ಮಂಡ್ಯ ಜಿಲ್ಲೆಯಾದ್ಯಂತ ಪ್ರತಿಯೊಬ್ಬ ಪೋಷಕರು ತಪ್ಪದೇ ತಮ್ಮ ೫ ವರ್ಷದೊಳಗಿನ ಮಕ್ಕಳಿಗೆ ಲಸಿಕೆಯನ್ನು ಹಾಕಿಸುವುದರೊಂದಿಗೆ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲೆಯಲ್ಲಿ ೦-೫ ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಲಸಿಕೆಯನ್ನು ಕಡ್ಡಾಯವಾಗಿ ಹಾಕಿಸುವ ಮೂಲಕ ಜಿಲ್ಲೆಯನ್ನು ಪೋಲಿಯೋ ಮುಕ್ತ ಜಿಲ್ಲೆಯಾಗಿ ಉಳಿಸಬೇಕು ಎಂದು ಶಾಸಕ ಪಿ.ರವಿಕುಮಾರ್ ತಿಳಿಸಿದರು.

ಇಲ್ಲಿನ ಗುತ್ತಲು ಬಡಾವಣೆಯ ಸಾದತ್ ನಗರದ ಸರ್ಕಾರಿ ಕಿರಿಯ ಉರ್ದು ಶಾಲೆಯಲ್ಲಿ ನಡೆದ ಪಲ್ಸ್ ಪೋಲಿಯೋ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಿಲ್ಲೆಯಾದ್ಯಂತ ಪ್ರತಿಯೊಬ್ಬ ಪೋಷಕರು ತಪ್ಪದೇ ತಮ್ಮ ೫ ವರ್ಷದೊಳಗಿನ ಮಕ್ಕಳಿಗೆ ಲಸಿಕೆಯನ್ನು ಹಾಕಿಸುವುದರೊಂದಿಗೆ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ತಿಳಿಸಿದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಆರ್.ನಂದಿನಿ ಮಾತನಾಡಿ, ೨೦೧೪ ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಭಾರತವನ್ನು ಪೋಲಿಯೋ ಮುಕ್ತ ದೇಶ ಎಂದು ಘೋಷಿಸಿದೆ. ಆದರೂ ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಅಪಘಾನಿಸ್ತಾನಗಳಲ್ಲಿ ಕೆಲವು ಪೋಲಿಯೊ ಪ್ರಕರಣಗಳು ವರದಿಯಾಗುತ್ತಿದ್ದು, ಹೆಚ್ಚಿನ ನಿಗಾ ವಹಿಸುವ ಹಿನ್ನೆಲೆ, ಮುಂಜಾಗ್ರತಾ ಕ್ರಮವಾಗಿ ಭಾರತದಲ್ಲಿ ಪಲ್ಸ್ ಪೋಲಿಯೊ ಕಾರ್ಯಕ್ರಮ ಮುಂದುವರಿಸಲಾಗಿದ್ದು ಪೋಲಿಯೋ ನಿರ್ಮೂಲನೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಭೆಯಲ್ಲಿ ಎಸ್.ಬಿ.ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಮೀರಾ ಶಿವಲಿಂಗಯ್ಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕೆ.ಮೋಹನ್ ಉಪಸ್ಥಿತರಿದ್ದರು.

ಪಲ್ಸ್ ಪೋಲಿಯೋ ಜಿಲ್ಲೆಯಲ್ಲಿ ಶೇ.93.79 ರಷ್ಟು ಪ್ರಗತಿ

ಮಂಡ್ಯ: ಜಿಲ್ಲಾದ್ಯಂತ ಭಾನುವಾರ ಹಮ್ಮಿಕೊಂಡಿದ್ದ ಪಲ್ಸ್ ಪೋಲಿಯೋ ಮಕ್ಕಳಿಗೆ ಲಸಿಕಾ ಹಾಕುವ ಕಾರ್ಯಕ್ರಮದಲ್ಲಿ ಶೇ.93.79 ರಷ್ಟು ಪ್ರಗತಿ ಸಾಧಿಸಲಾಗಿದೆ. ಜಿಲ್ಲೆಯಲ್ಲಿ 1,13,034 ಮಕ್ಕಳಿಗೆ ಲಸಿಕೆ ಹಾಕುವ ಗುರಿ ನೀಡಲಾಗಿತ್ತು. ಇದರಲ್ಲಿ 1,06,010 ಮಕ್ಕಳಿಗೆ ಲಸಿಕೆ ಹಾಕಲಾಗಿದೆ. ಮಳವಳ್ಳಿ ತಾಲೂಕಿನಲ್ಲಿ ಅತಿ ಹೆಚ್ಚು ಅಂದರೆ ಶೇ.98.95 ರಷ್ಟು, ಮಂಡ್ಯದಲ್ಲಿ ಶೇ.89.04 ರಷ್ಟು ಕಡಿಮೆ ಪ್ರಮಾಣ ನಡೆದಿದೆ.ಮಂಡ್ಯ 27,676 ಮಕ್ಕಳ ಪೈಕಿ 24,642(ಶೇ.89.04), ಮದ್ದೂರು 16864 ಮಕ್ಕಳ ಪೈಕಿ 15422(ಶೇ.91.45), ಮಳವಳ್ಳಿ 17,798 ಮಕ್ಕಳ ಪೈಕಿ 17,612(ಶೇ.98.95), ಪಾಂಡವಪುರ 10,420 ಮಕ್ಕಳ ಪೈಕಿ 10,054(ಶೇ.96.49), ಶ್ರೀರಂಗಪಟ್ಟಣ 11,500 ಮಕ್ಕಳ ಪೈಕಿ 11,213(ಶೇ.97.50), ಕೆ.ಆರ್.ಪೇಟೆ 16,199 ಮಕ್ಕಳ ಪೈಕಿ 15,139(ಶೇ.93.46) ಹಾಗೂ ನಾಗಮಂಗಲ ತಾಲೂಕಿನ 12,577 ಮಕ್ಕಳ ಪೈಕಿ 11,928 (ಶೇ.94.84) ಮಕ್ಕಳಿಗೆ ಲಸಿಕೆ ಹಾಕಲಾಗಿದೆ.