ಕನ್ನಡಪ್ರಭ ವಾರ್ತೆ ಮೈಸೂರು
ಕೆ.ಆರ್.ಎಸ್ ಜಲಾಶಯದ ಮೇಲ್ಭಾಗದ ಪ್ರದೇಶಗಳಿಗೆ ಕಟ್ಟು ಪದ್ಧತಿಯಲ್ಲಾದರೂ ನೀರು ಕೊಟ್ಟು ರೈತರನ್ನು ಸಂಕಷ್ಟದಿಂದ ಪಾರು ಮಾಡಬೇಕು ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಸರ್ಕಾರವನ್ನು ಒತ್ತಾಯಿಸಿದರು.ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮಸಮುದ್ರ, ಹಾರಂಗಿ, ಕಟ್ಟೆಪುರ ಅಣೆಕಟ್ಟೆ, ಬಳ್ಳೂರು ಕಟ್ಟೆ, ಮಿರ್ಲೆ ಶ್ರೇಣಿ, ರಾಮಸಮುದ್ರ, ಹಾರಂಗಿ, ಚಾಮರಾಜ ಎಡ ಮತ್ತು ಬಲದಂಡೆ ನಾಲೆಗೆ ನೀರು ಬಿಟ್ಟರೆ ಸುಮಾರು 70 ಸಾವಿರ ಎಕರೆ ಪ್ರದೇಶಕ್ಕೆ ಅನುಕೂಲವಾಗುತ್ತದೆ ಎಂದರು.
ಬಲದಂಡೆ ನಾಲೆಗಳಿಗೆ ನೀರು ಹರಿಸದಿದ್ದರೆ ಕೆರೆ- ಕಟ್ಟೆಗಳು ತುಂಬುವುದಿಲ್ಲ, ಕೊಳವೆಬಾವಿಗಳ ಮರುಪೂರಣವೂ ಆಗುವುದಿಲ್ಲ. ಮಳೆ ಇಲ್ಲದೇ ಬೆಳೆಗಳು ಒಣಗುತ್ತವೆ. ನಾಲೆಗಳಿಗೆ ನೀರು ಹರಿಸದೇ ಇದ್ದರೆ ಪರಿಸ್ಥಿತಿ ಮತ್ತಷ್ಟು ಚಿಂತಾಜನಕ ಆಗಲಿದೆ. ಕಾವೇರಿ ನೀರು ನಿಯಂತ್ರಣ ಸಮಿತಿಯ ಆದೇಶಕ್ಕೂ ಈ ನಾಲೆಗಳಿಗೆ ನೀರು ಹರಿಸುವುದಕ್ಕೂ ಸಂಬಂಧವಿಲ್ಲ. ಅಡಿಕೆ, ತೆಂಗು ಮೊದಲಾದ ಬೆಳೆಗಳು ಒಣಗಿಹೋದರೆ ಮತ್ತೆ ಹಾಕಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದರು.ಅಧಿಕಾರಿಗಳು ಹಾಗೂ ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಚಾಮರಾಜ ಎಡದಂಡೆ ನಾಲೆಗೆ ಕೊಡುವ ನೀರು ಕೊನೆಯದಾಗಿ ಕೆಆರ್‌ಎಸ್ ಜಲಾಶಯವನ್ನೇ ಸೇರುತ್ತದೆ. ಇದಕ್ಕೆ ಸ್ಪಂದಿಸದಿದ್ದರೆ, ರೈತರ ಜತೆಗೂಡಿ ಸಂಬಂಧಿಸಿದ ಕಚೇರಿಗಳ ಎದುರು ಪ್ರತಿಭಟಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ಚಾಮುಂಡಿಬೆಟ್ಟದಲ್ಲಿ ಆಷಾಢ ಶುಕ್ರವಾರದಂದು ಜನಸಾಮಾನ್ಯರಿಗೆ ಹೆಚ್ಚಿನ ಅವಕಾಶ ಕೊಡಬೇಕು. ಜನರಿಗೆ ತೊಂದರೆ ಆಗದಿರಲೆಂದು, ಬಹಳಷ್ಟು ವರ್ಷಗಳಿಂದ ಆಷಾಢ ಶುಕ್ರವಾರದಂದು ಬೆಟ್ಟಕ್ಕೆ ಹೋಗುವುದನ್ನು ಬಿಟ್ಟಿದ್ದೇನೆ. ವಿಐಪಿಗಳಿಗೆ ದೇವಿ ಒಳ್ಳೆಯದು ಮಾಡಿದ್ದಾಳಲ್ಲವೇ? ಅವರು ಸಾರ್ವಜನಿಕರಿಗೆ ಸುಗಮ ದರ್ಶನಕ್ಕೆ ಅವಕಾಶ ಕೊಡಲಿ ಎಂದರು.
ಬಟ್ಟೆ ಬ್ಯಾಗ್, ಪ್ರಸಾದ ಮಾರಾಟ ಸೇರಿದಂತೆ ಎಲ್ಲದರಲ್ಲೂ ಅಕ್ರಮ ನಡೆಯುತ್ತಿದೆ. ವೈಟ್ ಟ್ಯಾಪಿಂಗ್ ರಸ್ತೆ ನಿರ್ಮಾಣದಲ್ಲೂ ಅಕ್ರಮ ಆಗುತ್ತಿದೆ. ಮುಡಾದ್ದು ಕೂಡ ಒಂದು ಕಮಿಟಿ ಇತ್ತು. ಆ ಕಮಿಟಿ ವರದಿ ನೀಡಿತು. 50:50 ಅನುಪಾತ ರದ್ದುಪಡಿಸಿ ಇನ್ನು ಕಾರ್ಯರೂಪಕ್ಕೆ ಬಂದಿಲ್ಲ. ಇದಕ್ಕೂ ಹೋರಾಟ ಮಾಡಬೇಕಾ? ಈ ವಿಚಾರವನ್ನು ನಮ್ಮ ಶಾಸಕರು ವಿಧಾನಮಂಡಲ ಅಧಿವೇಶನದಲ್ಲಿ ಪ್ರಶ್ನಿಸಿದ್ದಾರೆ. ನಾನು ಕೂಡ ಹೋರಾಟ ಮಾಡುತ್ತೇನೆ ಎಂದರು.
ಹಿಂದೆ ಕಲುಷಿತ ಆಗಿರಲಿಲ್ಲವೇ:ರಾಜಕೀಯ ಕಲುಷಿತ ಆಗಿದೆ ಎಂದು ಸಿದ್ದರಾಮಯ್ಯ ಅವರು ಹೇಳಿಕೆ ನೀಡಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಮುಂಚೆ ರಾಜಕೀಯ ಕಲುಷಿತ ಆಗಿರಲಿಲ್ಲವೇ? ರಾಜೀನಾಮೆ ನೀಡಿದ ಕೆಲವೇ ದಿನಗಳಲ್ಲಿ ಆಗಿದೆಯೇ? ಅವರು ಪುತ್ರ ಯತೀಂದ್ರ ಅವರನ್ನು ಮಂತ್ರಿ ಮಾಡುವುದಿಲ್ಲ ಎಂದು ಭಾವಿಸಿದ್ದೆ. ಅವರನ್ನು ನಂಬಿ ಹೋದ ಜನತಾ ಪರಿವಾರದವರ ಮನಸ್ಸಿಗೆ ನೋವಾಗದಿರಲೆಂದು ಅಂತಹ ನಿರ್ಧಾರ ಮಾಡುತ್ತಾರೆ ಎಂದುಕೊಂಡಿದ್ದೆ. ಆದರೆ, ಅದು ಸುಳ್ಳಾಯಿತು ಎಂದರು.
ಶಿಲ್ಪಾಗೆ ನೆರವು:ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ದೇಶಕ್ಕೆ ಕಂಚಿನ ಪದಕ ತಂದುಕೊಟ್ಟ ಪ್ಯಾರಾ ಅಥ್ಲೀಟ್ ಕೆ.ಎಸ್. ಶಿಲ್ಪಾ ಇಡೀ ದೇಶವೇ ಮೆಚ್ಚುವ ಕೆಲಸ ಮಾಡಿದ್ದಾರೆ. ಇದು ಕೆ.ಆರ್. ನಗರ ತಾಲೂಕಿಗೆ ಹೆಮ್ಮೆಯ ವಿಷಯ. ಅವರು ಆ ಕ್ಷೇತ್ರದಲ್ಲಿ ಮುಂದುವರಿಯಲು ರೈತ ಕುಟುಂಬವಾದ್ದರಿಂದ ತೊಡಕಾಗಿದೆ. ಅವರಿಗೆ ನಾನು ನೆರವಾಗಲಿದ್ದೇನೆ. ಕೃತಕ ಕಾಲು ಜೋಡಣೆಗೆ 4 ಲಕ್ಷದಿಂದ 5 ಲಕ್ಷ ಬೇಕಾಗಬಹುದು, ಆಗ ಸಾ.ರಾ. ಸ್ನೇಹ ಬಳಗದಿಂದ ಸಹಾಯ ಮಾಡಬಹುದು ಎಂದು ಅವರು ಹೇಳಿದರು.
ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ, ಜಿಲ್ಲಾಧ್ಯಕ್ಷ ಎಂ. ಅಶ್ವಿನ್ ಕುಮಾರ್, ಮುಖಂಡರಾದ ಸಿ.ಜೆ. ದ್ವಾರಕೀಶ್, ಎಸ್. ಮಾದೇಗೌಡ ಇದ್ದರು.