ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಕಾಲ್ತುಳಿತಕ್ಕೆ ಸಿಲುಕಿದ್ದ ನಮ್ಮನ್ನು ಯಾರೂ ಕಾಪಾಡಲು ಬರಲಿಲ್ಲ. ನಾವು ಕೂಡ ಕೆಳಗೆ ಬಿದ್ದೆವು. 50ಕ್ಕೂ ಹೆಚ್ಚು ಜನರ ಗುಂಪು ನಮ್ಮ ಮೇಲೆ ಬಿದ್ದಿತ್ತು. ನಮ್ಮ ಸಹಾಯಕ್ಕೆ ಯಾರೂ ಬರಲಿಲ್ಲ. ನನ್ನ ಪತಿ ಅರುಣ ನನ್ನ ರಕ್ಷಣೆಗೆ ಧಾವಿಸಿದರು. ನನ್ನ ಪ್ರಾಣ ಉಳಿಸಿ, ಅವರು ತಮ್ಮ ಪ್ರಾಣ ಕಳೆದುಕೊಂಡರು..!ಪ್ರಯಾಗರಾಜ್‌ನ ಕುಂಭಮೇಳದಲ್ಲಿ ಕಾಲ್ತುಳಿತಕ್ಕೆ ಬಲಿಯಾದ ಬೆಳಗಾವಿಯ ಶೆಟ್ಟಿ ಗಲ್ಲಿಯ ಅರುಣ ಕೋಪರ್ಡೆ ಅವರ ಪತ್ನಿ ಕಾಂಚನ ಅವರು ವಾಸ್ತವ ಘಟನೆಯನ್ನು ಬಿಚ್ಚಿಟ್ಟರು. ಕಾಲ್ತುಳಿತಕ್ಕೆ ಸಿಲುಕಿ ಗಾಯಗೊಂಡಿರುವ ಕಾಂಚನ ಅವರು, ಕಾಲ್ತುಳಿತದ ಕರಾಳ ಘಟನೆಯನ್ನು ನೆನೆದು ಕಣ್ಣೀರು ಹಾಕಿದರು. ಜ.28ರಂದು ರಾತ್ರಿ ಎಲ್ಲರೂ ಪುಣ್ಯಸ್ನಾನಕ್ಕೆ ತೆರಳುತ್ತಿದ್ದೆವು. ಆಗ ಏಕಾಏಕಿ ಜನರ ಚೀರಾಟ ಶುರುವಾಯಿತು. ಸ್ನಾನಕ್ಕೆ ಹೋದವರು ಮರಳಿ ನಮ್ಮತ್ತ ಓಡಿಬಂದರು. ಏನಾಗುತ್ತದೆ ಎನ್ನುವಷ್ಟರಲ್ಲಿಯೇ ನಮ್ಮನ್ನು ತಳ್ಳಿಕೊಂಡು ಮುಂದೆ ಹೋದರು. ಈ ವೇಳೆ ನಾವು ಕುಸಿದು ಕೆಳಗೆ ಬಿದ್ದೆವು. ಸುಮಾರು 50 ಜನರ ಗುಂಪೊಂದು ನಮ್ಮ ಮೇಲೆಯೇ ಬಿತ್ತು. ಕೆಲಕಾಲ ಉಸಿರುಗಟ್ಟಿತ್ತು. ಕಾಪಾಡಿ... ಕಾಪಾಡಿ... ಎಂದು ಪರಿ ಪರಿಯಾಗಿ ಕೇಳಿಕೊಂಡರೂ ಯಾರೂ ಸಹಾಯಕ್ಕೆ ಬರಲೇ ಇಲ್ಲ.
ಪತಿ ಅರುಣ ನನ್ನ ರಕ್ಷಣೆಗೆ ಧಾವಿಸಿದರು. ಅವರ ಮೇಲೂ ಜನರು ಬಿದ್ದರು. ಯಾರೂ ಕಾಪಾಡಲು ಮುಂದೆ ಬರಲಿಲ್ಲ. ಎಲ್ಲರೂ ಮೊಬೈಲ್‌ನಲ್ಲಿ ನಮ್ಮ ಫೋಟೋ, ವೀಡಿಯೋ ತೆಗೆಯುವುದರಲ್ಲಿ ಕಾರ್ಯನಿರತರಾಗಿದ್ದರು. ನನ್ನ ರಕ್ಷಣೆಗೆ ಬಂದ ನಮ್ಮ ಯಜಮಾನರೇ ತಮ್ಮ ಪ್ರಾಣ ಕಳೆದುಕೊಂಡರು ಎಂದು ಕಾಂಚನ ಅವರು ಕಣ್ಣೀರು ಹಾಕಿದರು.ನಾವು ಬದುಕಿ ಬಂದಿದ್ದೇ ಪವಾಡ: ಪ್ರಯಾಗರಾಜ್‌ನ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಬೇಕೆಂದು ನಾವು ಜ.28ರ ರಾತ್ರಿ 12 ಗಂಟೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಸ್ನಾನ ಮುಗಿಸಿ ಲಕ್ಷಾಂತರ ಜನರು ನಮ್ಮ ಎದುರುಗಡೆಯಿಂದ ಬರುತ್ತಿದ್ದರು. ಜನರು ಮುಖಾಮುಖಿಯಾಗಿ ಒಬ್ಬರನ್ನೊಬ್ಬರು ತಳ್ಳಲು ಆರಂಭಿಸಿದರು. ಎಲ್ಲರೂ ಗಾಬರಿಯಿಂದ ಓಡುವ ಧಾವಂತದಲ್ಲಿದ್ದರು. ತುಳಿದುಕೊಂಡು ಹೋಗುತ್ತಿದ್ದರು. ಕಿರುಚಾಡಿದರೂ ಯಾರೂ ರಕ್ಷಣೆಗೆ ಬರಲಿಲ್ಲ. ಅಲ್ಲಿಂದ ನಾವು ಬದುಕಿ ಬಂದಿದ್ದೆ ಪವಾಡ ಎಂದು ಕಾಲ್ತುಳಿತದಲ್ಲಿ ಗಾಯಗೊಂಡ ಬೆಳಗಾವಿಯ ಸರೋಜಾ ನಡುವಿನಹಳ್ಳಿ ಹೇಳಿದರು.
ಕಾಲ್ತುಳಿತದ ವೇಳೆ ಎಲ್ಲರೂ ಮೈಮೇಲಿದ್ದ ಬಟ್ಟೆಗಳು, ಚಿನ್ನಾಭರಣ, ಮೊಬೈಲ್, ಬ್ಯಾಗ್‌ಗಳನ್ನು ಮರೆತು ಜೀವ ಉಳಿಸಿಕೊಳ್ಳಲು ಹರಸಾಹಸ ಮಾಡಿ ಓಡಬೇಕಾಯಿತು. ರಾತ್ರಿ 12 ಗಂಟೆಗೆ ಕಾಲ್ತುಳಿತದ ಘಟನೆ ನಡೆಯಿತು. ಅನೇಕರು ಉಸಿರುಗಟ್ಟಿ ಅಲ್ಲಿಯೇ ಸಾವನ್ನಪ್ಪಿದರು. ಬಟ್ಟೆ, ಚಪ್ಪಲಿ, ಬ್ಯಾಗ್‌ಗಳ ರಾಶಿ ಬಿದ್ದಿತ್ತು ಎಂದು ಕರಾಳ ಘಟನೆ ನೆನಪಿಸಿಕೊಂಡರು.ತಾಯಿ, ಮಗಳ ಅಂತ್ಯಕ್ರಿಯೆ: ಪ್ರಯಾಗರಾಜ್ ಮಹಾಕುಂಭ ಮೇಳದಲ್ಲಿ ಕಾಲ್ತುಳಿತದಿಂದ ಸಾವಿಗೀಡಾದ ಬೆಳಗಾವಿಯ ತಾಯಿ ಮತ್ತು ಮಗಳ ಅಂತ್ಯಕ್ರಿಯೆ ಶುಕ್ರವಾರ ಶಹಾಪುರದ ಸ್ಮಶಾನ ಭೂಮಿಯಲ್ಲಿ ವಿಧಿ ವಿಧಾನಗಳೊಂದಿಗೆ ನೆರವೇರಿತು. ವಡಗಾವಿಯ ಜ್ಯೋತಿ ಹತ್ತರವಾಠ ಮತ್ತು ಅವರ ಪುತ್ರಿ ಮೇಘಾ ಹತ್ತರವಾಠ ಅವರ ಮೃತದೇಹಗಳನ್ನು ಗೋವಾದಿಂದ ಬೆಳಗಾವಿಗೆ ಗುರುವಾರ ತಡರಾತ್ರಿ ಆ್ಯಂಬುಲೆನ್ಸ್ ಮೂಲಕ ತರಲಾಯಿತು. ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಬರಮಾಡಿಕೊಂಡರು. ಈ ವೇಳೆ ವಿಶೇಷ ಜಿಲ್ಲಾಧಿಕಾರಿ ಹರ್ಷ ಶೆಟ್ಟಿ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ ಇತರರು ಇದ್ದರು.
ಜಿಲ್ಲಾಸ್ಪತ್ರೆ ಶವಾಗಾರದಲ್ಲಿ ಶುಕ್ರವಾರ ಬೆಳಗ್ಗೆ 7 ಗಂಟೆಗೆ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕುಟುಂಬಸ್ಥರಿಗೆ ಜಿಲ್ಲಾಡಳಿತ ಶವಗಳನ್ನು ಹಸ್ತಾಂತರಿಸಿತು. ಬಳಿಕ ಶವಗಳನ್ನು ವಡಗಾವಿಯ ಮನೆಗೆ ತೆಗೆದುಕೊಂಡು ಹೋಗಲಾಯಿತು. ಅವರ ಸಾಕು ನಾಯಿ ಕೂಡ ತಮ್ಮ ಮಾಲೀಕರ ಅಂತಿಮ ದರ್ಶನ ಪಡೆಯಿತು. ಈ ದೃಶ್ಯ ಕರುಳು ಹಿಂಡುವಂತಿತ್ತು. ಶವಗಳು ಮನೆಗೆ ಬರುತ್ತಿದ್ದಂತೆಯೇ ಕುಟುಂಬಸ್ಥರು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.ಶಹಾಪುರದ ಸ್ಮಶಾನ ಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿತು. ಪತ್ನಿ ಜ್ಯೋತಿ ಹತ್ತರವಾಠ , ಬಳಿಕ ಪುತ್ರಿ ಮೇಘಾ ಅವರ ಚಿತೆಗೆ ದೀಪಕ ಹತ್ತರವಾಠ ಅವರು ಅಗ್ನಿಸ್ಪರ್ಶ ಮಾಡಿದರು.