ಸಾರಾಂಶ
ಅಳ್ನಾವರ:
ಸಮಯ ಪಾಲನೆ ಮೂಲಕ ನಿಮ್ಮಲ್ಲಿರುವ ಜ್ಞಾನದ ಮೇಲೆ ಆತ್ಮ ನಂಬಿಕೆಯಿಂದ ಓದಿನಲ್ಲಿ ತೊಡಗಿದರೆ, ಗುರಿ ಸಾಧನೆಗೆ ಅಡಚಣೆಯಾಗದು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ವಿದ್ಯಾರ್ಥಿಗಳಿಗೆ ಹೇಳಿದರು.ತಾಲೂಕಿನ ಬೆಣಚಿ ಪ್ರೌಢಶಾಲೆಗೆ ಬುಧವಾರ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ನಂತರ ಅಳ್ನಾವರದ ಅನ್ನಪೂರ್ಣ ಹಿರೇಮಠ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರುಗಿದ ಸಭೆಯಲ್ಲಿ ಶಿಕ್ಷಕರು, ಪಾಲಕರು ಮತ್ತು ವಿದ್ಯಾರ್ಥಿಗಳೊಂದಿಗೆ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಹೆಚ್ಚಳಕ್ಕೆ ಕೈಕೊಳ್ಳಬೇಕಾದ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಿದರು. ಮಕ್ಕಳು ಒತ್ತಡವನ್ನು ದೂರ ಮಾಡಿಕೊಂಡು ಏಕಾಗ್ರತೆಯಿಂದ ಓದಿನಲ್ಲಿ ತೊಡಗಿ ಪರೀಕ್ಷೆ ಬರೆಯಲು ಮಾನಸಿಕವಾಗಿ ಸಿದ್ಧರಾಗಬೇಕೆಂದರು.
ಪ್ರತಿ ಶಾಲೆಯಲ್ಲಿ ಕಲಿಕಾ ವಾತಾವರಣ ನಿರ್ಮಿಸಲು ಶಿಕ್ಷಕರು, ಎಸ್‌ಡಿಎಂಸಿ, ಪಾಲಕರು ಗ್ರಾಮಸ್ಥರು ಪ್ರಯತ್ನಿಸಿದರೆ ಜಿಲ್ಲೆಗೆ ಇರುವ "ವಿದ್ಯಾಕಾಶಿ " ಬಿರುದು ಶಾಶ್ವತವಾಗಿರುವಂತೆ ಮಾಡಬಹುದಾಗಿದೆ. ಇದರ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದರು.ಜಿಲ್ಲೆಯಲ್ಲಿ ಪ್ರಾರಂಭಿಸಿರುವ ಮಿಶನ್ ವಿದ್ಯಾಕಾಶಿ ಕಾರ್ಯಕ್ರಮದ ಬಗ್ಗೆ ಅನಿಸಿಕೆ ಆಲಿಸಿ ಜಿಲ್ಲೆಯ ಫಲಿತಾಂಶ ಹೆಚ್ಚಿಸಲು ಜಿಲ್ಲಾಡಳಿತದಿಂದ ಶಿಕ್ಷಣ ತಜ್ಞರಿಂದ ಪ್ರಶ್ನೆ ಪತ್ರಿಕೆಗಳನ್ನು ಶಾಲೆಗಳಿಗೆ ವಿತರಿಸಿ ರೂಢಿ ಪರೀಕ್ಷೆ ಆಯೋಜಿಸಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳಿಗೆ ಪರೀಕ್ಷಾ ಭಯ ಹೋಗಲಾಡಿಸಿ ಕಲಿಕಾ ಆಸಕ್ತಿ ಮೂಡಿಸಲು ಮತ್ತು ಓದಿದ ವಿಷಯ ಬರವಣಿಗೆ ಮೂಲಕ ಹೊರಗೆ ಹಾಕುವುದು ಮತ್ತು ಮನದಟ್ಟು ಮಾಡಿಕೊಳ್ಳಲು ಸಹಕಾರಿ ಎಂದು ಹೇಳಿದರು.
ಆಯಾ ಶಾಲೆಗಳಲ್ಲಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಅವರಿಗೆ ಮನದಟ್ಟಾಗುವಂತೆ ಬೋಧಿಸಿ ಹೆಚ್ಚಿನ ಸಮಯ ಕಲಿಕೆಯಲ್ಲಿ ತೊಡಗುವಂತೆ ಮನ ಪರಿವರ್ತನೆ ಮಾಡಲಾಗುವುದು. ಜತೆಗೆ ಹೆಚ್ಚಿನ ಅಂಕ ಗಳಿಕೆಗೆ ಪ್ರತಿ ತಾಲೂಕಿನಲ್ಲಿ ವಿಶೇಷ ಕಾರ್ಯಾಗಾರ ನಡೆಸಲಾಗುತ್ತಿದೆ. ಮಕ್ಕಳಲ್ಲಿ ಓದು, ಬರಹ, ನಿತ್ಯದ ಚಟುವಟಿಕೆಯ ಒಂದು ಭಾಗವಾಗಿಸಿಕೊಳ್ಳಲು ಪ್ರೇರೇಪಿಸುವುದು ಶಿಕ್ಷಕರ ಜವಾಬ್ದಾರಿ ಎಂದರು.ಇದೇ ವೇಳೆ ತಾಲೂಕಿನ ಅರವಟಗಿ ಹಾಗೂ ಅಂಬೊಳ್ಳಿ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ, ಮಕ್ಕಳು, ಗರ್ಭಿಣಿ, ಬಾಣಂತಿಯರಿಗೆ ವಿತರಿಸುವ ಆಹಾರದ ಗುಣಮಟ್ಟ ಪರಿಶೀಲಿಸಿದರು. ಮಕ್ಕಳೊಂದಿಗೆ ಕೆಲ ಹೊತ್ತು ಕಳೆದು, ನಂತರ ಅಂಬೊಳ್ಳಿ ಮತ್ತು ಗೌಳಿ ದಡ್ಡಿ, ಡೋರಿ ಹಾಗೂ ಬೆಣಚಿ ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಿದರು.
ಬೆಣಚಿಯಲ್ಲಿ ನಡೆಯುವ ಗ್ರಾಮದೇವಿ ಜಾತ್ರಾ ಉತ್ಸವದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕಾಳಿ ನದಿ ನೀರು ಸರಬರಾಜು ಮಾಡಲು ಸಾರ್ವಜನಿಕರು ಜಿಲ್ಲಾಧಿಕಾರಿಗೆ ಮನವಿ ಮಾಡಿದರು. ಆಗ ಸೂಕ್ತ ಕ್ರಮಕೈಕೊಳ್ಳಲು ಸ್ಥಳದಲ್ಲಿದ್ದ ತಹಸೀಲ್ದಾರ್ ಬಸವರಾಜ ಬೆಣ್ಣೆಶಿರೂರ ಮತ್ತು ತಾಪಂ ಇಒ ಪ್ರಶಾಂತ ತುರಕಾಣಿಗೆ ನಿರ್ದೇಶನ ನೀಡಿದರು.ಪಟ್ಟಣದಲ್ಲಿರುವ ಜೇನು ಸಾಕಾಣಿಕೆ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿ, ನಿಯಮಿತವಾಗಿ ತರಬೇತಿ ಶಿಬಿರ ಆಯೋಜಿಸುವಂತೆ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಈ ವೇಳೆ ಬಿಇಒ ರಾಮಚಂದ್ರ ಸದಲಗಿ, ವಾರ್ತಾಧಿಕಾರಿ ಸುರೇಶ ಹಿರೇಮಠ, ಮುಖ್ಯಾಧಿಕಾರಿ ಪ್ರಕಾಶ ಮಗದುಮ್, ಪಿಡಿಒ ನಾಗರಾಜ ಪುಡಕಲಕಟ್ಟಿ ಇದ್ದರು.