ಸಾರಾಂಶ
ಕುಕನೂರು: ಸಮಾಜದ ಕೆಂಗಣ್ಣಿಗೆ ಗುರಿಯಾಗಿ, ಶೋಷಿತ ಮಹಿಳೆಯರಿಗೆ ಧ್ವನಿಯಾಗಿ, ಅವರ ಬಾಳಿಗೆ ಬೆಳಕಾಗಿ ಹಗಲಿರುಳು ಶ್ರಮಿಸುತ್ತಾ ಮಹಿಳಾ ಶಿಕ್ಷಣಕ್ಕಾಗಿ ಹೋರಾಡಿದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಪುಲೆ ಎಂದು ಮುಖ್ಯ ಶಿಕ್ಷಕ ಹನುಮಂತಪ್ಪ ಉಪ್ಪಾರ ಹೇಳಿದರು.
ತಾಲೂಕಿನ ಮಂಗಳೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸಾವಿತ್ರಿಬಾಯಿ ಪುಲೆ ಜನ್ಮದಿನಾಚರಣೆ ಕುರಿತು ಅವರು ಮಾತನಾಡಿದರು.ಸ್ತ್ರೀಯೊಬ್ಬಳು ಶಿಕ್ಷಕಿ ಆಗುವುದು ಧರ್ಮಕ್ಕೂ, ಸಮಾಜಕ್ಕೂ ದ್ರೋಹ ಬಗೆದಂತೆ ಎನ್ನುವ ಸಂದಿಗ್ಧ ಸಮಾಜದ ವಾತಾವರಣದಲ್ಲಿ ಅವಮಾನ ಸಹಿಸಿಕೊಂಡು ಪುಂಡರ ಅವಹೇಳನಕಾರಿ ಮಾತುಗಳಿಗೆ ಧೃತಿಗೆಡದೇ ಎಲ್ಲ ಕಷ್ಟಗಳನ್ನು ಮೆಟ್ಟಿನಿಂತು ದಿಟ್ಟತನದಿಂದ ಸಾಮಾಜಿಕ ಕ್ರಾಂತಿಕಾರಿ ಬದಲಾವಣೆಗೆ ನಾಂದಿ ಹಾಡಿದರು ಎಂದರು.
ಪತಿಯ ಸಹಕಾರದಿಂದ ಮಹಾರಾಷ್ಟ್ರದಲ್ಲಿ ಸ್ವತಃ ತಾವೇ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಉಚಿತವಾಗಿ 18 ಸ್ವಂತ ಶಾಲೆಗಳನ್ನು ತೆರೆದು ಆ ಶಾಲೆಯ ಮುಖ್ಯ ಶಿಕ್ಷಕಿಯಾಗಿ, ಸಂಚಾಲಕಿಯಾಗಿ ಕಾರ್ಯನಿರ್ವಹಿಸುತ್ತಾ ಅಭೂತಪೂರ್ವ ಸಾಧನೆ ಮಾಡಿದ್ದಾರೆ ಎಂದರು.
ಆಗಿನ ಕಾಲದಲ್ಲಿಯೇ ಒಬ್ಬ ದಿಟ್ಟ ಸಾಹಿತಿಯಾಗಿ ಹಲವಾರು ಪುಸ್ತಕಗಳನ್ನು ಬರೆಯುವುದರ ಮೂಲಕ ಸಮಾಜದ ಅಂಕು-ಡೊಂಕುಗಳನ್ನು ತಿದ್ದುವಲ್ಲಿ ಮಹತ್ವದ ಕಾರ್ಯ ಮಾಡಿದ್ದಾರೆ ಎಂದರು.
ಗ್ರಾಪಂ ಸದಸ್ಯ ಮಂಜುನಾಥ ಆರೇರ ಮಾತನಾಡಿ, ಭಾರತದ ಮೊದಲ ಮಹಿಳಾ ಶಿಕ್ಷಕಿಯಾಗಿ, ಹುಟ್ಟು ಹೋರಾಟಗಾರ್ತಿಯಾಗಿ ಮಹಿಳಾ ಸಬಲೀಕರಣಕ್ಕೆ ಹಗಲಿರುಳು ಶ್ರಮಿಸುವುದರ ಜೊತೆಗೆ ಹೆಣ್ಣು ಮಕ್ಕಳ ಶಿಕ್ಷಣದ ಹಕ್ಕಿಗಾಗಿ ಹೋರಾಡಿ ಸ್ತ್ರೀ ಸಮೂಹದ ಏಳಿಗೆಯ ರೂವಾರಿ ಸಾವಿತ್ರಿಬಾಯಿ ಪುಲೆ ಆಗಿದ್ದರು ಎಂದರು.
ಈ ವೇಳೆ ಮುಖ್ಯೋಪಾಧ್ಯಾಯ ಹನುಮಂತಪ್ಪ ಉಪ್ಪಾರ ಎಲ್ಲ ವಿದ್ಯಾರ್ಥಿನಿಯರಿಗೆ ನೋಟ್ ಬುಕ್, ಪೆನ್ನು, ಪೆನ್ಸಿಲ್ ಹಾಗೂ ಸಿಹಿ ಹಂಚಿದರು.ಸರ್ಕಾರಿ ಉರ್ದು ಶಾಲೆಯ ಮುಖ್ಯೋಪಾಧ್ಯಾಯ ಕೊಟ್ರಯ್ಯ ಕಟ್ಟಿಗಿಮಠ, ಸಹ ಶಿಕ್ಷಕರಾದ ಅನಿಲಕುಮಾರ ನಿಂಗಾಪುರ ಇದ್ದರು.