ಸಾರಾಂಶ
ಬಾಲಕರ ಮತ್ತು ಬಾಲಕಿಯರ ತ್ರೋಬಾಲ್ ಪಂದ್ಯಾವಳಿ ಇಲ್ಲಿನ ಕುತ್ಯಾರು ವಿದ್ಯಾದಾಯಿನಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೇಂಜ ಶ್ರೀಧರ ತಂತ್ರಿಯವರ ನೇತೃತ್ವದಲ್ಲಿ ನಡೆಯಿತು.
ಕನ್ನಡಪ್ರಭ ವಾರ್ತೆ ಕಾಪು
ಉಡುಪಿ ವಲಯ ಮಟ್ಟದ ೨೦೨೪ - ೨೫ನೇ ಸಾಲಿನ ಪ್ರಾಥಮಿಕ ಶಾಲೆಗಳ ಬಾಲಕರ ಮತ್ತು ಬಾಲಕಿಯರ ತ್ರೋಬಾಲ್ ಪಂದ್ಯಾವಳಿ ಇಲ್ಲಿನ ಕುತ್ಯಾರು ವಿದ್ಯಾದಾಯಿನಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೇಂಜ ಶ್ರೀಧರ ತಂತ್ರಿಯವರ ನೇತೃತ್ವದಲ್ಲಿ ನಡೆಯಿತು.ವಿದ್ಯಾವರ್ಧಕ ಸಂಘದ ಆಡಳಿತಾಧಿಕಾರಿ ಪ್ರೊ. ವೈ.ಭಾಸ್ಕರ ಶೆಟ್ಟಿ ಪಂದ್ಯಾವಳಿಗಳನ್ನು ಉದ್ಘಾಟಿಸಿ, ಕ್ರೀಡಾ ಚಟುವಟಿಕೆಗಳು ಉತ್ತಮ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಪೂರಕವಾಗಿದ್ದು, ವಿದ್ಯಾರ್ಥಿಗಳು ಇದರಲ್ಲಿ ಪಾಲ್ಗೊಳ್ಳುವಂತೆ ಹೆತ್ತವರು ಮತ್ತು ಶಿಕ್ಷಕರು ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.
ಕುತ್ಯಾರು ಪಂಚಾಯಿತಿ ಅಧ್ಯಕ್ಷ ಜನಾರ್ದನ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ತಾಲೂಕು ದೈಹಿಕ ಪರಿವೀಕ್ಷಣಾಧಿಕಾರಿ ಚಂದ್ರಶೇಖರ ಸುವರ್ಣ ಮತ್ತು ಶಾಲಾ ಮುಖ್ಯೋಪಾಧ್ಯಾಯಿನಿ ಶರ್ಮಿಳಾ ಉಪಸ್ಥಿತರಿದ್ದರು.ಪಂದ್ಯಾಕೂಟದಲ್ಲಿ ೧೨ ಬಾಲಕಿಯರ ಮತ್ತು ೯ ಬಾಲಕರ ತಂಡಗಳು ಭಾಗವಹಿಸಿತ್ತು. ಬಾಲಕರ ವಿಭಾಗದಲ್ಲಿ ವಿದ್ಯಾಪ್ರಸಾರ ವಿದ್ಯಾಮಂದಿರ ಹೆಜಮಾಡಿ ಶಾಲಾ ತಂಡ ಪ್ರಥಮ ಹಾಗೂ ಶಾಂತಿನಿಕೇತನ ಅಲೆವೂರು ಶಾಲಾ ತಂಡ ದ್ವಿತೀಯ ಸ್ಥಾನ ಗಳಿಸಿತು. ಬಾಲಕಿಯರ ವಿಭಾಗದಲ್ಲಿ ವಿದ್ಯಾದಾಯಿನಿ ಹಿರಿಯ ಪ್ರಾಥಮಿಕ ಶಾಲಾ ತಂಡ ಪ್ರಥಮ ಸ್ಥಾನಗಳಿಸಿ, ವಿದ್ಯಾಪ್ರಸಾರ ವಿದ್ಯಾಮಂದಿರ ಹೆಜಮಾಡಿ ಶಾಲಾ ತಂಡ ದ್ವಿತೀಯ ಸ್ಥಾನ ತನ್ನದಾಗಿಸಿಕೊಂಡಿತು.
ಕಾಪು ಶಾಸಕ ಹಾಗೂ ವಿದ್ಯಾವರ್ಧಕ ಸಂಘ ಅಧ್ಯಕ್ಷ ಸುರೇಶ್ ಪಿ. ಶೆಟ್ಟಿ ಗುರ್ಮೆ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು. ಮುಖ್ಯೋಪಾಧ್ಯಾಯಿನಿ ಶರ್ಮಿಳಾ ಸ್ವಾಗತಿಸಿದರು. ಶಿಕ್ಷಕಿಯರಾದ ಸವಿತಾ ವಂದಿಸಿದರು. ಕುಸುಮ ಕಾರ್ಯಕ್ರಮ ನಿರೂಪಿಸಿದರು.