ಜೀವಸಂಕುಲ ಉಳಿವಿಗೆ ಕೆರೆ, ಕುಂಟೆ ಉಳಿಸಿ: ಕಮಲಾಕ್ಷ

| Published : Mar 23 2024, 01:16 AM IST

ಜೀವಸಂಕುಲ ಉಳಿವಿಗೆ ಕೆರೆ, ಕುಂಟೆ ಉಳಿಸಿ: ಕಮಲಾಕ್ಷ
Share this Article
  • FB
  • TW
  • Linkdin
  • Email

ಸಾರಾಂಶ

ಶಹಾಪುರ ತಾಲೂಕಿನ ಹೊಸಕೇರಾ ಗ್ರಾಮದ ಜಟ್ಟಿಂಗರಾಯ ಕೆರೆ ಪುನರ್ ನಿರ್ಮಿಸಲು ಗ್ರಾಮಸ್ಥರಿಗೆ ಹಸ್ತಾಂತರ ಕಾರ್ಯಕ್ರಮದಲ್ಲಿ ಧರ್ಮಸ್ಥಳ ಸಂಸ್ಥೆಯ ಜಿಲ್ಲಾ ನಿರ್ದೇಶಕರಾದ ಕಮಲಾಕ್ಷ ಅವರು ಮಾತನಾಡಿದರು.

ಕನ್ನಡಪ್ರಭ ವಾರ್ತೆ ಶಹಾಪುರ

ನಾವು ಬಳಸುತ್ತಿರುವ ಕೆರೆ, ಹೊಲ ನಮ್ಮದಲ್ಲ. ನಮ್ಮ ಪೂರ್ವಿಕರು ನಮಗೆ ಬಿಟ್ಟು ಹೋಗಿರುವ ಅತ್ಯಮೂಲ್ಯ ಆಸ್ತಿ. ಆದ್ದರಿಂದ ಭವಿಷ್ಯದ ಪೀಳಿಗೆಗೆ ಕೆರೆ ಕಟ್ಟೆ ಉಳಿಸಿ, ಅಭಿವೃದ್ಧಿ ಪಡಿಸಿದ್ದರು. ನಾವು ನಮ್ಮ ಮುಂದಿನ ಪೀಳಿಗೆಗೆ ಮತ್ತು ಪ್ರಾಣಿ ಪಕ್ಷಿಗಳ ಸಂಕುಲದ ಉಳುವಿಗೆ ಕೆರೆ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದು ಧರ್ಮಸ್ಥಳ ಸಂಸ್ಥೆ ಜಿಲ್ಲಾ ನಿರ್ದೇಶಕ ಕಮಲಾಕ್ಷ ತಿಳಿಸಿದರು.

ತಾಲೂಕಿನ ಹೊಸಕೇರಾ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನಾ ಸಂಸ್ಥೆಯಿಂದ ನಮ್ಮೂರು ನಮ್ಮ ಕೆರೆ ಯೋಜನೆಯಡಿ ಜಟ್ಟಿಂಗರಾಯನ ಕೆರೆ ಪುನರುಜ್ಜೀವನಗೊಳಿಸಿ ಗ್ರಾಮಸ್ಥರಿಗೆ ಮತ್ತು ಗ್ರಾಮ ಪಂಚಾಯ್ತಿ ಅಧಿಕಾರಿಗೆ ಕೆರೆ ಹಸ್ತಾಂತರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಸುಮಾರು ಐದಾರು ಎಕರೆ ವಿಸ್ತಾರ ಹೊಂದಿದ ಕೆರೆ ಇದಾಗಿದ್ದು, ಹೂಳು ತುಂಬಿ ನೀರು ನಿಲ್ಲದ ಸ್ಥಿತಿಯಲ್ಲಿ ಕೆರೆ ಕುರುಹು ಸಹ ಇಲ್ಲದಂತೆ ಕಾಣುತ್ತಿತ್ತು. ಸುಮಾರು ಧರ್ಮಸ್ಥಳ ಸಂಸ್ಥೆಯಿಂದ 15 ಲಕ್ಷಕ್ಕೂ ಹೆಚ್ಚು ಹಣ ಖರ್ಚು ಮಾಡಿ ಹೂಳೆತ್ತುವ ಕಾರ್ಯ ಕೈಗೊಳ್ಳಲಾಯಿತು. ಗ್ರಾಮದ ರೈತರು ಕೆರೆ ಮಣ್ಣನ್ನು ಸ್ವಇಚ್ಛೆಯಿಂದ ತಮ್ಮ ತಮ್ಮ ಹೊಲಗಳಿಗೆ ತೆಗೆದುಕೊಂಡು ಹೋಗುವ ಮೂಲಕ ಸಹಕಾರ ನೀಡಿದರು. ಗ್ರಾಮಸ್ಥರು ಹಾಗೂ ಸಂಸ್ಥೆಯಿಂದ ಜಟ್ಟಿಂಗರಾಯನ ಕೆರೆ ಜೀವಂತತೆ ಪಡೆಯುವಂತೆ ಮಾಡಲಾಗಿದೆ.

ಉತ್ತಮ ಮಳೆಯಾದಲ್ಲಿ ಕೆರೆ ಸಂಪೂರ್ಣ ತುಂಬಿ ಗ್ರಾಮಸ್ಥರಿಗೆ, ಜನ ಜಾನುವಾರುಗಳು ಸೇರಿ ಅಕ್ಕ ಪಕ್ಕದ ಜಮೀನುಗಳಿಗೆ ನೀರು ಪಡೆಯಬಹುದು. ಅಲ್ಲದೆ ಇಡಿ ಜೀವ ಸಂಕುಲಗಳಿಗೆ ಅನುಕೂಲವಾಗಲಿದೆ. ಜನರಿಗೆ ದನ ಕರುಗಳಿಗೆ ನೀರಿನ ಅಭಾವಕ್ಕೆ ಮುಕ್ತಿ ದೊರೆಯಲಿದೆ ಎಂಬ ಆಶಯ ಹೊಂದಲಾಗಿದೆ.

ಧರ್ಮಸ್ಥಳ ಸಂಸ್ಥೆ ಮಾತೋಶ್ರೀ ಹೇಮಾವತಿ ಅಮ್ಮನವರ ಆಸೆಯಂತೆ ನಮ್ಮೂರು ನಮ್ಮ ಕೆರೆ ಯೋಜನೆಯಡಿ ನೀರು ಸಂಗ್ರಹಿಸುವ ನೀರು ಉಳಿಸುವ ಕಾರ್ಯಕ್ಕೆ ನಿರ್ದೇಶನ ನೀಡಿರುವ ಕಾರಣ, ಈ ಯೋಜನೆಯಡಿ ಗ್ರಾಮಸ್ಥರಿಗೆ ಶಾಶ್ವತವಾಗಿ ನೀರು ಕೊಡುವಂತೆ ಕೆಲಸವಾಗಬೇಕೆಂಬ ಅವರ ಆಶಯದಂತೆ ರಾಜ್ಯದಾದ್ಯಂತ ಇದು 691ನೇ ಕೆರೆ ಜೀರ್ಣೋದ್ಧಾರ ಕಾರ್ಯ ಮಾಡಲಾಗಿದೆ. ನೀರಿನ ಅಭಾವವಿದೆ ಎಂದು ಹಲವಡೆ ನಾವುಗಳು ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವ ಕೆಲಸ ಮಾಡಿದ್ದೇವೆ. ಆದರೆ, ಮಾತೋಶ್ರಿ ಅವರು ಶಾಶ್ವತ ನೀರು ಸೌಲಭ್ಯ ಕಲ್ಪಿಸುವ ಕೆಲಸ ಮಾಡಬೇಕಿದೆ ಎಂಬ ಚಿಂತನೆಯಿಂದ ಗ್ರಾಮಗಳ ಕೆರೆ ಜೀರ್ಣೋದ್ಧಾರ ಕೆಲಸಕ್ಕೆ ಕೈಹಾಕಲಾಗಿದೆ. ಗ್ರಾಮಸ್ಥರ ಸಹಾಯದಿಂದ ಇಂಥಹ ಅದ್ಭುತ ಕೆಲಸ ಮಾಡಲು ಸಾಧ್ಯವಾಗಿದೆ ಸಹಕಾರ ನೀಡಿದ ಗ್ರಾಮಸ ಹಿರಿಯರು, ಕಿರಿಯರು ಸೇರಿದಂತೆ ಕೆರೆ ಜಾಗೃತಿ ಸಮಿತಿ ಅವರಿಗೆ ಅಭಿನಂದನೆ ಸಲ್ಲಿಸಿದರು.

ಹಿರಿಯ ಪತ್ರಕರ್ತರಾದ ನಾರಾಯಣಾಚಾರ್ಯ ಸಗರ, ಪತ್ರಕರ್ತ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮುದ್ನೂರ, ಜನ ಜಾಗೃತಿಯ ತುಳಜಾರಾಮ ಭಾಸುತ್ಕರ್, ಸಂಸ್ಥೆಯ ಕಲ್ಲಪ್ಪ ಯಾವಗಲ್ ಸೇರಿದಂತೆ ಗ್ರಾಮಸ್ಥರು ಕೆರೆ ಸಮಿತಿ ಅಧ್ಯಕ್ಷರು, ಮಹಿಳೆಯರು ಭಾಗವಹಿಸಿದ್ದರು.

ಧರ್ಮಸ್ಥಳ ಸಂಸ್ಥೆಯವರು ಲಕ್ಷಾಂತರ ರುಪಾಯಿ ಖರ್ಚು ಮಾಡಿ ಗ್ರಾಮಸ್ಥರಿಗೆ ಅಷ್ಟೇ ಅಲ್ಲದೇ ಇಡೀ ಜೀವಸಂಕುಲಕ್ಕೆ, ಸಮಾಜಕ್ಕೆ, ಈ ನೆಲಕ್ಕೆ ಶಾಶ್ವತ ನೀರೊದಗಿಸುವ ಉಳಿಸುವಂತ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ.

ಮಲ್ಲಿಕಾರ್ಜುನ ಮುದ್ನೂರ, ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷರು, ಶಹಾಪುರ.