ಕೆರೆಗಳ ಹೂಳೆತ್ತಿ ಜೀವಜಲ ಕಾಪಾಡಿ...

| Published : Jun 12 2024, 12:40 AM IST

ಸಾರಾಂಶ

ಎಲ್ಲಿ ಕೆರೆಗಳಿವೆಯೋ ಅಲ್ಲಿ ಹೂಳೆತ್ತಿದ ಮಣ್ಣನ್ನು ಅಕ್ಕಪಕ್ಕದ ರೈತರಿಗೆ ನೀಡಿದರೆ, ರೈತರಿಗೂ ಅನುಕೂಲವಾಗುತ್ತದೆ.

ಶಂಕರ ಭಟ್ಟ ತಾರೀಮಕ್ಕಿಯಲ್ಲಾಪುರ: ತಾಲೂಕಿನಲ್ಲಿ ಅಂತರ್ಜಲ ಮಟ್ಟ ತೀವ್ರ ಕುಸಿತ ಕಾಣುತ್ತಿದೆ. ಹೀಗಾಗಿ ಜೀವಜಲ ರಕ್ಷಣೆಗೆ ಕೂಗು ಕೇಳಿಬರುತ್ತಿದೆ. ಕೆರೆಗಳ ಹೂಳೆತ್ತಿ, ಅಮೂಲ್ಯ ಜಲಸಂಪತ್ತನ್ನು ರಕ್ಷಿಸುವಂತೆ ಸಾರ್ವಜನಿಕರು ಮೊರೆ ಇಡುತ್ತಿದ್ದಾರೆ.

ಕಳೆದ ಹದಿನೈದು ವರ್ಷಗಳಿಂದ ಮಳೆಯ ಪ್ರಮಾಣ ತೀರಾ ಕಡಿಮೆಯಾಗುತ್ತಿದೆ. ಅದೇ ರೀತಿ ಬಿಸಿಲಿನ ತಾಪಮಾನ ಅಧಿಕಗೊಳ್ಳುತ್ತಿದೆ. ಮಳೆಗಾಲ ಬಂದರೂ ಉಷ್ಣಾಂಶ ಇಳಿಕೆಯಾಗುತ್ತಿಲ್ಲ. ಇವೆಲ್ಲವುಗಳ ಪರಿಣಾಮ ಹಳ್ಳ, ಕೊಳ್ಳ, ನದಿ, ಕೊಳವೆಬಾವಿ, ಸೇರಿದಂತೆ ಎಲ್ಲೆಡೆ ಅಂತರ್ಜಲ ಮಟ್ಟ ಕುಸಿತದಿಂದಾಗಿ ನೀರಿನ ಸಮಸ್ಯೆ ಹೆಚ್ಚುತ್ತಿದೆ. ಇದಕ್ಕೆ ಇಂಗುಗುಂಡಿ ಮತ್ತು ಕೆರೆ ಹೂಳೆತ್ತುವುದೇ ಪರಿಹಾರವೆಂಬುದನ್ನು ಸರ್ಕಾರ ಮನಗಂಡರೂ ಆ ನಿಟ್ಟಿನಲ್ಲಿ ಪರಿಣಾಮಕಾರಿಯಾದ ಕಾರ್ಯವಾಗುತ್ತಿಲ್ಲ. ಸರ್ಕಾರ ತನ್ನ ನೀತಿಯಲ್ಲಿ ಅರಣ್ಯ ಇಲಾಖೆ, ಕೃಷಿ ಮತ್ತು ತೋಟಗಾರಿಕಾ ಇಲಾಖೆ ಹಲವು ಯೋಜನೆಗಳನ್ನು ರೂಪಿಸಿದೆ. ಅದು ತಾಂತ್ರಿಕ ಕಾರಣಗಳಿಂದ ಅಷ್ಟೊಂದು ಪರಿಣಾಮಕಾರಿಯಾಗಿಲ್ಲ. ನೀರಿನ ತೀವ್ರ ಅಭಾವದಿಂದ ಪ್ರಾಣಿ, ಪಶು, ಪಕ್ಷಿಗಳಿಗೂ ಬೇಸಿಗೆಗಾಲದಲ್ಲಿ ನೀರು ದೊರೆಯದಂತ ಸ್ಥಿತಿ ನಿರ್ಮಾಣಗೊಳ್ಳಲು ಕಾರಣವಾಗಿದೆ. ಲಭ್ಯವಾದ ಮಾಹಿತಿಯಂತೆ ಜಿಲ್ಲೆಯಲ್ಲಿ ಸಾವಿರಾರು ಕೆರೆಗಳಿವೆ. ಅವುಗಳಲ್ಲಿ ಶೇ. ೯೦ರಷ್ಟು ಕೆರೆಗಳು ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿದೆ. ಆದ್ದರಿಂದ ಅರಣ್ಯ ಇಲಾಖೆ ಕೆರೆಗಳನ್ನು ಹೂಳೆತ್ತುವ ಬೃಹತ್ ಅಭಿಯಾನ ಹಮ್ಮಿಕೊಂಡರೆ ಇನ್ನಷ್ಟು ಪರಿಣಾಮಕಾರಿ ಕೆಲಸವಾಗಬಹುದು. ಯಾವುದೇ ಇಲಾಖೆಯ ವ್ಯಾಪ್ತಿಯಲ್ಲಿರುವ ಕೆರೆಗಳಾಗಲೀ, ರೈತರ ಜಮೀನುಗಳಲ್ಲಿರುವ ಕೆರೆಗಳಾಗಲೀ ಸಂಬಂಧಪಟ್ಟ ಇಲಾಖೆಯವರು ರೈತರಿಗೆ ನೆರವು ನೀಡಿ, ಹೂಳೆತ್ತುವ ಪ್ರಕ್ರಿಯೆ ನಿರಂತರ ನಡೆದಾಗ ಮಾತ್ರ ಬೇಸಿಗೆಯಲ್ಲಿಯೂ ಕೆರೆಗಳಲ್ಲಿ ನೀರನ್ನು ಕಾಣಬಹುದಾಗಿದೆ. ಇದರಿಂದ ಅಂತರ್ಜಲದ ಮಟ್ಟವನ್ನು ಹೆಚ್ಚಿಸಬಹುದು. ಆದರೆ ಸರ್ಕಾರ ಅಷ್ಟು ಗಂಭೀರವಾಗಿ ತೆಗೆದುಕೊಳ್ಳದಿರುವುದೇ ಅಂತರ್ಜಲಮಟ್ಟ ಕುಸಿಯುವುದಕ್ಕೆ ಕಾರಣವಾಗಿದೆ. ಜತೆಗೆ ರೈತರು ತಮ್ಮ ಜಮೀನಿನ ಅಭಿವೃದ್ಧಿಗಾಗಿ ಅನೇಕ ಕಡೆ ಅರಣ್ಯ ಇಲಾಖೆಯ ಮಣ್ಣನ್ನು ತೆಗೆಯುತ್ತಾರೆ. ಅದರಿಂದ ಅಲ್ಲಿ ಅನೇಕ ಗಿಡಮರಗಳು ನಾಶವಾಗುವ ಸಾಧ್ಯತೆ ಇರುತ್ತದೆ.

ಎಲ್ಲಿ ಕೆರೆಗಳಿವೆಯೋ ಅಲ್ಲಿ ಹೂಳೆತ್ತಿದ ಮಣ್ಣನ್ನು ಅಕ್ಕಪಕ್ಕದ ರೈತರಿಗೆ ನೀಡಿದರೆ, ರೈತರಿಗೂ ಅನುಕೂಲವಾಗುತ್ತದೆ. ಕೆರೆಯ ಮಣ್ಣನ್ನು ಹೂಳೆತ್ತಿ, ಕಾಡಿನಲ್ಲಿ ದಾಸ್ತಾನು ಮಾಡಿ, ಸಣ್ಣಪುಟ್ಟ ಗಿಡಗಳನ್ನು ನಾಶ ಮಾಡುವ ಕಾರ್ಯಕ್ಕೂ ತಡೆ ನೀಡಿದಂತಾಗುತ್ತದೆ. ಮತ್ತು ಆ ಮಣ್ಣನ್ನು ಕೆರೆಯ ಪಕ್ಕದಲ್ಲಿ ಎಸೆಯುವುದರಿಂದ ಪುನಃ ಕೆರೆಗೆ ಹೋಗಿ ಹೂಳು ತುಂಬುತ್ತದೆ. ಅದನ್ನೂ ತಪ್ಪಿಸಿದಂತಾಗುತ್ತದೆ. ಆದ್ದರಿಂದ ಹೂಳೆತ್ತುವ ಯೋಜನೆ ಸರ್ಕಾರ ತ್ವರಿತವಾಗಿ ಮಾಡಬೇಕೆಂಬುದು ಅನೇಕ ರೈತರ ಅಪೇಕ್ಷೆಯಾಗಿದೆ.

ಅನುಮತಿ ಕೇಳ್ತೇವೆ: ಸರ್ಕಾರದ ನಿಯಮದ ಪ್ರಕಾರ ಅರಣ್ಯ ಜಾಗದಲ್ಲಿರುವ ಮಣ್ಣನ್ನು ಸಾರ್ವಜನಿಕರು ಉಪಯೋಗಿಸುವಂತಿಲ್ಲ. ರೈತರ ಬೇಡಿಕೆ ಬಂದರೆ ಸರ್ಕಾರದ ಅನುಮತಿ ಕೇಳಲಾಗುವುದು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷಭಾನು ತಿಳಿಸಿದರು.