ಸಾರಾಂಶ
ಸಿದ್ದಾಪುರ: ದೇವಸ್ಥಾನಗಳನ್ನು ನಿರ್ಮಿಸುವುದು ಕಷ್ಟ. ಅದರಷ್ಟೇ ಕಷ್ಟ ಅದನ್ನು ಉಳಿಸಿಕೊಳ್ಳುವುದು. ದೇವಸ್ಥಾನಗಳು ತನ್ನ ಚಟುವಟಿಕೆಗಳ ಮೂಲಕ ಮುಂದಿನ ಪೀಳಿಗೆಗೆ ತಲುಪಬೇಕು ಎಂದು ಸ್ವರ್ಣವಲ್ಲಿ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳು ನುಡಿದರು. ತಾಲೂಕಿನ ಬಾಳೂರು ಮಲ್ಲಿಕಾರ್ಜುನ ದೇವಸ್ಥಾನ ಟ್ರಸ್ಟ್ ಹಾಗೂ ಸೀಮಾ ಪರಿಷತ್ ಬಾಳೂರಿನಲ್ಲಿ ನೂತನ ದೇವಾಲಯದ ಲೋಕಾರ್ಪಣೆ ಹಾಗೂ ಮಲ್ಲಿಕಾರ್ಜುನ ದೇವರ ಪುನರ್ ಪ್ರತಿಷ್ಠಾಪನೆ ಆಯೋಜಿಸಿದ್ದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ದೇವಸ್ಥಾನಗಳಲ್ಲಿ ನಿತ್ಯ ಪೂಜೆ ನಡೆಯದಿದ್ದರೆ ಮುಂದಿನ ದಿನ ಸರ್ಕಾರ ಅದನ್ನು ತನ್ನ ವಶಕ್ಕೆಪಡೆದುಕೊಳ್ಳಬಹುದು. ಪ್ರಾಚೀನ ಇತಿಹಾಸ ಇರುವ ಇಲ್ಲಿಯ ಮಲ್ಲಿಕಾರ್ಜುನ ದೇವಸ್ಥಾನ ಮುಂದಿನ ದಿನದಲ್ಲಿ ಧರ್ಮ ಹಾಗೂ ಧಾರ್ಮಿಕ ಕ್ಷೇತ್ರವಾಗುವ ಎಲ್ಲ ಲಕ್ಷಣಗಳಿವೆ ಎಂದರು.ಇಂದು ಕುಟುಂಬ ವ್ಯವಸ್ಥೆ ಹದಗೆಡುತ್ತಿದ್ದು, ಕಲಹಗಳು ನಡೆಯುತ್ತಿದೆ. ಹೀಗಾದರೆ ಧಾರ್ಮಿಕ ಕ್ಷೇತ್ರಗಳು ಸರಿಯಾಗಿ ನಡೆಯಲಾರದು. ನಮ್ಮ ಧರ್ಮ ಹಾಗೂ ಧಾರ್ಮಿಕತೆಯನ್ನು ಉಳಿಸಿಕೊಳ್ಳಬೇಕಾದರೆ ಪ್ರತಿಯೊಂದು ಕುಂಟುಬ ಶಿವನ ಕುಟುಂಬದಂತೆ ನಡೆಯಬೇಕು. ಹಿರಿಯರು ಮಕ್ಕಳಿಗೆ ನಮ್ಮ ಸಂಸ್ಕೃತಿ, ಸಂಸ್ಕಾರವನ್ನು ತಿಳಿಸಿಕೊಡಬೇಕು.ಶಂಕರಾಚಾರ್ಯರು ಶ್ರೀಶೈಲ ಕ್ಷೇತ್ರದಲ್ಲಿ ಶಿವಲಹರಿಯನ್ನು ಬರೆದಿದ್ದಾರೆ. ಅಂತಹ ಶಂಕರಾಚಾರ್ಯರನ್ನು ಇಲ್ಲಿ ಪ್ರತಿಷ್ಠಾಪಿಸಲಾಗಿದೆ. ಶಂಕರಾಚಾರ್ಯರು ರಚಿಸಿದ ಶ್ಲೋಕಗಳು ಇಲ್ಲಿ ನಿರಂತರವಾಗಿ ನಡೆಯುವಂತಾಗಬೇಕು. ಭಾರತದ ಮೇಲೆ ಅಸಂಘಟಿತ ಸಂಘಟನೆಗಳಿಂದ ಯುದ್ಧ ನಡೆಯುತ್ತಿದೆ. ಆದ್ದರಿಂದ ನಾವು ಸಾಂಸ್ಕೃತಿಕ ಹಾಗೂ ಶೈಕ್ಷಣಿಕವಾಗಿ ಜಾಗೃತರಾಗಬೇಕಾಗಿದೆ ಎಂದರು.ಶ್ರೀಮನ್ನೆಲೆಮಾವು ಮಠದ ಮಾಧವಾನಂದ ಭಾರತಿ ಸ್ವಾಮಿಗಳು ಆಶೀರ್ವಚನ ನೀಡುತ್ತ ಜೀವನ ಸಾರ್ಥಕವಾಗಬೇಕಾದರೆ ದಾನ ಮತ್ತು ಶಿವಭಜನೆ ಮಾಡಬೇಕು. ದೇವಸ್ಥಾನಕ್ಕೆ ಹೋಗುವಾಗ ನಮ್ಮಲ್ಲಿನ ಅಹಂಕಾರ ದೂರ ಇಡುವುದರ ಜತೆಗೆ ರಾಜಕೀಯವನ್ನು ಮಾಡಬಾರದು ಎಂದರು.ಈ ಸಂದರ್ಭದಲ್ಲಿ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳು ಹಾಗೂ ಮಾಧವಾನಂದ ಭಾರತಿ ಸ್ವಾಮಿಗಳು ಶಿವಾರ್ಪಣಂ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ದೇವಾಲಯ ನಿರ್ಮಿಸಿದ ಡಾ. ಮನು ಹೆಗಡೆ, ದೇವಸ್ಥಾನದ ಅರ್ಚಕ ಸುಬ್ರಾಯ ಭಟ್ಟ ಬಾಳೂರು, ಪುರೋಹಿತರಾದ ವೆಂಕಟ್ರಮಣ ಭಟ್ಟ ಹಾಗೂ ಮತ್ತಿತರರನ್ನು ಶ್ರೀಗಳು ಗೌರವಿಸಿದರು.ಶಂಕರ ಭಟ್ಟ ಮಸ್ಗುತ್ತಿ, ವಿ.ಎನ್. ಹೆಗಡೆ ಬೊಮ್ಮನಹಳ್ಳಿ, ಪ್ರದೀಪ ಹೆಗಡೆ ಕರ್ಜಗಿ, ಗೋಪಾಲಕೃಷ್ಣ ವೈದ್ಯ, ವಿ.ಡಿ. ಭಟ್ಟ ಊರತೋಟ, ಅನಂತಮೂರ್ತಿ ಹೆಗಡೆ, ಜಿ.ವಿ. ಹೆಗಡೆ ಕಾನಗೋಡ, ಜಿ.ಎಂ. ಹೆಗಡೆ ಹೆಗ್ನೂರು, ಎಸ್.ಎಂ. ಹೆಗಡೆ ಬಣಗಿ, ಎಸ್.ಎಸ್. ಭಟ್ಟ ಮಸ್ಗುತ್ತಿ, ಜಿ.ಎಂ. ಹೆಗಡೆ ಚಿಟಮಾಂವ ಹಾಗೂ ಆಡಳಿತ ಮಂಡಳಿ ಸದಸ್ಯರು, ಬಾಳೂರು ಸೀಮಾ ಪರಿಷತ್‌ನ ಸದಸ್ಯರು ಉಪಸ್ಥಿತರಿದ್ದರು. ದೇವಸ್ಥಾನದ ಅಧ್ಯಕ್ಷ ರಾಮಚಂದ್ರ ಭಟ್ಟ ಊರತೋಟ, ಉಪಾಧ್ಯಕ್ಷ ವಿ.ಎಸ್. ಭಟ್ಟ ಮಸ್ಗುತ್ತಿ, ಕಾರ್ಯದರ್ಶಿ ರಾಮಚಂದ್ರ ಹೆಗಡೆ ಹೊಸ್ಮನೆ, ಐ.ಎಸ್. ಭಟ್ಟ ಹಸರಗೋಡ, ಪ್ರಭಾಕರ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು.