ಭಾರತೀಯ ಮಹಿಳೆಯರಲ್ಲಿ ಸ್ವಾಭಿಮಾನ ಬೆಳೆಸಿದ ಸಾವಿತ್ರಿಬಾಯಿ ಫುಲೆ

| Published : Jan 30 2024, 02:06 AM IST

ಭಾರತೀಯ ಮಹಿಳೆಯರಲ್ಲಿ ಸ್ವಾಭಿಮಾನ ಬೆಳೆಸಿದ ಸಾವಿತ್ರಿಬಾಯಿ ಫುಲೆ
Share this Article
  • FB
  • TW
  • Linkdin
  • Email

ಸಾರಾಂಶ

ಸಾವಿತ್ರಿಬಾಯಿ ಫುಲೆ ಅವರು ಇಂದಿನ ಮಹಿಳೆಯರಿಗೆ ಆದರ್ಶವಾಗಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ್ತಿ ಅಕ್ಷತಾ ಕೆ.ಸಿ. ಹೇಳಿದರು.

ಹುಬ್ಬಳ್ಳಿ: ಭಾರತೀಯ ಮಹಿಳೆಯರಲ್ಲಿ ಸ್ವಾಭಿಮಾನ ಬೆಳೆಸಿದ ಸಾವಿತ್ರಿಬಾಯಿ ಫುಲೆ ಪ್ರಾಥಸ್ಮರಣೀಯರಾಗಿದ್ದು, ಅವರ ಹೋರಾಟ, ಶ್ರಮ, ಸಾಧನೆ ಇಂದಿನ ಮಹಿಳೆಯರಿಗೆ ಪ್ರೇರಣೆಯಾಗಲಿ ಎಂದು ಸಾಮಾಜಿಕ ಹೋರಾಟಗಾರ್ತಿ ಹಾವೇರಿಯ ಅಕ್ಷತಾ ಕೆ.ಸಿ. ಆಶಯ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ಎಸ್ಸಿ, ಎಸ್‌ಟಿ ಪ್ರಾಥಮಿಕ, ಮಾಧ್ಯಮಿಕ ಶಾಲಾ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘ ಸೋಮವಾರ ಆಯೋಜಿಸಿದ್ದ ಹುಬ್ಬಳ್ಳಿ ತಾಲೂಕಾ ಶೈಕ್ಷಣಿಕ ಸಮ್ಮೇಳನ-2024, ಸಾವಿತ್ರಿಬಾಯಿ ಫುಲೆ ಜನ್ಮದಿನಾಚರಣೆ, ಸಾವಿತ್ರಿಬಾಯಿ ಫುಲೆ ಉತ್ತಮ ಶಿಕ್ಷಕಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

ಶೂದ್ರರಿಗೆ ಶಿಕ್ಷಣ ಗಗನ ಕುಸುಮ ಆಗಿದ್ದ ಕಾಲದಲ್ಲಿ ಮಹಿಳೆಯರು, ಶೋಷಿತರು, ಅಸ್ಪೃಶ್ಯರ ಮಕ್ಕಳಿಗಾಗಿ ಶಾಲೆಗಳನ್ನು ತೆರೆದು ಅವರನ್ನೆಲ್ಲ ಬೆಳಕಿನೆಡೆಗೆ ಕರೆತಂದ, ಸಾವಿರಾರು ವರ್ಷಗಳ ಕತ್ತಲೆಯಿಂದ ಅವರನ್ನು ಪಾರು ಮಾಡಿದ ಯುಗಪ್ರವರ್ತಕರು ಫುಲೆ ದಂಪತಿಗಳು. ಅವರ ಸಾಮಾಜಿಕ ಸೇವಾ ಕೈಂಕರ್ಯದಿಂದ ಪ್ರೇರಣೆಗೊಂಡ ಡಾ.ಬಿ.ಆರ್‌.ಅಂಬೇಡ್ಕರ್‌ ಉನ್ನತ ಶಿಕ್ಷಣ ಪಡೆಯುವ ಪಣ ತೊಟ್ಟರು. ವಿದೇಶದಲ್ಲಿ ವ್ಯಾಸಂಗ ಮಾಡಿ ಬಂದು ನಮ್ಮೆಲ್ಲರ ಬದುಕಿಗೆ ಘನತೆ ತರುವ ಸಂವಿಧಾನವನ್ನು ನೀಡಿದರು. ಹಾಗಾಗಿ ಸಾವಿತ್ರಿಬಾಯಿ ಫುಲೆ ಅವರು ಇಂದಿನ ಮಹಿಳೆಯರಿಗೆ ಆದರ್ಶವಾಗಿದ್ದಾರೆ ಎಂದರು.

ಲಿಂಗ ತಾರತಮ್ಯ ನಿವಾರಿಸುವ ಮೂಲಕ ಮಹಿಳೆಯರಿಗೆ ಸಮಾನತೆ, ಸ್ವಾತಂತ್ರ್ಯ, ಬದುಕಿಗೆ ಅಗತ್ಯವಿರುವ ಮೂಲಭೂತ ಹಕ್ಕುಗಳನ್ನು ಕರುಣಿಸಿ ತಲೆಯೆತ್ತಿ ಬದುಕುವ ಸಾಮರ್ಥ್ಯ ನೀಡಿದ ಸಂವಿಧಾನ ಮತ್ತು ಬುದ್ಧ, ಬಸವ, ಅಂಬೇಡ್ಕರ್‌, ಪೆರಿಯಾರ್‌, ಕುವೆಂಪು ಅವರನ್ನು ಹೆಚ್ಚು ಹೆಚ್ಚು ಅರ್ಥ ಮಾಡಿಕೊಳ್ಳಬೇಕು ಹಾಗೂ ಆಧರಿಸಬೇಕು ಎಂದು ಅಕ್ಷತಾ ಮಹಿಳೆಯರಿಗೆ ಕರೆನೀಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಹುಬ್ಬಳ್ಳಿ ಗ್ರಾಮೀಣ ಬಿಇಒ ಉಮೇಶ ಬೊಮ್ಮಕ್ಕನವರ, ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು. ಸಾಮಾಜಿಕ ಅಸಮಾನತೆಯಲ್ಲಿ ಮಹಿಳೆ ನೋವು ಉಂಡಿದ್ದರೂ ಶಿಕ್ಷಕಿಯಾಗಿ ಧರ್ಮನಿರಪೇಕ್ಷ, ಜಾತಿಬೇಧವಿಲ್ಲದೇ ಎಲ್ಲ ಮಕ್ಕಳಿಗೆ ಸಮಾನವಾದ ಶಿಕ್ಷಣ ನೀಡಬೇಕಾಗುತ್ತದೆ. ಪ್ರತಿ ಮಗುವಿಗೆ ತನ್ನ ತಾಯಿಯ ನಂತರ ಶಿಕ್ಷಕಿಯೆ ಆದರ್ಶ. ಹಾಗಾಗಿ ವೃತ್ತಿನಿಷ್ಠೆಯಿಂದ ಮಕ್ಕಳಿಗೆ ಜ್ಞಾನ ನೀಡುವಂತೆ ಕಿವಿಮಾತು ಹೇಳಿದರು.

ಹುಬ್ಬಳ್ಳಿ ಶಹರ ಬಿಇಒ ಚನ್ನಪ್ಪಗೌಡರ ಮಾತನಾಡಿ, ಶಿಕ್ಷಕಿಯರೇ ಮುಂದಾಗಿ ಭಾರತದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ ಜಯಂತಿಯನ್ನು ಆಚರಿಸುತ್ತಿರುವುದು ನಿಜಕ್ಕೂ ಉತ್ತಮ ಬೆಳವಣಿಗೆ. ಅವರ ತ್ಯಾಗ, ಸೇವೆ, ಕರುಣೆ ಎಲ್ಲರಿಗೂ ಆದರ್ಶವಾಗಲಿ ಎಂದು ಹಾರೈಸಿದರು.

ಪತ್ರಕರ್ತ ಮಲ್ಲಿಕಾರ್ಜುನ ಸಿದ್ದಣ್ಣವರ ಮಾತನಾಡಿ, ಶೋಷಿತರ ಮಕ್ಕಳು ಮತ್ತು ಮಹಿಳಾ ಶಿಕ್ಷಣಕ್ಕಾಗಿ ತಮ್ಮ ಬದುಕನ್ನೇ ಅರ್ಪಿಸಿದ ಸಾವಿತ್ರಿಬಾಯಿ ಫುಲೆ ಅವರ ಹೋರಾಟ ಇಂದು ಶಿಕ್ಷಕ ವೃತ್ತಿಯಲ್ಲಿರುವ ಮಹಿಳೆಯರಿಗೆ ಆದರ್ಶವಾಗಬೇಕಿದೆ. ಹಿಂದುಳಿದ, ಶೋಷಿತ ವರ್ಗಗಳಲ್ಲಿನ ಒಳಜಾತಿ ನಿರ್ಮೂಲನೆಗಾಗಿ ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹ, ನಿಮಗಿಂತ ಕನಿಷ್ಟ ಸ್ಥಿತಿಯಲ್ಲಿ ಇರುವವರಿಗೆ ನೆರವು, ವಿದವಾ ವಿವಾಹಕ್ಕೆ ಪ್ರೋತ್ಸಾಹಿಸುವುದೇ ಸಾವಿತ್ರಿಬಾಯಿ ಫುಲೆ ಅವರಿಗೆ ನೀಡುವ ನಿಜವಾದ ಗೌರವ ಎಂದರು.

ಎಚ್‌.ಎಂ.ಕುಂದರಗಿ ಅಧ್ಯಕ್ಷತೆ ವಹಿಸಿದ್ದರು. ಎಂ.ಎಸ್‌.ಶಿವಳ್ಳಿಮಠ, ವೈ.ಎಸ್‌.ಶೆರೇವಾಡ, ಆರ್‌.ಎಸ್‌.ಡೊಂಬರ, ಲಲಿತಾ ಕೊಪ್ಪದ, ಜಾನಪದ ತಜ್ಞ ಸಿದ್ದಪ್ಪ ಬಿದರಿ, ಮೋತಿಲಾಲ ರಾಠೋಡ, ಎಸ್‌.ಎಸ್‌.ತಟ್ಟಿಯವರ ಮತ್ತಿತರು ವೇದಿಕೆಯ ಮೇಲಿದ್ದರು.

ಎಂ.ಬಿ.ರಾಠೋಡ ಸ್ವಾಗತಿಸಿದರು, ರಾಜೇಂದ್ರ ಬಿದರಿ ಸ್ವಾಗತಿಸಿದರು.