ನಮ್ಮ ಜಮೀನು ಉಳಿಸಿಕೊಡಿ, ಇಲ್ಲವಾದ್ರೆ ವಿಷ ಕೊಡಿ: ಡಿಸಿ ಕಚೇರಿ ಎದುರು ರೈತರ ಬೃಹತ್ ಪ್ರತಿಭಟನೆ

| Published : Aug 14 2024, 12:46 AM IST

ನಮ್ಮ ಜಮೀನು ಉಳಿಸಿಕೊಡಿ, ಇಲ್ಲವಾದ್ರೆ ವಿಷ ಕೊಡಿ: ಡಿಸಿ ಕಚೇರಿ ಎದುರು ರೈತರ ಬೃಹತ್ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗ ಜಿಲ್ಲಅಧಿಕಾರಿ ಕಚೇರಿ ಎದುರು ಮಂಗಳವಾರ ಮಲೆನಾಡು ರೈತರ ಹೋರಾಟ ಸಮಿತಿ ನೇತೃತ್ವದಲ್ಲಿ ರೈತರು ರೈತರ ಮೇಲೆ ದೌರ್ಜನ್ಯ ಖಂಡಿಸಿ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ನಮ್ಮ ಜಮೀನು ಉಳಿಸಿಕೊಡಿ, ಇಲ್ಲವಾದರೆ ನೀವೇ ವಿಷ ಕೊಡಿ ಎಂದು ಒತ್ತಾಯಿಸಿ ಮಲೆನಾಡು ರೈತರ ಹೋರಾಟ ಸಮಿತಿ ನೇತೃತ್ವದಲ್ಲಿ ರೈತರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿದರು.

ರೈತರ ಮೇಲೆ ದೌರ್ಜನ್ಯ ನಡೆಸಿ ಅವರು ಬೆಳೆಸಿದ್ದ ತೆಂಗಿನ ಮರಗಳನ್ನು ಜೆಸಿಬಿ ಮೂಲಕ ಕಿತ್ತು ಹಾಕಿದ್ದಾರೆ. ಈ ಕೃತ್ಯ ಎಸಗಿರುವ ವನ್ಯಜೀವಿ ವಲಯದ ವಲಯ ಅರಣ್ಯಾಧಿಕಾರಿ ಗುರುರಾಜ್, ಉಪ ವಲಯ ಅರಣ್ಯಾಧಿಕಾರಿ ಚನ್ನಬಸಪ್ಪ ಅವರನ್ನು ಕೂಡಲೇ ಬಂಧಿಸಬೇಕು. ಅವರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.

ಶಿವಮೊಗ್ಗ ತಾಲೂಕು ಕಸಬಾ ಹೋಬಳಿ ಆಲದೇವರ ಹೊಸೂರು ಗ್ರಾಮದ ಸರ್ವೆ ನಂ.117 ರಲ್ಲಿ 1967ರಲ್ಲಿ ಪಾರ್ವತಮ್ಮ ಕೋಂ ಓಂಕಾರಪ್ಪ ಅವರಿಗೆ 2 ಎಕರೆ ಜಮೀನು ಮಂಜೂರಾಗಿದೆ. 1976ರ ಏಪ್ರಿಲ್ 24 ರಂದು ಸಾಗುವಳಿ ಚೀಟಿ ನೀಡಲಾಗಿದೆ. ಜಮೀನಿನ ಪೋಡಿ ದುರಸ್ತಾಗಿದೆ. 2018 ರಲ್ಲಿ ಚೇತನ್ ಗೌಡ ಅವರು ಈ 2 ಎಕರೆ ಜಮೀನನ್ನು ಖರೀದಿ ಮಾಡಿದ್ದರು ಎಂದು ತಿಳಿಸಿದರು.

ಇದೇ ಜುಲೈ 26 ರಂದು ತಾಲೂಕು ತಹಶೀಲ್ದಾರ್ ಆಗಸ್ಟ್ 8ರಂದು ಈ ಜಮೀನಿನ ಜಂಟಿ ಸರ್ವೆ ಮಾಡುವ ಬಗ್ಗೆ ಉಪ ಅರಣ್ಯಾಕಾರಿಗೆ ನೋಟಿಸ್ ನೀಡಿದ್ದರು. 2023ರಲ್ಲಿಯೇ ಪ್ರಧಾನ ವ್ಯವಹಾರ ನ್ಯಾಯಾಧೀಶರು ಹಾಗೂ ಜೆಎಂಎಫ್‍ಸಿ ನ್ಯಾಯಾಲಯದಲ್ಲಿ ವಲಯ ಅರಣ್ಯಾಧಿಕಾರಿಗಳು ಆಲದೇವರ ಹೊಸೂರಿನ ಸರ್ವೆ. ನಂ.27 ರಲ್ಲಿ ಯಾವುದೇ ಅರಣ್ಯ ಭೂಮಿ ಇರುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಹೀಗಿದ್ದರೂ ಆಗಸ್ಟ್ 7ರಂದು ಅರಣ್ಯ ಅಧಿಕಾರಿಗಳು ಏಕಾಏಕಿ 15 ಜನರ ತಂಡದೊಂದಿಗೆ ಬಂದು ಜಮೀನಿನಲ್ಲಿದ್ದ ತಂತಿ ಬೇಲಿಯನ್ನು ಕಿತ್ತುಕೊಂಡು ಹೋಗಿದ್ದಾರೆ. ನಂತರ 30 ತೆಂಗಿನ ಮರಗಳನ್ನು ಕಿತ್ತು ದೌರ್ಜನ್ಯ ಎಸಗಿದ್ದಾರೆ. ನಮಗೆ ಅಡ್ಡಿಪಡಿಸಿದರೆ ಬಂದೂಕಿನಿಂದ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದರು.

ಈ ಬಗ್ಗೆ ಶಿವಮೊಗ್ಗ ಉಪವಿಭಾಗಾಕಾರಿ, ತುಂಗಾ ನಗರ ಠಾಣೆಯಲ್ಲಿ ದೂರು ಸಲ್ಲಿಸಲಾಗಿದೆ. ಕೂಡಲೇ ಈ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಕೈಗೊಂಡು ಸರ್ಕಾರಿ ಹುದ್ದೆಯಿಂದ ಅಮಾನತು ಮಾಡಬೇಕು. ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.

ಪ್ರಮುಖರಾದ ತೀ.ನಾ.ಶ್ರಿನಿವಾಸ್, ರಮೇಶ್ ನಾಯ್ಕ, ಚೇತನ್ ಗೌಡ, ಸೋಗಾನೆ ಕೃಷ್ಣಪ್ಪ, ಸೀತನಾಯ್ಕ ಇನ್ನಿತರರು ಇದ್ದರು.ಕಾಂಗ್ರೆಸ್‌ಗೆ ಕಾಳಜಿಯಿಲ್ಲ, ಬಿಜೆಪಿಗೆ ಬಿಡುವಿಲ್ಲಆನವಟ್ಟಿಯಲ್ಲಿ ರೈತರ ಜಮೀನು ತೆರವು ಮಾಡಿದ್ದಾರೆ ಎಂದು ಮಧು ಬಂಗಾರಪ್ಪ ಪಾದಯಾತ್ರೆ ಮಾಡಿ ಶಾಸಕ, ಮಂತ್ರಿಯಾದರು. ಮಂಜುನಾಥ ಗೌಡ ಡಿಸಿಸಿ ಬ್ಯಾಂಕ್, ಎಂಎಡಿಬಿ, ಶಿಮುಲ್ ಎಲ್ಲಾ ಕಡೆ ಇರುವುದರಿಂದ ಅವರಿಗೆ ಸಮಯವೇ ಇಲ್ಲ. ಬಿಜೆಪಿಯವರು ರೈತರ ಪರ ಎಂದು ಹೇಳಿಕೆ ನೀಡಿದ್ದು ಬಿಟ್ಟರೆ ಈವರೆಗೆ ಯಾರೂ ಬಂದಿಲ್ಲ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಚುನಾವಣೆ ಮೊದಲು ಮಲೆನಾಡಿನ ಸಮಸ್ಯೆ ಪರಿಹಾರ ಮಾಡುತ್ತೇವೆ ಎಂದು ಹೋದವರು ಏನೂ ಮಾಡಲಿಲ್ಲ. ಈಗ ಸಾವಿರಾರು ರೈತರನ್ನು ತೆರವು ಮಾಡಲು ನೊಟೀಸ್ ಕೊಡುತ್ತಿದ್ದಾರೆ ಎಂದು ಮಲೆನಾಡು ರೈತರ ಹೋರಾಟ ಸಮಿತಿ ಸಂಚಾಲಕ ತೀ.ನ.ಶ್ರೀನಿವಾಸ್ ಕಿಡಿಕಾರಿದರು.