ಸಾರಾಂಶ
- ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಘಟಕದಿಂದ ವಿಚಾರ ಮಂಥನ-ಸಾವಿತ್ರಿ ಬಾಯಿ ಫುಲೆ ಪ್ರಶಸ್ತಿ ಪ್ರಧಾನ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಸಾವಿತ್ರಿ ಬಾಯಿ ಪುಲೆ ಅವರು ಮಾಡಿದ ಮಹಿಳಾ ಸಮಾನತೆ ಆಂದೋಲನದಿಂದ ಇಡೀ ರಾಷ್ಟ್ರ ವ್ಯಾಪ್ತಿಯಲ್ಲಿ ಮಹಿಳೆಯರಿಗೆ ಶಿಕ್ಷಣ ಪಡೆಯಲು ಸ್ಪೂರ್ತಿಯಾಯಿತು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸೂರಿ ಶ್ರೀನಿವಾಸ್ ತಿಳಿಸಿದರು.
ಗುರುವಾರ ತಾಲೂಕಿನ ಬಿ.ಎಚ್.ಕೈಮರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಆವರಣದಲ್ಲಿ ತಾಲೂಕು ಕಸಾಪ ಮಹಿಳಾ ಘಟಕದ ಆಶ್ರಯದಲ್ಲಿ ನಡೆದ ವಿಚಾರ ಮಂಥನ ಹಾಗೂ ಸಾವಿತ್ರಿ ಬಾಯಿ ಫುಲೆ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಸಾವಿತ್ರಿ ಬಾಯಿ ಫುಲೆ ಅವರಿಗೆ ಶಿಕ್ಷಣ ಪಡೆಯಲು ಹಲವಾರು ಜನರು ಅಡ್ಡಿ ಪಡಿಸಿದ್ದರು. ಆದರೆ, ಅವರು ಹೋರಾಟ ಮಾಡಿ ಶಿಕ್ಷಣ ಪಡೆದು ಪ್ರಥಮ ಮಹಿಳಾ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದ್ದರು. ಹಲವಾರು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಮಹಿಳೆಯರಿಗೆ ಶಿಕ್ಷಣ ಪಡೆಯಲು ಸ್ಫೂರ್ತಿ ನೀಡಿದ್ದರು ಎಂದರು.ಇಂದಿನ ಯುವ ಜನರು ಉತ್ತಮ ಶಿಕ್ಷಣ ಪಡೆಯುತ್ತಿದ್ದಾರೆ. ಆದರೆ, ಜೀವನದಲ್ಲಿ ಸಂಸ್ಕಾರ ಕಳೆದುಕೊಳ್ಳುತ್ತಿದ್ದಾರೆ. ಮಕ್ಕಳು ದೂರದ ವಿದೇಶದಲ್ಲಿದ್ದು ಭಾರತದಲ್ಲಿ ವೃದ್ಧ ತಂದೆ, ತಾಯಿಯರನ್ನು ವೃದ್ಧಾಶ್ರಮಕ್ಕೆ ತಳ್ಳುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು. ವಿದ್ಯೆ ಜೊತೆಗೆ ವಿನಯ, ಸಂಸ್ಕೃತಿ, ಮಾನವೀಯತೆ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು. ತರೀಕೆರೆ ತಾಲೂಕಿನಲ್ಲಿ ಈಗಾಗಲೇ ಕನ್ನಡ ಭವನ ನಿರ್ಮಿಸಲು ನಿವೇಶನ ಮಂಜೂರಾಗಿದೆ. ನರಸಿಂಹರಾಜಪುರದಲ್ಲೂ ಕನ್ನಡ ಭವನಕ್ಕೆ ನಿವೇಶನ ಮಂಜೂರು ಮಾಡಿಸಿಕೊಳ್ಳಬೇಕು. ನಂತರ ಕಟ್ಟಡ ನಿರ್ಮಿಸಲು ಶಂಕುಸ್ಥಾಪನೆ ಮಾಡೋಣ. ಮುಂದಿನ ದಿನಗಳಲ್ಲಿ ತಾಲೂಕು ಕಸಾಪ, ಮಹಿಳಾ ಘಟಕ, ನಗರ ಘಟಕ, ಹೋಬಳಿ ಘಟಕ ಸೇರಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಮಾಡಬೇಕು ಎಂದು ಕರೆ ನೀಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಎಸ್.ಎಸ್. ವೆಂಕಟೇಶ್ ಸಮಾಜ ಸುಧಾರಣೆಯಲ್ಲಿ ಶಿಕ್ಷಕರ ಪಾತ್ರ ಎಂಬ ವಿಷಯವಾಗಿ ಉಪನ್ಯಾಸ ನೀಡಿ, ಗುರುವಿಗೆ ವಿಶೇಷ ಸ್ಥಾನಮಾನ ಇದೆ. ಕೇವಲ ನಾಲ್ಕು ಗೋಡೆಗಳ ಮದ್ಯೆ ಮಕ್ಕಳಿಗೆ ಶಿಕ್ಷಣ ನೀಡುವುದರ ಜೊತೆಗೆ ಹೊರಗಡೆ ಸಮಾಜದಲ್ಲೂ ಮಕ್ಕಳನ್ನು ತಿದ್ದಬೇಕು.ದೇಶದ ಸಮಾಜ ಸುಧಾರಣೆಯಲ್ಲಿ ಶಿಕ್ಷಕರ ಪಾತ್ರ ಬಹಳ ದೊಡ್ಡದಾಗಿದೆ.ಆದರ್ಶ ಗುರು ಇದ್ದರೆ ಅವರ ಶಿಷ್ಯರು ಸಹ ಮುಂದೆ ಆದರ್ಶ ಗುರುಗಳಾಗುತ್ತಾರೆ. ಶಿಕ್ಷಕರು ಊರಿಗೆ ಶಿಕ್ಷಕರಾಗಿ ಅರ್ಪಣಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಪೂರ್ಣೇಶ್ ಮಾತನಾಡಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಶಾಲಾ, ಕಾಲೇಜು ಗಳಲ್ಲೂ ಕನ್ನಡ ಕಾರ್ಯಕ್ರಮ ನೀಡಿ ಮಕ್ಕಳಲ್ಲಿ ಸಾಹಿತ್ಯದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ. ಮಕ್ಕಳು ಮೊಬೈಲ್ ನೋಡುವುದನ್ನು ಕಡಿಮೆ ಮಾಡಿ ಓದುವ ಸಂಸ್ಕೃತಿ ಬೆಳೆಸಿಕೊಳ್ಳಬೇಕು. ಪ್ರತಿ ನಿತ್ಯ ಕನ್ನಡ ದಿನ ಪತ್ರಿಕೆ ಓದುವ ಅಭ್ಯಾಸ ರೂಡಿಸಿಕೊಳ್ಳಬೇಕು. ಹೆಚ್ಚು, ಹೆಚ್ಚು ಕನ್ನಡ ಪುಸ್ತಕಗಳನ್ನು ಓದಿ ಜ್ಞಾನ ಬೆಳೆಸಿಕೊಳ್ಳಿ ಎಂದು ಕರೆ ನೀಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ತಾಲೂಕು ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯ ನಂಜುಂಡಸ್ವಾಮಿ ಮಾತನಾಡಿ, ರಾಜ್ಯದಲ್ಲೇ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೊದಲ ಕಸಾಪ ಮಹಿಳಾ ಜಿಲ್ಲಾ ಘಟಕ, ತಾಲೂಕು ಘಟಕವನ್ನು ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಹುಟ್ಟು ಹಾಕಿದ್ದಾರೆ. ಬಸ್ತಿಮಠ ಸರ್ಕಾರಿ ಶಾಲೆಯಲ್ಲಿ ಕಳೆದ 26 ವರ್ಷದ ಉತ್ತಮ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಶಿಕ್ಷಕಿ ಎಂ.ವಿ.ಶಾರದಾಂಬ ಅವರಿಗೆ ಸಾವಿತ್ರಿ ಬಾಯಿ ಫುಲೆ ಪ್ರಶಸ್ತಿ ನೀಡುತ್ತಿದ್ದೇವೆ ಎಂದರು.ಇದೇ ಸಂದರ್ಭದಲ್ಲಿ ಸಾವಿತ್ರಿ ಬಾಯಿ ಫುಲೆ ಪ್ರಶಸ್ತಿಯನ್ನು ಬಸ್ತಿಮಠದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದೈಹಿಕ ಶಿಕ್ಷಕಿ ಎಂ.ವಿ.ಶಾರದಾಂಬ ಅವರಿಗೆ ಬಿ.ಎಚ್.ಕೈಮರ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಾಚಾರ್ಯ ಮೊಹಮ್ಮದ್ ರಹಮುತ್ತುಲ್ಲಾ ಪ್ರಶಸ್ತಿ ಪ್ರಧಾನ ಪ್ರಧಾನ ಮಾಡಿದರು. ಮುಖ್ಯ ಅತಿಥಿಗಳಾಗಿ ಕಸಾಪ ಹೋಬಳಿ ಘಟಕದ ಅಧ್ಯಕ್ಷೆ ಜುಬೇದ, ತಾ.ಕಸಾಪ ಮಹಿಳಾ ಘಟಕದ ನಿರ್ದೇಶಕಿ ಶ್ಯಾಮಲ ಸತೀಶ್, ಸಾಹಿತಿ ಜಯಮ್ಮ ಭಾನುಮತಿ, ವಸಂತಿ , ನಂದಿನಿ ಆಲಂದೂರು , ಶಶಿಕಲಾ ಉಪಸ್ಥಿತರಿದ್ದರು.