸಾಧನೆಯೊಂದೇ ಹೆಸರನ್ನು ಬೆಳೆಗಿಸುತ್ತದೆ ಎನ್ನುವುದಕ್ಕೆ ರಂಗಭೂಮಿ ಕಲೆಯಲ್ಲಿ ಅಪಾರ ಸಾಧನೆ ಮಾಡಿದ ಮಳವಳ್ಳಿ ಸುಂದ್ರಮ್ಮ ಅವರೇ ಕಾರಣ ಎಂದು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ರಂಗ ಕರ್ಮಿಗಳಾದ ಶ್ರೀನಿವಾಸ ಜಿ ಕಪ್ಪಣ್ಣ, ಲೊಕೇಶ್ ಹಾಗೂ ಮಳವಳ್ಳಿ ಸುಂದರಮ್ಮ ಕುಟುಂಬದವರು, ರಂಗ ಬಂಡಿಯ ಸಂಚಾಲಕರಾದ ಮಧು ಮಳವಳ್ಳಿ, ಸಂಘಟಕರಾದ ಎನ್.ಎಲ್. ಭರತ್ ರಾಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ವೈ.ಎಸ್.ಪುಟ್ಟಣ್ಣಯ್ಯ ಮತ್ತು ತಂಡದಿಂದ ಸುಂದರಮ್ಮ ಅಭಿನಯದ ರಂಗ ಗೀತೆ ಹಾಗೂ ಅನುರಕ್ತೆ ನಾಟಕದ ಏಕ ವೇಕ್ತಿ ಪ್ರದರ್ಶನವನ್ನು ಉಮಾಶ್ರೀ ಮಧು ಅವರು ನಡೆಸಿಕೊಟ್ಟರು.