ಸಾರಾಂಶ
ಕಾರಟಗಿ: ಜೀವನಾಡಿ ತುಂಗಭದ್ರಾ ನದಿ ಉಳಿಸಿ ಸಂರಕ್ಷಿಸುವ ಅವಶ್ಯಕತೆ ಎದುರಾಗಿದ್ದು, ಭವಿಷ್ಯತಿಗೆ ನಮ್ಮೆಲ್ಲರ ಉಳಿವಿಗಾಗಿ ತುಂಗಭದ್ರಾ ನದಿ ಮಲೀನವಾಗದಂತೆ ಕಾಯ್ದು ಕೊಳ್ಳಬೇಕಾಗಿದೆ, ಅದಕ್ಕಾಗಿ ತುಂಗಭದ್ರಾ ಉಳಿಸಿ ಎಂದು ಆಂದೋಲನ ಮಾಡಲಾಗುತ್ತಿದೆ ಎಂದು ರಾಷ್ಟ್ರೀಯ ಸ್ವಾಭಿಮಾನ ಆಂದೋಲನದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಪಾಟೀಲ ವೀರಾಪುರ ಹೇಳಿದರು.
ಇಲ್ಲಿನ ಶ್ರೀಶರಣಬಸವೇಶ್ವರ ದೇವಸ್ಥಾನದಲ್ಲಿ ನವದೆಹಲಿಯ ರಾಷ್ಟ್ರೀಯ ಸ್ವಾಭಿಮಾನ ಆಂದೋಲನ, ಶಿವಮೊಗ್ಗದ ಪರ್ಯಾವರಣ ಟ್ರಸ್ಟ್ ಮತ್ತು ಜಿಲ್ಲಾ ನಿರ್ಮಲ ತುಂಗಭದ್ರಾ ಅಭಿಯಾನ ಸಮಿತಿ ಸಹಯೋಗದಲ್ಲಿ ನಡೆದ ನಿರ್ಮಲ ತುಂಗಭದ್ರಾ ಅಭಿಯಾನದ ಕಿಷ್ಕಿಂದೆಯಿಂದ ಮಂತ್ರಾಲಯದವರೆಗೆ ನಡೆಯಲಿರುವ ಮೂರನೇ ಹಂತದ ಪಾದಯಾತ್ರೆ ಪೂರ್ವಭಾವಿ ಸಭೆ ಉದ್ಧೇಶಿಸಿ ಮಾತನಾಡಿದರು.ತುಂಗಭದ್ರಾ ನದಿಯ ಮೂರು ಭಾಗಗಳಲ್ಲಿ ಪ್ರತ್ಯೇಕ ತೊಂದರೆಗಳಿದ್ದು, ಶೃಂಗೇರಿಯಿಂದ ಹರಿಹರ, ಹರಿಹರದಿಂದ ತುಂಗಭದ್ರಾ ಮತ್ತು ತುಂಗಭದ್ರಾದಿಂದ ರಾಯಚೂರುವರೆಗೂ ವಿಭಿನ್ನ ಸವಾಲು ಎದುರಿಸುತ್ತಿವೆ. ಮರಗಳು 30 ಸಾವಿರ ಲೀಟರ್ ನೀರನ್ನು ಹಿಡಿದು ನಂತರ ನದಿಗೆ ಬಿಡುವ ಕೆಲಸ ಮಾಡುತ್ತವೆ. ಆದರೆ, ಈ ಪ್ರಕ್ರಿಯೆಗೆ ಮರ ಕಡಿತ, ಮರಳು ಸಾಗಾಣಿಕೆ, ಗಣಿಗಾರಿಕೆ ಕಾರಣದಿಂದ ಅಡ್ಡಿ ಉಂಟಾಗಿದೆ. ಈ ಕಡೆ ಶೃಂಗೇರಿ-ಕಿಷ್ಕಿಂದರೆಗಿನ ಫ್ಯಾಕ್ಟರಿ, ನಗರ, ಪಟ್ಟಣಗಳ ಘನತಾಜ್ಯ, ಕಸಾಯಿಖಾನೆ ತ್ಯಾಜ್ಯ, ಕೃಷಿ ಚಟುಟಿಕೆಯ ರಾಸಾಯನಿಕ, ಮೈನಿಂಗ್ ತ್ಯಾಜ್ಯ ನೇರವಾಗಿ ನದಿಗೆ ಸೇರಿ ಕುಡಿಯಲು ಯೋಗ್ಯವಲ್ಲದ ಸ್ಥಿತಿಗೆ ತಲುಪಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಈ ವೇಳೆ ಲಕ್ಷಕ್ಕೂ ಹೆಚ್ಚು ಜನ, ಶಾಲಾ-ಕಾಲೇಜುಗಳ ಸಾವಿರಾರು ಮಕ್ಕಳು, ಪರಿಸರ ಕಾಳಜಿ ಸಂಸ್ಥೆಗಳು, ವಿವಿಧ ಮಠಗಳು ಬೆಂಬಲಿಸಿ, ಜಲ ಜಾಗೃತಿ ಮೂಡಿಸಲು ಯಾತ್ರೆ ಸಾಗಿ ಬಂದ ಮಾರ್ಗದುದ್ದಕ್ಕೂ ಪ್ರಯತ್ನಿಸಲಾಗಿದೆ. ಕಿಷ್ಕಿಂದದಿಂದ ಮಂತ್ರಾಲಯದ ರಾಯಚೂರುವರೆಗೆ ಮೂರನೇ ಹಂತದ ಅಭಿಯಾನದ ದಿನಾಂಕವನ್ನು ಶೀಘ್ರದಲ್ಲಿಯೇ ನಿಗದಿಪಡಿಸಲಾಗುವುದು ಎಂದರು.ನಿರ್ಮಲ ತುಂಗಭದ್ರಾ ಅಭಿಯಾನ ಸಮಿತಿ ರಾಜ್ಯ ಸಂಚಾಲಕ ಮಹಿಮಾ ಪಟೇಲ್ ಮಾತನಾಡಿ, ಕೊಪ್ಪಳ, ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಯ ಜೀವನಾಡಿ, ಕೃಷಿ ಮತ್ತು ಕುಡಿವ ನೀರಿನ ಮೂಲ ತುಂಗಭದ್ರಾ ನದಿ 2040ರ ಹೊತ್ತಿಗೆ ಅತ್ಯಂತ ವಿಷಕಾರಿ ಮಟ್ಟಕ್ಕೆ ತಲುಪಲಿದ್ದು, ತುಂಗಭದ್ರಾ ನದಿ ಸಂಪೂರ್ಣ ಅಪಾಯದ ಅಂಚಿನಲಿದೆ. ನದಿ ಹರಿವಿನ ಉದ್ದಕ್ಕೂ ನದಿ ಪಾತ್ರದಲ್ಲಿರುವ ಗ್ರಾಮಗಳಲ್ಲಿ ಎಲ್ಲಿಯೂ ಚರಂಡಿ ನೀರು ಶುದ್ಧೀಕರಣ ಘಟಕದ ವ್ಯವಸ್ಥೆ ಕಲ್ಪಿಸಿಲ್ಲ. ಹೀಗಾಗಿ ಶೌಚಾಲಯ, ಮೂತ್ರಾಲಯ, ಚರಂಡಿ ನೀರು ಸೇರಿದಂತೆ ಎಲ್ಲ ತ್ಯಾಜ್ಯಗಳ ನೀರನ್ನು ನೇರವಾಗಿ ನದಿಗೆ ಬಿಡಲಾಗುತ್ತಿದೆ. ಇದು ಹೀಗೆ ಮುಂದುವರೆದರೆ 2040 ಹೊತ್ತಿಗೆ ಈ ನದಿಯ ನೀರು ಕುಡಿಯಲು ಯೋಗ್ಯವಲ್ಲದ ಸ್ಥಿತಿ ನಿರ್ಮಾಣವಾಗಲಿದೆ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರವಾಗಿ ನದಿಗಳಲ್ಲಿ ನೀರಿನ ಹರಿವು ಸದಾ ಕಾಲ ಇರುವಂತೆ ಮಾಡಲು ಜಲಾನಯನ ಪ್ರದೇಶ ಅಭಿವೃದ್ಧಿ ಯೋಜನೆ ರೂಪಿಸಲು ಈ ರೀತಿಯ ಅಭಿಯಾನ, ಜಾಗೃತಿ ಮೂಲಕ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದರು.
ಜಿಲ್ಲಾ ಸಂಚಾಲಕ ಡಾ. ಶಿವಕುಮಾರ ಮಾಲಿಪಾಟೀಲ್, ತಲೇಖಾನ ವೀರಭದ್ರ ಶರಣರು, ಗಿರಿಜಾ ಶಂಕರ್ ಪಾಟೀಲ್, ಡಾ. ಶಿಲ್ಪಾ ದಿವಟರ್, ದಲಾಲಿ ವರ್ತಕರ ಸಂಘದ ಅಧ್ಯಕ್ಷ ಬಸವರಾಜ ಪಗಡದಿನ್ನಿ, ಚನ್ನಬಸವ ಸುಂಕದ ಸೇರಿದಂತೆ ಇತರರು ಮಾತನಾಡಿ, ಹೋರಾಟ ಬೆಂಬಲಿಸಿ ಸಹಕಾರ ನೀಡುವುದಾಗಿ ಭರವಸೆ ನೀಡಿದರು.ಈ ಸಂದರ್ಭದಲ್ಲಿ ಆಂದೋಲನದ ದಕ್ಷಿಣ ಭಾರತ ಸಂಚಾಲಕ ಟಿ. ಮಾಧವನ್,ರಾಘವೇಂದ್ರ ತೂನಾ, ಮಹಮ್ಮದ್ ರಫೀ, ವಿಷ್ಣು ಜೋಷಿ, ಬಸವರಾಜ ಶೆಟ್ಟರ್, ಕರಿಸಿದ್ದನಗೌಡ ಪಾಟೀಲ್, ಖಾಜಾ ಹುಸೇನ್ ಮುಲ್ಲಾ, ಶರಣಯ್ಯಸ್ವಾಮಿ ಯರಡೋಣಾ, ವಿಜಯಲಕ್ಷ್ಮೀ ಮೇಲಿನಮನಿ, ಸಿದ್ದರಾಮ ರ‍್ಯಾವಳದ ಚಳ್ಳೂರು, ಸುರೇಶ ಚಿರ್ಚನಗುಡ, ರೈತ ಸಂಘಟನೆಯ ವೀರನಗೌಡ ಮಾ.ಪಾ, ಮರಿಯಪ್ಪ ಸಾಲೋಣಿ, ನಾರಾಯಣ ಈಡಿಗೇರ್, ಮಂಜುನಾಥ ಮಸ್ಕಿ ಇದ್ದರು.
ಪ್ರಭು ಉಪನಾಳ ಅಭಿಯಾನದ ಪ್ರತಿಜ್ಞಾ ವಿಧಿ ಬೋಧಿಸಿದರು. ಶರಣಪ್ಪ ಕೋಟ್ಯಾಳ ಶಿಕ್ಷಕ ಜಗದೀಶ ಭಜಂತ್ರಿ ಕಾರ್ಯಕ್ರಮ ನಿರ್ವಹಿಸಿದರು.