ಸಾವಿತ್ರಿಬಾಯಿ ಫುಲೆ ಇಂದಿನ ಯುವತಿಯರಿಗೆ ಸ್ಫೂರ್ತಿ

| Published : Jan 04 2024, 01:45 AM IST

ಸಾರಾಂಶ

ಗರ್ಭಿಣಿ ಮತ್ತು ಶೋಷಿತ ವಿಧವೆಯರ ಸುರಕ್ಷತೆಗಾಗಿ ತಮ್ಮ ಸ್ವಂತ ಮನೆಯಲ್ಲಿ ಶಿಶುಹತ್ಯೆ ತಡೆಗಟ್ಟುವ ಮನೆ ಪ್ರಾರಂಭಿಸಿದರು. ಸತ್ಯಶೋಧಕ ಸಮಾಜವನ್ನು ಸ್ಥಾಪಿಸಿ, ವರದಕ್ಷಿಣೆ ಅಥವಾ ಬಹಿರಂಗ ವೆಚ್ಚಗಳಿಲ್ಲದೆ ಮದುವೆಗಳನ್ನು ಪ್ರಾರಂಭಿಸಿದ ಭಾರತದ ದಿಟ್ಟ ಮಹಿಳೆ

ಕನ್ನಡಪ್ರಭ ವಾರ್ತೆ ತಾಂಬಾ

ಸಾವಿತ್ರಿಬಾಯಿ ಫುಲೆ ೧೯ನೇ ಶತಮಾನದ ಭಾರತದ ಪ್ರಸಿದ್ಧ ಸಮಾಜ ಸುಧಾರಕಿ, ಕವಿ ಮತ್ತು ಶಿಕ್ಷಣ ತಜ್ಞರಾಗಿದ್ದರು. ಅವರು ಲಿಂಗ ಮತ್ತು ಜಾತಿ ಅಸಮಾನತೆ ವಿರುದ್ಧ ಹೋರಾಡಿ, ಮಹಿಳಾ ಶಿಕ್ಷಣಕ್ಕೆ ಒತ್ತು ನೀಡಿದರು. ಭಾರತೀಯ ಸ್ತ್ರೀವಾದದ ತಾಯಿಯಾಗಿ ಇಂದಿನ ಯುವತಿಯರಿಗೆ ಸ್ಫೂರ್ತಿಯಾಗಿದ್ದಾರೆ ಎಂದು ಶಿಕ್ಷಕ ಸಾಹಿತಿ ಸಂತೋಷ ಬಂಡೆ ಹೇಳಿದರು.

ನಾಗಠಾಣ ಗ್ರಾಮದ ಶ್ರೀ ಮಲ್ಲಿಕಾರ್ಜುನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಸಾವಿತ್ರಿಬಾಯಿ ಫುಲೆ ಜಯಂತಿ ಆಚರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ಗರ್ಭಿಣಿ ಮತ್ತು ಶೋಷಿತ ವಿಧವೆಯರ ಸುರಕ್ಷತೆಗಾಗಿ ತಮ್ಮ ಸ್ವಂತ ಮನೆಯಲ್ಲಿ ಶಿಶುಹತ್ಯೆ ತಡೆಗಟ್ಟುವ ಮನೆ ಪ್ರಾರಂಭಿಸಿದರು. ಸತ್ಯಶೋಧಕ ಸಮಾಜವನ್ನು ಸ್ಥಾಪಿಸಿ, ವರದಕ್ಷಿಣೆ ಅಥವಾ ಬಹಿರಂಗ ವೆಚ್ಚಗಳಿಲ್ಲದೆ ಮದುವೆಗಳನ್ನು ಪ್ರಾರಂಭಿಸಿದ ಭಾರತದ ದಿಟ್ಟ ಮಹಿಳೆ ಅವರಾಗಿದ್ದರು ಎಂದು ಹೇಳಿದರು.

ಶಾಲಾ ದೈಹಿಕ ಶಿಕ್ಷಕ ಎಂ.ಎಸ್ ಪಾಪನಾಳಮಠ ಮಾತನಾಡಿ, ಭಾರತದಲ್ಲಿ ಸಾಮಾಜಿಕ ವಿಮೋಚನೆಗಾಗಿ ಜಾತ್ಯತೀತ ಶಿಕ್ಷಣಕ್ಕೆ ಅವರು ಒತ್ತು ನೀಡಿದ್ದು, ಅವರ ವ್ಯಕ್ತಿತ್ವದ ಮುಖ್ಯ ಗುರುತು. ಶಿಕ್ಷಣ ಮತ್ತು ಜ್ಞಾನ ಹರಡಲು ಅವರು ತಮ್ಮ ಜೀವನವನ್ನು ಮುಡಿಪಾಗಿಟ್ಟರು ಎಂದು ಹೇಳಿದರು. ಸಂಸ್ಥೆಯ ಅಧ್ಯಕ್ಷ ಶಂಕರ ಹುಣಶ್ಯಾಳ ಅಧ್ಯಕ್ಷತೆ ವಹಿಸಿ ಮಾತನಾಡಿ, ಅವರು ಸ್ತ್ರೀವಾದಿ, ಸಮಾಜ ಸುಧಾರಕಿ, ಜಾತಿ ವ್ಯವಸ್ಥೆಯ ನಿರ್ಮೂಲನೆ ಜೊತೆಗೆ ಬಾಲ ವಿಧವೆಯರಿಗೆ ಶಿಕ್ಷಣ ನೀಡಿ, ವಿಮೋಚನೆಗೊಳಿಸಲು ಶ್ರಮಿಸಿದರು. ಅವರು ಲೋಕೋಪಕಾರಿ, ಶಿಶುಹತ್ಯೆ ವಿರೋಧಿ ಹೋರಾಟಗಾರ್ತಿ ಮತ್ತು ಕವಿಯೂ ಆಗಿದ್ದರು. ಅವರ ಪರಂಪರೆಯು ಇಂದಿಗೂ ಜನರನ್ನು ಪ್ರೇರೇಪಿಸುತ್ತಿದೆ ಎಂದು ಹೇಳಿದರು.

ಸಂಸ್ಥೆಯ ಕಾರ್ಯದರ್ಶಿ ಸುನಂದಾ ಹುಣಶ್ಯಾಳ, ಶಿಕ್ಷಕರಾದ ರಾಘು ಮೊಗಳ, ಭೀಮಾಶಂಕರ ಕೋರೆ, ಜಯಶ್ರೀ ಬಂಗಾರಿ, ಬಸಮ್ಮ ವಡಗೇರಿ, ಮಧುಮತಿ ನಿಕ್ಕಂ, ರೂಪಾ ಶಹಾಪುರ, ವೀರೇಶ ಹುಣಶ್ಯಾಳ ಸೇರಿದಂತೆ ಅನೇಕರು ಇದ್ದರು.