ಸಾರಾಂಶ
ಹುಬ್ಬಳ್ಳಿ: ಕಲೆ ಉಳಿಸಲು ಕಲಾವಿದರೇ ಆಗಬೇಕೆಂದೇನಿಲ್ಲ, ಕಲಾವಿದರನ್ನು ಗುರುತಿಸಿ ಅವರಿಗೆ ಸೂಕ್ತ ಪ್ರೋತ್ಸಾಹ ನೀಡುವ ಮೂಲಕ ಭಾರತೀಯ ಕಲೆ, ಪರಂಪರೆ ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣ ಸಮಾಜದ ಅಧ್ಯಕ್ಷ ಅನಂತಪದ್ಮನಾಭ ಐತಾಳ ಹೇಳಿದರು.
ದೇಶಪಾಂಡೆ ನಗರದ ಶ್ರೀಕೃಷ್ಣ ಕಲ್ಯಾಣ ಮಂಟಪದಲ್ಲಿ ಅಭಿನಯ ಸ್ಕೂಲ್ ಆಫ್ ಡ್ಯಾನ್ಸ್ ನೃತ್ಯ ಶಾಲೆಯ 24ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ವಿಟ್ಟು ನೃತ್ಯೋತ್ಸವ ಉದ್ಘಾಟಿಸಿ ಮಾತನಾಡಿದರು.ನೃತ್ಯ ಕಲೆ ರೂಢಿಸಿಕೊಂಡಿರುವ ಈ ಪುಟಾಣಿ ಮಕ್ಕಳಿಗೆ ಪ್ರೋತ್ಸಾಹ ನೀಡಿದಾಗ ಮುಂಬರುವ ದಿನಗಳಲ್ಲಿ ಶ್ರೇಷ್ಠ ಕಲಾವಿದರಾಗಿ ಹೊರಹೊಮ್ಮುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.
ಅತಿಥಿಗಳಾಗಿ ಆಗಮಿಸಿದ್ದ ನೇತ್ರಾವತಿ ಮಹಿಳಾ ಮಂಡಳದ ಅಧ್ಯಕ್ಷೆ ಗೀತಾ ಸೋಮೇಶ್ವರ ಮಾತನಾಡಿ, ಒಂದು ನೃತ್ಯ ಶಾಲೆ ತನ್ನ 24ನೇ ವಾರ್ಷಿಕೋತ್ಸವ ಅದ್ಧೂರಿಯಿಂದ ಆಚರಿಸಿಕೊಳ್ಳುತ್ತಿರುವುದು ನಿಜಕ್ಕೂ ಅದ್ಭುತ ಸಾಧನೆ. 24 ವರ್ಷಗಳ ವರೆಗೆ ಮುಂದುವರಿಸಿಕೊಂಡು ಬರುತ್ತಿರುವ ವಿದುಷಿ ಸೀಮಾ ಉಪಾಧ್ಯಾಯ ಅವರಿಗೆ ನಾವೆಲ್ಲ ಸಹಾಯ- ಸಹಕಾರ ನೀಡಿ ಅವರು ಈ ಕ್ಷೇತ್ರದಲ್ಲಿ ಮತ್ತಷ್ಟು ಕೊಡುಗೆ ನೀಡುವಂತಾಗಲಿ ಎಂದರು.ನೃತ್ಯೋತ್ಸವದಲ್ಲಿ ಧಾರವಾಡದ ಖ್ಯಾತ ಸಿತಾರ ವಾದಕ ಉಸ್ತಾದ್ ಹಫೀಜ್ ಬಾಲೇಖಾನ ಅವರು ನರ ಜನ್ಮ ಬಂದಾಗ ನಾಲಿಗೆ ಇರುವಾಗ ಕೃಷ್ಣ ಏನಬಾರದೆ ಎಂಬ ಗೀತೆಯನ್ನು ಹಾಡಿ ನೆರೆದ ಜನರ ಮನ ಗೆದ್ದರು. ಅಭಿನಯ ಸ್ಕೂಲ್ ಆಫ್ ಡ್ಯಾನ್ಸ್ ನ ವಿದ್ಯಾರ್ಥಿನಿಯರಿಂದ ಕನ್ನಡ, ಹಿಂದಿ, ಮರಾಠಿಯ 15ಕ್ಕೂ ಹೆಚ್ಚು ವಿಠ್ಠಲನ ಸುಂದರವಾದ ಗೀತೆಗಳಿಗೆ ನೃತ್ಯ ಪ್ರದರ್ಶನ ನಡೆಯಿತು. ನೃತ್ಯೋತ್ಸವದಲ್ಲಿ ಖ್ಯಾತ ಸಿತಾರ ವಾದಕ ಪಂ. ಶ್ರೀನಿವಾಸ ಜೋಶಿ, ತಬಲಾ ವಾದಕ ಡಾ. ನಾಗಲಿಂಗ ಮುರಗಿ, ಡಾ. ಪವಿತ್ರಾ ಜೈನ, ಅಭಿನಯ ಸ್ಕೂಲ್ ಆಫ್ ಡ್ಯಾನ್ಸ್ ನ ಸಂಸ್ಥಾಪಕಿ ನೃತ್ಯಗುರು ವಿದುಷಿ ಸೀಮಾ ಉಪಾಧ್ಯಾಯ ಸೇರಿದಂತೆ ಹಲವರಿದ್ದರು.