ಮಹಿಳೆಯರಲ್ಲಿ ಅಕ್ಷರಬೀಜ ಬಿತ್ತಿದ ಸಾಧಕಿ ಸಾವಿತ್ರಿಬಾಯಿ ಫುಲೆ

| Published : Jan 22 2024, 02:20 AM IST

ಸಾರಾಂಶ

ಸಮಾಜದಲ್ಲಿ ಎದುರಾದ ಅನೇಕ ಕಷ್ಟ, ಅವಮಾನಗಳನ್ನು ಸಹಿಸಿಕೊಂಡು ಜೀವನವಿಡೀ ಹೋರಾಟ ನಡೆಸಿದ ಸಾವಿತ್ರಿಬಾಯಿ ಫುಲೆ ಅವರು ದಲಿತರು ಮತ್ತು ಮಹಿಳೆಯರ ಹೃದಯದಲ್ಲಿ ಅಕ್ಷರಬೀಜ ಬಿತ್ತಿದ ಶಿಕ್ಷಣ ಸಾಧಕಿ. ಸಾವಿರಾರು ವರ್ಷಗಳಿಂದ ಅಕ್ಷರಲೋಕದಿಂದ ವಂಚಿತರಾದ ದಲಿತರು, ಮಹಿಳೆಯರಿಗೆ ಸ್ವತಃ ಶಿಕ್ಷಕಿಯಾಗಿ ಅಕ್ಷರಮಾಲೆ ತೊಡಿಸಿದವರು ಫುಲೆ ಎಂದು ಸಮಾಜ ಚಿಂತಕ ರಾಜಪ್ಪ ಮಾಸ್ತರ್ ಸೊರಬ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಸೊರಬ

ಸಮಾಜದಲ್ಲಿ ಎದುರಾದ ಅನೇಕ ಕಷ್ಟ, ಅವಮಾನಗಳನ್ನು ಸಹಿಸಿಕೊಂಡು ಜೀವನವಿಡೀ ಹೋರಾಟ ನಡೆಸಿದ ಸಾವಿತ್ರಿಬಾಯಿ ಫುಲೆ ಅವರು ದಲಿತರು ಮತ್ತು ಮಹಿಳೆಯರ ಹೃದಯದಲ್ಲಿ ಅಕ್ಷರಬೀಜ ಬಿತ್ತಿದ ಶಿಕ್ಷಣ ಸಾಧಕಿ ಎಂದು ಸಮಾಜ ಚಿಂತಕ ರಾಜಪ್ಪ ಮಾಸ್ತರ್ ಅಭಿಪ್ರಾಯಪಟ್ಟರು.

ಶನಿವಾರ ಪಟ್ಟಣ ಡಾ. ರಾಜ್‌ ರಂಗಮಂದಿರದಲ್ಲಿ ತಾಲೂಕು ಸಾವಿತ್ರಿ ಬಾಯಿ ಫುಲೆ ಶಿಕ್ಷಕಿಯರ ಸಂಘ ಏರ್ಪಡಿಸಿದ್ದ ಸಾವಿತ್ರಿಬಾಯಿ ಫುಲೆ ಅವರ 193ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಾವಿರಾರು ವರ್ಷಗಳಿಂದ ಅಕ್ಷರಲೋಕದಿಂದ ವಂಚಿತರಾದ ದಲಿತರು, ಮಹಿಳೆಯರಿಗೆ ಸ್ವತಃ ಶಿಕ್ಷಕಿಯಾಗಿ ಅಕ್ಷರಮಾಲೆ ತೊಡಿಸಿದವರು ಫುಲೆ. ಶೋಷಣೆಯಿಂದ ಪಾರಾಗಲು ಸ್ವಾಭಿಮಾನದ ಜೀವನಕ್ಕೆ ದಾರಿದೀಪವಾದ ಅಕ್ಷರಮಾತೆ. ಅವರ ಜಯಂತಿ ಆಚರಿಸುತ್ತಿರುವುದು ಅತ್ಯಂತ ಸಂತೋಷದ ಸಂಗತಿಯಾಗಿದೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಅವರ ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಬಾಲವಿಧವೆಯರ ನಿಲಯ, ಶಾಲೆ, ಹಾಸ್ಟಲ್‌ಗಳನ್ನು ತೆರೆದು ಸಮಾಜ ಸುಧಾರಣೆ ಮಾಡಿದ ಜ್ಯೋತಿಭಾ ಫುಲೆ ಹಾಗೂ ಸಾವಿತ್ರಿಬಾಯಿ ಫುಲೆ ದಂಪತಿಯನ್ನು ಈಗಲಾದರೂ ಸ್ಮರಿಸುವ ಅವಕಾಶ ದೊರೆಕಿಸಿಕೊಟ್ಟಿರುವುದು ಅವರ ತ್ಯಾಗಕ್ಕೆ ಸಂದ ಗೌರವವಾಗಿದೆ. ಆದ್ದರಿಂದ ನಾವೆಲ್ಲಾ ಅವರನ್ನು ಮಾದರಿಯಾಗಿಟ್ಟುಕೊಂಡು ಶಿಕ್ಷಣ ಪಡೆಯುವ ಮೂಲಕ ಸ್ವತಂತ್ರ, ಸ್ವಾಭಿಮಾನ, ಸಮಾನತೆಯ ಅನ್ಯಾಯವನ್ನು ಧಿಕ್ಕರಿಸುವ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇದರಿಂದ ಅವರ ಚಿಂತನೆ ಹಾಗೂ ಶ್ರಮಕ್ಕೆ ಗೌರವ ಸಲ್ಲಿಸಿದಂತಾಗುತ್ತದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಸತ್ಯನಾರಾಯಣ ಮಾತನಾಡಿ, ದೇಶದ ಮೊದಲ ಶಿಕ್ಷಕಿ ಸಾವಿತ್ರಿ ಬಾಯಿ ಫುಲೆ ಅವರ ಯಶೋಗಾಥೆಯಿಂದ ಶಿಕ್ಷಕಿಯರು ತಮ್ಮ ಶಿಕ್ಷಣದ ಕುರಿತಾದ ಬದ್ಧತೆ ಹೆಚ್ಚಿಸುವಲ್ಲಿ ಪ್ರೇರಣೆಯಾಗಲಿ. ಸಾವಿತ್ರಿಬಾಯಿ ಅವರು ತಮ್ಮ ಪತಿಯಿಂದ ಶಿಕ್ಷಣ ಪಡೆದುಕೊಂಡು, ಬ್ರಿಟಿಷರಿಂದಲೇ ದೇಶದ ಮೊದಲ ಶಿಕ್ಷಕಿಯಾಗಿ ಪರಿಗಣಸುವಷ್ಟರ ಮಟ್ಟಕ್ಕೆ ಬೆಳೆದವರು ಎಂದರು.

ಸಮಾಜದಲ್ಲಿ ಅಪಮಾನ, ಅಪನಿಂದನೆಗಳನ್ನು ಎದುರಿಸಿ, ಶಿಕ್ಷಣದಿಂದ ಮಾತ್ರ ಮಹಿಳೆಯರ ಅಭಿವೃದ್ಧಿ ಎಂಬ ಸಂಕಲ್ಪದೊಂದಿಗೆ ಹಿಂದುಳಿದ ಮಹಿಳೆಯರಿಗೆ ಶಿಕ್ಷಣ ಕೊಡುವ ಮುಖಾಂತರ ಅಕ್ಷರದವ್ವ ಎನಿಸಿಕೊಂಡರು. ವಿಧವೆಯರ ಮೇಲೆ ಆಗುತ್ತಿರುವ ಮೌಢ್ಯದ ದೌರ್ಜನ್ಯಗಳನ್ನು ವಿರೋಧಿಸಿದರು. ಸತಿ ಸಹಗಮನ ಪದ್ಧತಿ ವಿರೋಧಿಸಿ, ವಿಧವಾ ವಿವಾಹಕ್ಕೆ ಪ್ರೋತ್ಸಾಹಿಸಿದರು. 18ಕ್ಕೂ ಹೆಚ್ಚು ಪಾಠ ಶಾಲೆಗಳನ್ನು ತೆರೆದು, ದೇಶದ ಶಿಕ್ಷಣದ ಅಭಿವೃದ್ಧಿಗೆ ಮುನ್ನುಡಿ ಬರೆದವರ ಸಾಲಿನಲ್ಲಿ ಮೊದಲಿಗರು ಎಂದರು.

ನಿವೃತ್ತ ಶಿಕ್ಷಕಿಯರಾದ ಎಸ್.ರತ್ನಮ್ಮ, ಮೀನಾಕ್ಷಿ ರಾಯ್ಕರ್, ಜಯಮ್ಮ, ಸುಮಿತ್ರ ಹೆಗಡೆ ಅವರನ್ನು ಸನ್ಮಾನಿಸಲಾಯಿತು. ತಾಲೂಕು ಸಾವಿತ್ರಿಬಾಯಿ ಫುಲೆ ಶಿಕ್ಷಕರ ಸಂಘದ ಅಧ್ಯಕ್ಷೆ ಶಶಿಕಲಾ ಅಧ್ಯಕ್ಷತೆ ವಹಿಸಿದ್ದರು.

ಶಿಕ್ಷಣ ಸಮನ್ವಯಾಧಿಕಾರಿ ದಯಾನಂದ್ ಕಲ್ಲೇರ್, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಲಿಂಗರಾಜ ಒಡೆಯರ್, ಶಾಸಕ ಆಪ್ತ ಸಹಾಯಕ ಕೃಷ್ಣಮೂರ್ತಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗಣಪತಿ, ಸಿಆರ್‌ಪಿ ಸಂಘದ ಅಧ್ಯಕ್ಷ ಮಧುಕುಮಾರ್, ಶಿವಕುಮಾರ್, ಬಿಆರ್‌ಪಿ ಸವಿತಾ, ಶಿಕ್ಷಕ ಹಾಲೇಶ್ ನವುಲೆ, ಶಕುಂತಲಾ, ಲಲಿತ, ಆಂಜನಪ್ಪ, ಎಸ್.ಕೃಷ್ಣಾನಂದ ಮೊದಲಾದವರಿದ್ದರು.

- - - -20ಕೆಪಿಸೊರಬ03:

ಸೊರಬದಲ್ಲಿ ಸಾವಿತ್ರಿಬಾಯಿ ಫುಲೆ ಜಯಂತಿ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕಿಯರನ್ನು ಸನ್ಮಾನಿಸಲಾಯಿತು.