ಸಾರಾಂಶ
ಪರ್ಷಿಯನ್ ಸಾಹಿತ್ಯವು ಗದ್ಯ ಸಾಹಿತ್ಯಕ್ಕಿಂತ ಹೆಚ್ಚಾಗಿ ಕಾವ್ಯ ಸಾಹಿತ್ಯಕ್ಕೆ ಹೆಚ್ಚು ಮನ್ನಣೆ ನೀಡಿದ್ದು ಕನ್ನಡಕ್ಕೆ ಅನುವಾದವಾಗುವ ಸಂದರ್ಭದಲ್ಲಿಯೂ ಇದನ್ನು ಗಮನಿಸಬಹುದು.
ಹೊಸಪೇಟೆ: ಪರ್ಷಿಯನ್‌ನಿಂದ ಕನ್ನಡಕ್ಕೆ ಸಾಹಿತ್ಯ ಕೃತಿಗಳು ಮಧ್ಯವರ್ತಿ ಭಾಷೆಗಳ ಮೂಲಕವೇ ಹೆಚ್ಚಾಗಿ ಅನುವಾದವಾಗಿವೆ ಎಂದು ಸಂಶೋಧಕಿ ಲೀಲಾವತಿ ಎಂ.ಎಸ್. ಹೇಳಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಭಾಷಾಂತರ ಅಧ್ಯಯನ ವಿಭಾಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ವ್ಯಾಖ್ಯಾನ’ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮದಲ್ಲಿ ‘ಕನ್ನಡ ಮತ್ತು ಪರ್ಷಿಯನ್ : ಭಾಷಿಕ ಸಂಬಂಧ’ ವಿಷಯದ ಕುರಿತು ಅವರು ಮಾತನಾಡಿದರು.ಪರ್ಷಿಯನ್ ಸಾಹಿತ್ಯವು ಗದ್ಯ ಸಾಹಿತ್ಯಕ್ಕಿಂತ ಹೆಚ್ಚಾಗಿ ಕಾವ್ಯ ಸಾಹಿತ್ಯಕ್ಕೆ ಹೆಚ್ಚು ಮನ್ನಣೆ ನೀಡಿದ್ದು ಕನ್ನಡಕ್ಕೆ ಅನುವಾದವಾಗುವ ಸಂದರ್ಭದಲ್ಲಿಯೂ ಇದನ್ನು ಗಮನಿಸಬಹುದು ಎಂದರು.
ಕನ್ನಡಕ್ಕೆ ‘ಉಮರನ ಒಸಗೆ’ಯ ಅನುವಾದದಿಂದ ಆರಂಭವಾದ ಪರ್ಶಿಯನ್ ಕಾವ್ಯ ಸಾಹಿತ್ಯ ರೂಮಿ, ಪಿರ್ದೋಶಿ, ಮಿರ್ಜಾ ಗಾಲಿಬ್‌ರ ಮೂಲಕ ಕನ್ನಡ ಓದುಗರಿಗೆ ಹೊಸ ಕಾವ್ಯ ಶೈಲಿಯನ್ನು ದೊರಕಿಸಿಕೊಟ್ಟಿತು ಎಂದು ಕೆಲವು ಪರ್ಷಿಯನ್ ಕವಿಗಳ ಅನುವಾದಿತ ಕಾವ್ಯಗಳನ್ನು ವಾಚನ ಮಾಡುವ ಮೂಲಕ ವಿವರಿಸಿದರು.ಅನಂತ ಕೆ. ಮಾತನಾಡಿ, ಯಾವುದೇ ಭಾಷೆಗಳಿಗೆ ಗಡಿಗಳ ಸಂಬಂಧವಿರಬೇಕು. ಸಾಂಸ್ಕೃತಿಕ ಸಂಬಂಧವಿರಬೇಕು. ಇಲ್ಲವೇ ಅಧಿಕಾರದ ಬೆಂಬಲವಿರಬೇಕು. ಆಗ ಮಾತ್ರ ಒಂದು ಭಾಷೆ ಜನ ಸಾಮಾನ್ಯರಲ್ಲಿ ಪಸರಿಸಲು ಸಾಧ್ಯವಾಗುತ್ತದೆ. ಅಂತೆಯೇ ಪರ್ಷಿಯನ್ ಮತ್ತು ಇಂಗ್ಲೀಷ್ ಭಾಷೆಗಳು ಭಾರತದಲ್ಲಿ ತನ್ನದೇ ಆದ ಪ್ರಭಾವವನ್ನು ಬೀರಿವೆ ಎಂದು ಹೇಳಿದರು.
ಸಂಚಾಲಕ ವಿನಿತಾ ಜೆ.ಎಂ, ಶ್ವೇತಾ ಬಾಳಿ ಹಾಗೂ ಸಂಶೋಧಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶ್ವೇತಾ ಬಾಳಿ ಅವರು ಸ್ವಾಗತಿಸಿದರು, ರೆಬೆಕ್ಕ ನಿರೂಪಿಸಿದರು.