ಸಿ.ಟಿ.ರವಿ ಕ್ಷಮೆಯಾಚನೆಗೆ ಆಗ್ರಹಿಸಿ ಸವಿತಾ ಸಮಾಜದಿಂದ ಪ್ರತಿಭಟನೆ

| Published : Nov 04 2025, 12:15 AM IST

ಸಾರಾಂಶ

ಅ. 25ರಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಸವಿತಾ ಸಮಾಜದ ಬಂಧುಗಳನ್ನು ಹಜಾಮ ಎಂದು ಲಘುವಾಗಿ ಟೀಕಿಸುವ ಮೂಲಕ ತಮ್ಮ ಉದ್ಧಟತನ ಮೆರೆದಿದ್ದಾರೆ. ಅವರು ಈ ಪದ ಬಳಸಿರುವುದರಿಂದ ಸಮುದಾಯಕ್ಕೆ ನೋವುಂಟಾಗಿದೆ.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಸವಿತಾ ಸಮಾಜವನ್ನು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅ‍ವಮಾನಿಸಿದ್ದ ಹಿನ್ನೆಲೆ ಮಾಜಿ ಸಚಿವ ಸಿ.ಟಿ. ರವಿ ವಿರುದ್ಧ ತಾಲೂಕು ಸವಿತಾ ಸಮಾಜದ ಮುಖಂಡರು ಧಿಕ್ಕಾರ ಕೂಗುವ ಮೂಲಕ ಸೋಮವಾರ ಪ್ರತಿಭಟಿಸಿದರು. ಪಟ್ಟಣದ ಬಸ್ ನಿಲ್ದಾಣದಿಂದ ಹೊರಟ ಪ್ರತಿಭಟನಾಕಾರರು ಪ್ರಮುಖ ರಸ್ತೆಗಳ ಮೂಲಕ ತೆರಳಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ನಂತರ ತಾಲೂಕು ಕಚೇರಿಗೆ ತಲುಪಿ ಗ್ರೇಡ್- 2 ತಹಸೀಲ್ದಾರ್ ಕುಮಾರ್ ರವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಸವಿತಾ ಸಮಾಜದ ಮುಖಂಡರು ಮಾತನಾಡಿ, ಅ. 25ರಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಸವಿತಾ ಸಮಾಜದ ಬಂಧುಗಳನ್ನು ಹಜಾಮ ಎಂದು ಲಘುವಾಗಿ ಟೀಕಿಸುವ ಮೂಲಕ ತಮ್ಮ ಉದ್ಧಟತನ ಮೆರೆದಿದ್ದಾರೆ. ಅವರು ಈ ಪದ ಬಳಸಿರುವುದರಿಂದ ಸಮುದಾಯಕ್ಕೆ ನೋವುಂಟಾಗಿದೆ. ಈ ಹಿನ್ನೆಲೆ ಅವರು ಸಾರ್ವಜನಿಕವಾಗಿ ಸಮಾಜದ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ವೇಳೆ ಸವಿತಾ ಸಮಾಜದ ತಾಲೂಕು ಅಧ್ಯಕ್ಷ ರಾಚಶೆಟ್ಟಿ(ತಮ್ಮಯ್ಯ), ಪ್ರಧಾನ ಕಾರ್ಯದರ್ಶಿ ಎಸ್.ನವೀನ್ ಕುಮಾರ್, ಉಪಾಧ್ಯಕ್ಷರು ರಾಚಪ್ಪ, ಖಜಾಂಚಿ ಮಹೇಶ್ ಪಾಳ್ಯ, ಮಾಜಿ ಅಧ್ಯಕ್ಷ ಸೋಮಣ್ಣ, ಡಿ.ಎಂ.ಮಹದೇವ, ಸಹ ಕಾರ್ಯದರ್ಶಿ ಮುತ್ತುರಾಜ್, ಸಂಘಟನಾ ಕಾರ್ಯದರ್ಶಿ ಮಹೇಶ್, ಸುರೇಶ್, ರವಿ, ತೇಜ ಬಹದ್ದೂರ್, ಸವಿತಾ ಮಹರ್ಷಿ ಮಹಿಳಾ ಸಂಘ ಅಧ್ಯಕ್ಷೆ ದೊಡ್ಡತಾಯಮ್ಮ ಇನ್ನಿತರಿದ್ದರು.