ಕಳೆದ ವರ್ಷ ಸೆ.16ರಂದು ಸ್ಥಳೀಯ ಎಸ್.ಬಿ.ಐ. ಬ್ಯಾಂಕ್ ದರೋಡೆ ಪ್ರಕರಣದಲ್ಲಿ ಚಿನ್ನ ಕಳೆದುಕೊಂಡ ಗ್ರಾಹಕರು ಬುಧವಾರ ಸಂಜೆ 4 ಗಂಟೆಯಿಂದ ತಡರಾತ್ರಿ 11 ಗಂಟೆಯವರೆಗೆ ಬ್ಯಾಂಕಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಚಡಚಣ

ಕಳೆದ ವರ್ಷ ಸೆ.16ರಂದು ಸ್ಥಳೀಯ ಎಸ್.ಬಿ.ಐ. ಬ್ಯಾಂಕ್ ದರೋಡೆ ಪ್ರಕರಣದಲ್ಲಿ ಚಿನ್ನ ಕಳೆದುಕೊಂಡ ಗ್ರಾಹಕರು ಬುಧವಾರ ಸಂಜೆ 4 ಗಂಟೆಯಿಂದ ತಡರಾತ್ರಿ 11 ಗಂಟೆಯವರೆಗೆ ಬ್ಯಾಂಕಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ಚಿನ್ನ ಇಟ್ಟಿದ್ದ ಗ್ರಾಹಕರು ಬ್ಯಾಂಕಿಗೆ ಆಗಮಿಸಿ, ನಮಗೆ ಚಿನ್ನ ಅಥವಾ ಹಣ ನೀಡಲು ಬ್ಯಾಂಕ್ ನೀಡಿದ್ದ ಗಡುವು ಮುಗಿದಿದ್ದು, ನಮ್ಮ ಚಿನ್ನ ಅಥವಾ ನಾವು ಅಡವಿಟ್ಟ ಚಿನ್ನಕ್ಕೆ ಇಂದಿನ ಮಾರುಕಟ್ಟೆ ದರದಲ್ಲಿ ಕೂಡಲೇ ಹಣ ನೀಡಬೇಕು ಎಂದು ಆಗ್ರಹಿಸಿ ಬ್ಯಾಂಕ್ ಬಾಗಿಲಿಗೆ ಬೀಗ ಹಾಕಿ ಒಳಗಡೆ ತಡರಾತ್ರಿ 11 ಗಂಟೆ ವರೆಗೆ ಪ್ರತಿಭಟನೆ ನಡೆಸಿದರು. 2025ರ ಸೆಪ್ಟೆಂಬರ್‌ 16ರಂದು ದರೋಡೆಕೋರರು ಬ್ಯಾಂಕಿಗೆ ನುಗ್ಗಿ ನಾಡಪಿಸ್ತೂಲಿನಿಂದ ಗಾಳಿಯಲ್ಲಿ ಗುಂಡು ಹಾರಿಸಿ, ಬ್ಯಾಂಕ್ ಸಿಬ್ಬಂದಿ ಹಾಗೂ ಗ್ರಾಹಕರ ಕೈಕಾಲು ಕಟ್ಟಿ ₹1.5 ಕೋಟಿ ನಗದು ಹಾಗೂ 20 ಕೆಜಿ ಚಿನ್ನ ದೋಚಿದ್ದರು. ಆಗ ಬ್ಯಾಂಕ್ ಅಧಿಕಾರಿಗಳು ಗ್ರಾಹಕರೊಂದಿಗೆ ಸಭೆ ನಡೆಸಿ, ಜೂನ್ 6 ರೊಳಗೆ ಚಿನ್ನ ಅಥವಾ ಹಣ ನೀಡುವುದಾಗಿ ಭರವಸೆ ನೀಡಿದ್ದರು. ಗ್ರಾಹಕರು ಅಡವಿಟ್ಟಿದ್ದ ಚಿನ್ನದ ನಿವ್ವಳ ತೂಕಕ್ಕೆ ಇಂದಿನ ಮಾರುಕಟ್ಟೆ ದರದೊಂದಿಗೆ ಶೇ.20ರಷ್ಟು ಹೆಚ್ಚುವರಿಯಾಗಿ ಹಣ ನೀಡುವುದಾಗಿ ಹೇಳಿದ್ದರು. ಆದರೆ ಗ್ರಾಹಕರು ಇಂದಿನ ಮಾರುಕಟ್ಟೆ ದರದಲ್ಲಿ ಅಸಲು ತೂಕದ ಚಿನ್ನವನ್ನೇ ನೀಡಬೇಕು ಎಂದು ಪಟ್ಟು ಹಿಡಿದಿದ್ದರು.

ಬ್ಯಾಂಕಿನವರು ನೀಡಿದ್ದ ಗಡುವು ಜೂನ್ 10 ಮುಗಿದರೂ ಯಾವುದೇ ಪರಿಹಾರ ಸಿಗದ ಕಾರಣ ಗ್ರಾಹಕರ ಆಕ್ರೋಶ ಭುಗಿಲೆದ್ದಿದೆ. ತಡರಾತ್ರಿಯವರೆಗೂ ನಡೆದ ಈ ಹೈಡ್ರಾಮಾ ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಚಡಚಣ ಪಿ.ಎಸ್.ಐ. ಸೊಮೇಶ ಗೆಜ್ಜಿ, ಸಿ.ಪಿ.ಐ. ಪರಶುರಾಮ ಮನಗೂಳಿ ಅವರು ಮಾತನಾಡಿ, ಜೂ.15ರಂದು ನಿಮ್ಮ ಚಿನ್ನಕ್ಕೆ ಸರಿಯಾದ ಮೊತ್ತ ನೀಡುತ್ತೇವೆ ಎಂದು ಬ್ಯಾಂಕಿನ ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ಸೋಮವಾರದವರೆಗೆ ತಾಳ್ಮೆಯಿಂದ ಇರಲಿ ಹೇಳಿ ಮನವೊಲಿಸಿದ ಬಳಿಕ ಗ್ರಾಹಕರು ಪ್ರತಿಭನೆ ಕೈಬಿಟ್ಟರು.

ನೂರಾರು ಗ್ರಾಹಕರು ಪ್ರತಿಭಟನೆ ನಡೆಸಿದರು. ವಿಭಾಗೀಯ ವ್ಯವಸ್ಥಾಪಕ ವಿಕಾಸ ಭಗೋತ್ರಾ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಆನಂದ ವಾಲಿ, ಶಿವಕುಮಾರ, ವೆಂಕಟೇಶ ರಾಜಪೂತ ಮತ್ತಿತರರು ಇದ್ದರು.ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಬಂದೋಬಸ್ತ್‌ ಏರ್ಪಡಿಸಿದ್ದರು.