ಸಾರಾಂಶ
ಪುರುಷ ಪ್ರಾಧಾನ್ಯ ಸಮಾಜದಲ್ಲಿ ತಾನು ಕಲಿತು ಮಹಿಳೆಯರ ಶಿಕ್ಷಣಕ್ಕೆ ಹೋರಾಡಿದ ದೇಶದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ
ಚಿತ್ರದುರ್ಗ: ಮಹಿಳೆಯರಿಗೆ ಅಕ್ಷರ ಕಲಿಸಿದ ಸಾವಿತ್ರಿ ಬಾಯಿ ಫುಲೆ ದೇಶದ ಪ್ರಪ್ರಥಮ ಶಿಕ್ಷಕಿ ಎಂದು ದಲಿತ ಮುಖಂಡ, ನಗರಸಭೆ ಮಾಜಿ ಉಪಾಧ್ಯಕ್ಷ ಡಿ.ದುರುಗೇಶಪ್ಪ ಹೇಳಿದರು.
ಸ್ಲಂ ಜನಾಂದೋಲನ ಕರ್ನಾಟಕ ಜಿಲ್ಲಾ ಸಮಿತಿಯ 14ನೇ ಸಂಸ್ಥಾಪನಾ ದಿನದ ಅಂಗವಾಗಿ ಪತ್ರಕರ್ತರ ಭವನದಲ್ಲಿ ಶನಿವಾರ ನಡೆದ ಸಾವಿತ್ರಿಬಾಯಿ ಪುಲೆರವರ 193ನೇ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ಅವಿದ್ಯಾವಂತೆಯಾಗಿದ್ದ ಸಾವಿತ್ರಿಯನ್ನು ವಿವಾಹವಾದ ಜ್ಯೋತಿಬಾ ಫುಲೆ ಶಿಕ್ಷಣ ಕೊಡಿಸಿ ಶಿಕ್ಷಕಿಯನ್ನಾಗಿ ತಯಾರು ಮಾಡಿದರು. ಆ ಮೂಲಕ ಶಿಕ್ಷಣದಿಂದ ವಂಚಿತರಾಗಿದ್ದ ಮಹಿಳೆಯರಿಗೆ ಶಿಕ್ಷಣ ಕೊಡಿಸುವ ಕೆಲಸ ಮಾಡಿದರೆಂದರು.ಮಹಿಳೆಯರು ಕೇವಲ ಅಡುಗೆ ಮನೆಗಷ್ಟೆ ಸೀಮಿತವಾಗಿರಬೇಕೆನ್ನುತ್ತಿದ್ದ ಕಷ್ಟದ ಕಾಲದಲ್ಲಿ ಸಾವಿತ್ರಿ ಬಾಯಿ ಎಲ್ಲಾ ವಿರೋಧಗಳನ್ನು ಮೆಟ್ಟಿ ನಿಂತು ಹೆಣ್ಣುಮಕ್ಕಳಿಗೆ ಶಿಕ್ಷಣ ಕಲಿಸಲು ಹೋಗುತ್ತಿದ್ದಾಗ ಮೇಲ್ಜಾತಿಯವರು ಸಗಣಿ, ಕಲ್ಲುಗಳನ್ನು ಎಸೆಯುತ್ತಿದ್ದರು. ಇಂತಹ ಅಪಮಾನಗಳನ್ನು ಸಹಿಸಿಕೊಂಡ ಸಾವಿತ್ರಿ ಬಾಯಿ ಕೇವಲ ಶಿಕ್ಷಣಕ್ಕಷ್ಟೆ ಅಲ್ಲ. ಪ್ಲೇಗ್ ರೋಗಿಗಳ ಆರೈಕೆಯಲ್ಲೂ ತೊಡಗುತ್ತಿದ್ದರು. ಅಂತಹ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದ ಸಾವಿತ್ರಿ ಬಾಯಿಯನ್ನು ಪ್ರತಿಯೊಬ್ಬರು ಸ್ಮರಿಸಬೇಕಿದೆ ಎಂದು ತಿಳಿಸಿದರು.
ದಲಿತ ಮುಖಂಡ ಬಿ.ರಾಜಪ್ಪ ಮಾತನಾಡಿ, ದೇಶದ ಮೊಟ್ಟ ಮೊದಲ ಮಹಿಳಾ ಶಿಕ್ಷಕಿಯಾಗಿದ್ದ ಸಾವಿತ್ರಿಬಾಯಿ ಪುಲೆ ದೇಶದ ಉದ್ದಗಲಕ್ಕೂ ಸಂಚರಿಸಿ ಅನೇಕ ಕಡೆ ಶಾಲೆಗಳನ್ನು ತೆರೆದು ಶಿಕ್ಷಣದಿಂದ ವಂಚಿತರಾಗಿದ್ದ ಹೆಣ್ಣು ಮಕ್ಕಳನ್ನು ಅಕ್ಷರವಂತರನ್ನಾಗಿ ಮಾಡಿದರು ಎಂದು ಸ್ಮರಿಸಿದರು.ಸ್ಲಂ ಜನಾಂದೋಲನ ಕರ್ನಾಟಕ ಜಿಲ್ಲಾ ಸಮಿತಿ ಸಂಚಾಲಕ ಟಿ.ಮಂಜಣ್ಣ, ಬಿ.ಓ.ಗಂಗಾಧರಯ್ಯ, ಎಚ್.ಮಹಾಂತೇಶ್, ಜಿಲ್ಲಾಧ್ಯಕ್ಷ ಎಂ.ಮಹೇಶ್, ಉಪಾಧ್ಯಕ್ಷೆ ಮಾಲತಿ, ಕೆ.ರುದ್ರಮುನಿ, ಭಾಗ್ಯಮ್ಮ, ಮಂಜುನಾಥ್, ಕೆಂಚಪ್ಪ, ವರಮಹಾಲಕ್ಷ್ಮಿ ವೇದಿಕೆಯಲ್ಲಿದ್ದರು.