ನಾಲ್ವರನ್ನು ರಕ್ಷಿಸಿ, ಪ್ರಾಣಾಪಾಯಕ್ಕೆ ಸಿಲುಕಿದ ನಗರಸಭಾ ಸದಸ್ಯ!

| Published : Jul 09 2024, 12:54 AM IST

ನಾಲ್ವರನ್ನು ರಕ್ಷಿಸಿ, ಪ್ರಾಣಾಪಾಯಕ್ಕೆ ಸಿಲುಕಿದ ನಗರಸಭಾ ಸದಸ್ಯ!
Share this Article
  • FB
  • TW
  • Linkdin
  • Email

ಸಾರಾಂಶ

ನಗರಸಭಾ ಸದಸ್ಯ ವಿಜಯ ಕೊಡವೂರ್‌ ದಿನವಿಡೀ ಕಾರ್ಯಾಚರಣೆ ನಡೆಸಿ ಸುಮಾರು 9 ಕಟುಂಬಗಳ ಮಕ್ಕಳು, ಮಹಿಳೆಯರು, ಮುದುಕರ ಸೇರಿ ಸುಮಾರು 55ಕ್ಕೂ ಹೆಚ್ಚು ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಒಂದು ಕುಟುಂಬದ ನಾಲ್ವರನ್ನು ಹಗ್ಗದ ಸಹಾಯದಿಂದ ರಕ್ಷಿಸಿ ಜೀವವುಳಿಸಿದ ನಗರಸಭಾ ಸದಸ್ಯರೇ ಹೊಳೆಯಲ್ಲಿ ಕೊಚ್ಚಿಕೊಂಡು ಹೋಗಿ ಪ್ರಾಣಾಪಾಯಕ್ಕೆ ಸಿಲುಕಿದ ಘಟನೆ ಭಾನುವಾರ ಸಂಜೆ ಕೊಡವೂರಿನಲ್ಲಿ ನಡೆದಿದೆ.

ನಗರಸಭಾ ಸದಸ್ಯ ವಿಜಯ ಕೊಡವೂರು ಅವರು ತಮ್ಮ ವಾರ್ಡಿನಲ್ಲಿ ಪ್ರವಾಹ ಪೀಡಿತ ಪ್ರದೇಶಗ ಜನರಿಗೆ ತಕ್ಷಣ ಮನೆ ಖಾಲಿ ಮಾಡಿ ಸುರಕ್ಷಿತ ಪ್ರದೇಶಕ್ಕೆ ತೆರಳುವುದಕ್ಕೆ ಬೆಳಗ್ಗೆಯಿಂದಲೇ ವ್ಯವಸ್ಥೆ ಮಾಡಿದ್ದರು. ಅದರಂತೆ ಇಲ್ಲಿನ ಬಾಲಚನಬೈಲು ಎಂಬಲ್ಲಿ ಹೊಳೆಯಾಚೆ ವಾಸಿಸುತ್ತಿರುವ ಇಬ್ಬರು ಪುಟ್ಟ ಮಕ್ಕಳು ಮತ್ತು ಹೆತ್ತವರಿರುವ ಕುಟುಂಬಕ್ಕೂ ಎತ್ತರದ ಪ್ರದೇಶಕ್ಕೆ ತೆರಳಲು ಸೂಚಿಸಿದ್ದರು.

ದಿನವಿಡೀ ಕಾರ್ಯಾಚರಣೆ ನಡೆಸಿ ಸುಮಾರು 9 ಕಟುಂಬಗಳ ಮಕ್ಕಳು, ಮಹಿಳೆಯರು, ಮುದುಕರ ಸೇರಿ ಸುಮಾರು 55ಕ್ಕೂ ಹೆಚ್ಚು ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಿ, ಸಂಜೆ ಮನೆಗೆ ಹಿಂತಿರುಗುವಾಗ ಬಾಚನಬೈಲಿನ ಕುಟುಂಬದ ಮನೆ ಸುತ್ತ ಪ್ರವಾಹ ಏರಿದ್ದು, ಮಕ್ಕಳು ಜೀವಭಯದಿಂದ ಕೂಗುತ್ತಿದ್ದಾರೆ ಎಂಬ ಮಾಹಿತಿ ಬಂತು.

ತಕ್ಷಣ ಸ್ಥಳಕ್ಕೆ ಧಾವಿಸಿದಾಗ ನದಿಯಲ್ಲಿ ಪ್ರವಾಹ ತುಂಬಿತ್ತು, ದೋಣಿಯೂ ಇರಲಿಲ್ಲ, ಹಗ್ಗವೊಂದನ್ನು ವ್ಯವಸ್ಥೆ ಮಾಡಿ ಸ್ವತಃ ವಿಜಯ ಅವರೇ ಹಗ್ಗ ಹಿಡಿದು ಹೊಳೆಗಿಳಿದರು. ಮೊದಲಿಬ್ಬರು ಮಕ್ಕಳನ್ನು ನಂತರ ಗಂಡಹೆಂಡತಿಯನ್ನು, ಅವರ ಗೃಹಸಾಮಾನು ಸರಂಜಾಮುಗಳ ಸಹಿತ ಜೀವದ ಹಂಗು ತೊರೆದು ಈಚೆಗೆ ಕರೆತಂದರು.

ನಂತರ ಮತ್ತೆ ಆಚೆ ದಡಕ್ಕೆ ತೆರಳಿ ಮರಕ್ಕೆ ಕಟ್ಟಿದ್ದ ಹಗ್ಗವನ್ನು ಬಿಚ್ಚಿ, ಇನ್ನೇನೂ ಈಚೆ ದಡಕ್ಕೆ ಬರುವಷ್ಟರಲ್ಲಿ ಪ್ರವಾಹ ಸೆಳೆತಕ್ಕೆ ಸಿಲುಕಿ ವಿಜಯ ಅವರು ನೀರಲ್ಲಿ ಮುಳುಗಿ ಕೊಚ್ಚಿಕೊಂಡು ಹೋದರು. ದಡದ್ದಲ್ಲಿದ್ದವರು ಗಾಬರಿಯಿಂದ ಬೊಬ್ಬೆ ಹೊಡೆಯಲಾರಂಭಿಸಿದರು. ಅದೃಷ್ಟವಶಾತ್, ನೀರಲ್ಲಿ ಮುಳುಗಿ ಜೀವಭಯದಿಂದ ತಡಕಾಡುತ್ತಿದ್ದ ವಿಜಯ ಅವರ ಕೈಗೆ ನೀರಿನಲ್ಲಿ ಕೊಚ್ಚಿಕೊಂಡು ಬಂದ ಹಗ್ಗ ಸಿಲುಕಿತು. ತಕ್ಷಣ ಅದನ್ನು ಗಟ್ಟಿಯಾಗಿ ಹಿಡಿದು ಹರಸಾಹಸಪಟ್ಟು ದಡ ಸೇರಿದರು.

ಈ ಬಗ್ಗೆ ಕನ್ನಡಪ್ರಭದೊಂದಿಗೆ ಮಾತನಾಡಿದ ವಿಜಯ ಕೊಡವೂರು, ಆ ನಾಲ್ಕು ಮಂದಿಯನ್ನು ರಕ್ಷಿಸಿದ ಪುಣ್ಯವೇ ನನ್ನನ್ನು ರಕ್ಷಿಸಿತು ಎಂದು ಉದ್ಗರಿಸಿದ್ದಾರೆ.

ಅವರು ನಾಲ್ಕು ಮಂದಿಯನ್ನು ಹಗ್ಗದ ಸಹಾಯದಿಂದ ಈಚೆ ದಡಕ್ಕೆ ಸೇರಿಸುವ ವಿಡಿಯೋ ಇದೀಗ ವೈರಲ್ ಆಗುತ್ತಿದೆ.