ಮಧ್ಯಾಹ್ನ 3.30ಕ್ಕೆ ಆಂಕೋಲಾ ತಾಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ. ಗಂಗಾವಳಿ ಉಳಿಸಿ ಒತ್ತಾಯಿಸಿ ನಡೆಯುವ ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ಪ್ರಮುಖರು, ಪರಿಸರ ಹೋರಾಟಗಾರರು ಹಾಗೂ ಸಾರ್ವಜನಿಕರು ಭಾಗವಹಿಸಲಿದ್ದಾರೆ.
ಕಾರವಾರ: ಬೇಡ್ತಿ ಅಘನಾಶಿನಿ ನದಿ ತಿರುವು ಯೋಜನೆ ವಿರೋಧಿಸಿ ಗಂಗಾವಳಿ- ಕರಾವಳಿ ಉಳಿಸಿ ಜಾಗೃತಿ ಅಭಿಯಾನದ ಭಾಗವಾಗಿ ಕಾರವಾರ ಅಂಕೋಲಾ ಗೋಕರ್ಣ ಚಲೋ ಜಾಥಾ ಸೆ. 3ರಂದು ನಡೆಯಲಿದೆ.
ಅಂದು ಬೆಳಗ್ಗೆ 10 ಗಂಟೆಗೆ ಗೋಕರ್ಣದ ಜನತೆ ಜತೆ ಜಾಥಾ ತಂಡ ಅಲ್ಲಿನ ಗ್ರಾಪಂಗೆ ಹಕ್ಕೊತ್ತಾಯ ಸಲ್ಲಿಸಲಿದೆ. ಮಧ್ಯಾಹ್ನ 1 ಗಂಟೆಗೆ ಕಾರವಾರ ಜಿಲ್ಲಾಧಿಕಾರಿ ಕಚೇರಿಗೆ ಜಾಥಾ ತಲುಪಲಿದೆ. ಬಳಿಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಿದ್ದಾರೆ. ನಗರಸಭೆಗೂ ಮನವಿ ಮಾಡಲಿದ್ದಾರೆ.ಮಧ್ಯಾಹ್ನ 3.30ಕ್ಕೆ ಆಂಕೋಲಾ ತಾಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ. ಗಂಗಾವಳಿ ಉಳಿಸಿ ಒತ್ತಾಯಿಸಿ ನಡೆಯುವ ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ಪ್ರಮುಖರು, ಪರಿಸರ ಹೋರಾಟಗಾರರು ಹಾಗೂ ಸಾರ್ವಜನಿಕರು ಭಾಗವಹಿಸಲಿದ್ದಾರೆ.
ಯೋಜನೆಗೆ ಏಕೆ ವಿರೋಧ?: ಉತ್ತರ ಕನ್ನಡದ ಕರಾವಳಿ ಹಾಗೂ ಪಶ್ಚಿಮ ಘಟ್ಟದ ಸೂಕ್ಷ್ಮ ಪರಿಸರವನ್ನು ಸಂರಕ್ಷಿಸುವ ದೃಷ್ಟಿಯಿಂದ ಗಂಗಾವಳಿ(ಬೇಡ್ತಿ) ನದಿ ತಿರುವು ಯೋಜನೆಯನ್ನು ಕೈಬಿಡಬೇಕು ಎಂದು ಪರಿಸರ ಹೋರಾಟಗಾರರು ಆಗ್ರಹಿಸಿದ್ದಾರೆ.ಗಂಗಾವಳಿ ನದಿ ಶಿರಸಿ, ಯಲ್ಲಾಪುರ, ಅಂಕೋಲಾ ಭಾಗಗಳ ಮೂಲಕ ಹರಿದು ಸಮುದ್ರ ಸೇರುತ್ತದೆ. ನದಿ ತಿರುವು ಯೋಜನೆಯಿಂದ ನೈಸರ್ಗಿಕ ಜಲಚಕ್ರಕ್ಕೆ ಧಕ್ಕೆ, ಅರಣ್ಯ ನಾಶ, ಜೀವವೈವಿಧ್ಯಕ್ಕೆ ಅಪಾಯ ಹಾಗೂ ಸ್ಥಳೀಯ ಜನಜೀವನದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆಯಿದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.
ಯೋಜನೆಯಿಂದ ಕೃಷಿ, ಕುಡಿಯುವ ನೀರು ಹಾಗೂ ಮೀನುಗಾರಿಕೆ ಸೇರಿದಂತೆ ನದಿಯನ್ನು ಅವಲಂಬಿಸಿರುವ ಜನರ ಬದುಕಿನ ಮೇಲೂ ಪರಿಣಾಮ ಬೀರಲಿದೆ. ಅಲ್ಲದೆ, ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಭಾರಿ ಕಾಮಗಾರಿಗಳು ನಡೆದರೆ ಭೂಕುಸಿತ ಸೇರಿದಂತೆ ಹಲವು ಅಪಾಯಗಳು ಎದುರಾಗಬಹುದು. ಹೀಗಾಗಿ ಸಮಗ್ರ ಪರಿಸರ ಅಧ್ಯಯನ ನಡೆಸಿ, ಸ್ಥಳೀಯರ ಅಭಿಪ್ರಾಯ ಪಡೆದು ಯೋಜನೆಯನ್ನು ಕೈಬಿಡಬೇಕು ಎಂದು ಒತ್ತಾಯ ಕೇಳಿಬಂದಿದೆ.ಸ್ವರ್ಣವಲ್ಲಿ ಗಂಗಾಧರೇಂದ್ರ ಸರಸ್ವತಿ ಶ್ರೀಗಳ ನೇತೃತ್ವದಲ್ಲಿ ಯೋಜನೆ ತಡೆಯಲು ನಿರಂತರ ಹೋರಾಟ ನಡೆಯುತ್ತಿದೆ.