ಸಾರಾಂಶ
ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಜಾನಪದ ಕಲೆಗೆ ಹೆಚ್ಚು ಮಹತ್ವವಿದೆ. ಆಧುನಿಕ ಅಬ್ಬರಕ್ಕೆ ಸಿಲುಕಿರುವ ಜಾನಪದ ಕಲೆಗಳು ನಸಿಶಿ ಹೋಗದಂತೆ ಮುಂದಿನ ಪೀಳಿಗೆಗೆ ಬೆಳಸಬೇಕು.
ಕನ್ನಡಪ್ರಭ ವಾರ್ತೆ ಅಥಣಿ
ಮುಂದಿನ ಪೀಳಿಗೆಗೆ ಮಾದರಿಯಾಗಿರುವ ಜಾನಪದ ಕಲೆಗಳು ನಶಿಸಿ ಹೋಗುತ್ತಿವೆ. ಅವುಗಳನ್ನು ಉಳಿಸಿ- ಬೆಳೆಸುವುದರ ಜೊತೆಗೆ ಮುಂದಿನ ಪೀಳಿಗೆಗೆ ತಿಳಿಸಿಕೊಡವುದು ಅವಶ್ಯಕವಾಗಿದೆಂದು ಬೆಳಗಲಿ ಖ್ಯಾತ ಜಾನಪದ ಕಲಾವಿದ, ಸಾಹಿತಿ ಶ್ರೀಕಾಂತ ಗುರುರಾಜ ಕೆಂದೋಳಿ ಹೇಳಿದರು.ಇಲ್ಲಿನ ಕೆಎಲ್‌ಇ ಸಂಸ್ಥೆಯ ಎಸ್ಎಸ್ಎಂಎಸ್ ಮಹಾವಿದ್ಯಾಲಯದ ಕನ್ನಡ ವಿಭಾಗದಿಂದ ನಡೆದ ಜಾನಪದ ಜಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಜಾನಪದ ಕಲೆಗೆ ಹೆಚ್ಚು ಮಹತ್ವವಿದೆ. ಆಧುನಿಕ ಅಬ್ಬರಕ್ಕೆ ಸಿಲುಕಿರುವ ಜಾನಪದ ಕಲೆಗಳು ನಸಿಶಿ ಹೋಗದಂತೆ ಮುಂದಿನ ಪೀಳಿಗೆಗೆ ಬೆಳಸಬೇಕು. ಅದನ್ನು ಉಳಿಸಿ ಬೆಳೆಸುವ ಕೆಲಸ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.ಜನಪದ ಹಾಡುಗಳು ಬಾಯಿಂದ ಬಾಯಿಗೆ ಬಂದ ಶ್ರೀಮಂತ ಸಾಹಿತ್ಯ. ಸತ್ಯ ಎಲ್ಲಿದೊ ಅಲ್ಲಿ ಶಿವನಿದ್ದಾನೆ ಅದಕ್ಕಾಗಿಯೆ ಸತ್ಯಂ ಶಿವಂ ಸುಂದರಂ ಎಂದು ಹೇಳುತ್ತಾ ನಮ್ಮ ತಾಯಂದಿರು ಶ್ರೀಮಂತ ಜನಪದ ಸಾಹಿತ್ಯ ಕೊಟ್ಟು ಹೋಗಿದ್ದಾರೆ. ಓದುಬರಹ ಬಾರದೆ ಇದ್ದರೂ ಕೂಡ ಗಣಿತವನ್ನು ಸುಲಲಿತವಾಗಿ ಬಳಸುತ್ತಿದ್ದರು. ನೈತಿಕ ಮೌಲ್ಯಗಳು ಹಾಸುಹೊಕ್ಕಾಗಿವೆ. ಬದುಕಿನ ಘಟನೆಗಳನ್ನು ಹಾಡಿನ ಮೂಲಕ ತಿಳಿಸುತ್ತಾ ಜನಪದರ ಬದುಕಿಗೂ ಆಧುನಿಕ ಬದುಕಿಗೂ ಇರುವ ವ್ಯತ್ಯಾಸಗಳನ್ನು, ಒಡಪುಗಳ ಮೂಲಕ ಹೇಳುತ್ತಾ ಬದುಕಿನುದ್ದಕ್ಕು ಹಾಸ್ಯ ತುಂಬಿದೆ ಎಂದರು. ಆಧುನಿಕತೆಗೆ ಮಾರುಹೋಗಿ ನಮ್ಮ ಸಂಸ್ಕೃತಿ, ಕಲೆ, ಸಾಹಿತ್ಯ, ಆಹಾರ ಪದ್ಧತಿ ಮರೆಯಬಾರದು. ದೈಹಿಕ ಮತ್ತು ಮಾನಸಿಕ ಸದೃಢತೆಗಾಗಿ ಉತ್ತಮ ಆಹಾರ ಪದ್ಧತಿ ರೂಡಿಸಿಕೊಳ್ಳಬೇಕೆಂದರು.
ಮಹಾವಿದ್ಯಾಲಯದ ಸ್ಥಾನಿಕ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಡಾ.ಮಲ್ಲಿಕಾರ್ಜುನ ಹಂಜಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಾ ವಿದ್ಯಾಲಯದಲ್ಲಿ ಆಯೋಜಿಸಿರುವ ಜಾನಪದ ಜಾತ್ರೆ ಸಂಭ್ರಮ ನೋಡಿದರೆ ೨೦೦ ವರ್ಷಗಳ ಹಿಂದಿನ ಬದುಕಿಗೆ ನಾವಿಂದು ಹೋಗಿದ್ದೇವೆ ಎಂದು ಭಾಸವಾಗುತ್ತಿದೆ. ಇತ್ತೀಚಿಗೆ ಚಿಕ್ಕಮಂಗಳೂರಿನಲ್ಲಿ ನಡೆದ ಜಾನಪದ ಸಮ್ಮೇಳನ ನೆನಪಿಸಿಕೊಳ್ಳುತ್ತ ಜನಪದರ ಬದುಕು ಹಾಡು, ಒಡಪು, ಒಗಟು, ಗಾದೆಗಳಿಂದ ಕೂಡಿದೆ. ಜನಪದ ಸಾಹಿತ್ಯಕ್ಕೆ ಕೊನೆಯೇ ಇಲ್ಲ. ಇಂತಹ ಜನಪದ ಶ್ರೀಮಂತ ಸಂಸ್ಕೃತಿಯನ್ನು ಇಂದಿನ ಯುವ ಜನಾಂಗ ಗೌರವಿಸುವುದರೊಂದಿಗೆ ಮುಂದಿನ ಜನಾಂಗಕ್ಕೂ ಅದನ್ನು ಪರಿಚಯಿಸಬೇಕಾದ ಅಗತ್ಯವಿದೆ. ಅದಕ್ಕೆ ಈ ಕಾರ್ಯಕ್ರಮ ಪೂರಕವಾಗಿದೆ ಎಂದರು.ಆಹಾರಮೇಳ:
ಗ್ರಾಮೀಣ ಪ್ರದೇಶದ ವೇಷಭೂಷಣಗಳಲ್ಲಿ ಆಗಮಿಸಿದ ಕಾಲೇಜು ವಿದ್ಯಾರ್ಥಿಗಳಿಂದ ಜಾನಪದ ಸೊಗಡಿನ ನೃತ್ಯಗಳು ಪ್ರದರ್ಶನಗೊಂಡವು. ಜಾನಪದ ಜಾತ್ರೆ ನಿಮಿತ್ತ ವಿದ್ಯಾರ್ಥಿಗಳಿಂದ ಆಹಾರಮೇಳ ನಡೆಯಿತು. ಉತ್ತರ ಕರ್ನಾಟಕದ ಖ್ಯಾತ ಖಾಧ್ಯಗಳಾದ ಶೇಂಗಾ ಹೋಳಿಗೆ, ಮಾದೆಲಿ, ಸಜ್ಜಿ ರೊಟ್ಟಿ, ಜೋಳದ ರೋಟ್ಟಿ, ಮೊಸರು ಇನ್ನಿತರ ತಿಂಡಿ ತಿನಿಸುಗಳು ಪ್ರದರ್ಶನ ಹಾಗೂ ಗ್ರಾಮೀಣ ಶೈಲಿ ಸವಿ ಭೋಜನ ವಿಶೇಷವಾಗಿತ್ತು.ದೇಶಿ ಉಡುಗೆಯಲ್ಲಿ ವಿದ್ಯಾರ್ಥಿನಿಯರು ಇಳಕಲ್ಲ ಸೀರೆ, ಗುಳ್ಳೇದ ಗುಡ್ಡದ ಕುಬ್ಬಸ ತೊಟ್ಟು, ಮೂಗಿಗೆ ಮುಗುತಿ ಧರಸಿ ತುರುಬಿಗೆ ಹೂ ಮುಡಿದುಕೊಂಡಿದ್ದು ಕಾರ್ಯಕ್ರಮಕ್ಕೆ ಮೆರಗು ತಂದಿತ್ತು.
ಪ್ರಾಚಾರ್ಯ ಡಾ.ಬಿ.ಎಸ್.ಕಾಂಬಳೆ ಸ್ವಾಗತಿಸಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಭಾರತಿ.ಎಸ್.ಗದ್ದಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಭು ನೀರಲಗಿ ಅತಿಥಿ ಪರಿಚಯಿಸಿದರು. ಚೇತನ ಧರಿಗೌಡರ ಮತ್ತು ಮಹಾದೇವಿ ಜಕ್ಕಪನವರ ನಿರೂಪಿಸಿದರು. ಸಂಯೋಜಕ ಡಾ.ಪ್ರಶಾಂತ ಮಗದುಮ ವಂದಿಸಿದರು. ಈ ವೇಳೆ ಸ್ಥಾನಿಕ ಆಡಳಿತ ಮಂಡಳಿ ಸದಸ್ಯರಾದ ಪ್ರಕಾಶ ಪಾಟೀಲ ಹಾಗೂ ಆಶೋಕ ಬುರ್ಲಿ ಮತ್ತು ಪ್ರೊ.ಪಿ.ಕೊಣ್ಣೂರ ಹಾಗೂ ಬೋಧಕ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.