ನೀರಿನ ಸಂಪನ್ಮೂಲಕ್ಕೆ ಕೊರತೆಯಾಗದಂತೆ ಕೆರೆಗಳನ್ನು ಉಳಿಸಿ: ಶಾಸಕ ದರ್ಶನ್ ಪುಟ್ಟಣ್ಣಯ್ಯ

| Published : Sep 25 2024, 12:53 AM IST

ನೀರಿನ ಸಂಪನ್ಮೂಲಕ್ಕೆ ಕೊರತೆಯಾಗದಂತೆ ಕೆರೆಗಳನ್ನು ಉಳಿಸಿ: ಶಾಸಕ ದರ್ಶನ್ ಪುಟ್ಟಣ್ಣಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಈಗಾಗಲೇ ಪಾಂಡವಪುರ ತಾಲೂಕಿನ ಕೆನ್ನಾಳು, ಬನ್ನಂಗಾಡಿ ಹಾಗೂ ಕ್ಷೇತ್ರ ವ್ಯಾಪ್ತಿಯ ಚಂದಗಾಲು ಗ್ರಾಪಂ ವ್ಯಾಪ್ತಿಯಲ್ಲಿ ನಡೆದ ಸರ್ಕಾರಿ ಸೇವೆಗಳು ನಿಮ್ಮನೆ ಬಾಗಿಲಿಗೆ ಕಾರ್ಯಕ್ರಮ ಯಶಸ್ವಿಯಾಗಿದೆ. ಜನ ಕೇವಲ ಪೌತಿ ಖಾತೆ ಮತ್ತು ಉಪನೋಂದಣಾಧಿಕಾರಿಗಳ ಕಚೇರಿಗೆ ಮಾತ್ರ ಬರಬೇಕು.

ಕನ್ನಡಪ್ರಭ ವಾರ್ತೆ ಪಾಂಡವಪುರ

ರೈತರು, ಜನರಿಗೆ ನೀರಿನ ಸಂಪನ್ಮೂಲ ಕೊರತೆಯಾಗದಂತೆ ಕೆರೆಗಳನ್ನು ಉಳಿಸಿಕೊಳ್ಳಲು ಮುಂದಾಗಬೇಕು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಸಲಹೆ ನೀಡಿದರು.

ತಾಲೂಕಿನ ಹಳೇಬೀಡು ಗ್ರಾಪಂ ವ್ಯಾಪ್ತಿಯಲ್ಲಿ ಸೋಮವಾರ ಆಯೋಜಿಸಿದ್ದ ಸರ್ಕಾರಿ ಸೇವೆಗಳು ನಿಮ್ಮನೆ ಬಾಗಿಲಿಗೆ ಎಂಬ ವಿನೂತನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಭೂ ಮಾಪನ, ಕಂದಾಯ ಇಲಾಖೆ ಅಧಿಕಾರಿಗಳ ಸಹಕಾರದೊಂದಿಗೆ ಸರ್ಕಾರಿ ಜಾಗ, ಸಾರ್ವಜನಿಕ ರಸ್ತೆ, ಕೆರೆ ಒತ್ತುವರಿ ಎಲ್ಲವನ್ನು ಯಾವುದೇ ಮುಲಾಜಿಲ್ಲದೆ ತೆರವುಗೊಳಿಸಿದ ಬಳಿಕ ಕಂದಕಗಳನ್ನು ನಿರ್ಮಿಸಿ ರಕ್ಷಿಸುವ ಕೆಲಸ ಮಾಡಲಾಗುವುದು ಎಂದರು.

ಕೆರೆ ಒತ್ತುವರಿ ತೆರವುಗೊಳಿಸಿದ ನಂತರ ರೈತರು, ಗ್ರಾಮಸ್ಥರು ಅದನ್ನು ಪಕ್ಷಾತೀತವಾಗಿ ಉಳಿಸಿಕೊಂಡು ಹೋಗುವ ಕೆಲಸ ಮಾಡಬೇಕು. ಕೆರೆಗಳು ಇಲ್ಲ ಎಂದರೆ ರೈತರು ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈಗಾಗಲೇ ತಾಲೂಕಿನ ಕೆನ್ನಾಳು, ಬನ್ನಂಗಾಡಿ ಹಾಗೂ ಕ್ಷೇತ್ರ ವ್ಯಾಪ್ತಿಯ ಚಂದಗಾಲು ಗ್ರಾಪಂ ವ್ಯಾಪ್ತಿಯಲ್ಲಿ ನಡೆದ ಸರ್ಕಾರಿ ಸೇವೆಗಳು ನಿಮ್ಮನೆ ಬಾಗಿಲಿಗೆ ಕಾರ್ಯಕ್ರಮ ಯಶಸ್ವಿಯಾಗಿದೆ. ಜನ ಕೇವಲ ಪೌತಿ ಖಾತೆ ಮತ್ತು ಉಪನೋಂದಣಾಧಿಕಾರಿಗಳ ಕಚೇರಿಗೆ ಮಾತ್ರ ಬರಬೇಕು. ಇತರೆ ಎಲ್ಲಾ ಕೆಲಸಗಳು ಮನೆಯ ಬಾಗಿಲಿಗೆ ತಲುಪಬೇಕು ಎಂಬುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.

ಸರ್ಕಾರಿ ಕಚೇರಿಗಳಲ್ಲಿ ಜನ ಇಲ್ಲ ಎಂದಾಗ ಮಾತ್ರ ಅಧಿಕಾರಿಗಳು ಅಚ್ಚಕಟ್ಟಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಅರ್ಥೈಸಿಕೊಳ್ಳಬಹುದು. ರೈತರು ವ್ಯವಸಾಯ ಪದ್ಧತಿ ಬದಲಾಯಿಸಿಕೊಂಡು ಭೂಮಿ ಫಲವತ್ತತೆ, ಮಣ್ಣಿನ ಗುಣ, ಹವಾಮಾನದ ಆಧಾರದ ಮೇಲೆ ಬೆಳೆ ಬೆಳೆದು ಆರ್ಥಿಕವಾಗಿ ಸದೃಢರಾಗಬೇಕು ಎಂದರು.

ಒತ್ತುವರಿ ತೆರವಿಗಾಗಿ ಜೆಸಿಬಿ ಸದ್ದು:

ಇದೇ ವೇಳೆ ತಾಲೂಕಿನ ಹಳೇಬೀಡು ಗ್ರಾಪಂ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಪ್ರಭಾವಿಗಳು ಅತಿಕ್ರಮಿಸಿದ್ದ ಸರ್ಕಾರಿ ದುಂಡು ತೋಪು, ಬಡವರಿಗೆ ಹಂಚಿಕೆಯಾಗಿದ್ದ ನಿವೇಶನಗಳ ಒತ್ತುವರಿಯನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಯಿತು.

ಗ್ರಾಪಂ ವ್ಯಾಪ್ತಿಯ ಹೊಸಕೋಟೆ ಗ್ರಾಮದ 128 ಮತ್ತು 129ರ ಸರ್ವೇ ನಂಬರ್‌ನಲ್ಲಿ ಪರಿಶಿಷ್ಟಜಾತಿ ಕಾಲೋನಿ ನಿರ್ಮಾಣಕ್ಕಾಗಿ 1980ರಲ್ಲಿ 130 ನಿವೇಶನಗಳ ಹಂಚಿಕೆಯಾಗಿತ್ತು. ಈ ಪೈಕಿ 34 ಫಲಾನುಭವಿಗಳಿಗೆ ಮಾತ್ರ ಹಕ್ಕುಪತ್ರ ವಿತರಿಸಿ ಉಳಿಕೆ ನಿವೇಶನಗಳನ್ನು ಕಾಯ್ದಿರಿಸಲಾಗಿತ್ತು ಎಂದರು.

ಆದರೆ, ಪ್ರಭಾವಿಗಳು ಈ ಜಾಗವನ್ನು ಅತಿಕ್ರಮಿಸಿಕೊಂಡಿದ್ದ ಪರಿಣಾಮ ಅದಿನಿಂದ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾರ್ಗದರ್ಶನದಲ್ಲಿ ನಿವೇಶಗಳ ಒತ್ತುವರಿಯನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಯಿತು. ಅದೇ ರೀತಿ ಮೇನಾಗರ ಗ್ರಾಮದ ಸರ್ವೇ ನಂಬರ್ 88 ರಲ್ಲಿ ಒತ್ತುವರಿಯಾಗಿದ್ದ 2.34 ಗುಂಟೆ ಸರ್ಕಾರಿ ಗುಂಡುತೋಪು ಜಮೀನಿನ ಒತ್ತುವರಿ ತೆರವುಗೊಳಿಸಿ ಕಂದಕ ನಿರ್ಮಿಸಲಾಯಿತು.

ಈ ವೇಳೆ ತಹಸೀಲ್ದಾರ್ ಎಸ್.ಸಂತೋಷ್, ತಾಪಂ ಇಒ ಲೋಕೇಶ್‌ಮೂರ್ತಿ, ರೇಷ್ಮೇ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್, ಅರಣ್ಯಾಧಿಕಾರಿ ಜಗದೀಶ್, ಸಿಡಿಪಿಒ ಪೂರ್ಣಿಮ ಇತರರು ಇದ್ದರು.