ಪಾಳು ಮನೆಯಲ್ಲಿ ಎಸ್‌ಬಿಐ ದರೋಡೆ ಹಣ!

| N/A | Published : Sep 20 2025, 01:01 AM IST / Updated: Sep 20 2025, 08:17 AM IST

money

ಸಾರಾಂಶ

ರಾಜ್ಯಾದ್ಯಂತ ಸದ್ದು ಮಾಡಿದ್ದ ಜಿಲ್ಲೆಯ ಚಡಚಣದ ಎಸ್‌ಬಿಐನಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ, ದರೋಡೆಕೋರರು ಕದ್ದೊಯ್ದಿದ್ದ ಚಿನ್ನ ಮತ್ತು ನಗದು ತುಂಬಿದ ಬ್ಯಾಗ್ ಮಹಾರಾಷ್ಟ್ರದ ಹುಲಜಂತಿ ಗ್ರಾಮದಲ್ಲಿ ಪತ್ತೆಯಾಗಿದೆ.  

 ಚಡಚಣ :  ರಾಜ್ಯಾದ್ಯಂತ ಸದ್ದು ಮಾಡಿದ್ದ  ಚಡಚಣದ ಎಸ್‌ಬಿಐನಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ, ದರೋಡೆಕೋರರು ಕದ್ದೊಯ್ದಿದ್ದ ಚಿನ್ನ ಮತ್ತು ನಗದು ತುಂಬಿದ ಬ್ಯಾಗ್ ಮಹಾರಾಷ್ಟ್ರದ ಹುಲಜಂತಿ ಗ್ರಾಮದಲ್ಲಿ ಪತ್ತೆಯಾಗಿದೆ. ಗ್ರಾಮದ ಪಾಳುಬಿದ್ದ ಮನೆಯೊಂದರ ಮೇಲೆ ಬ್ಯಾಗ್‌ ಸಿಕ್ಕಿದ್ದು, ಅದರಲ್ಲಿ 136 ಪಾಕೆಟ್‌ನಲ್ಲಿ 6,800 ಗ್ರಾಂ ಚಿನ್ನ, ₹41.4 ಲಕ್ಷ ನಗದು ಪತ್ತೆಯಾಗಿದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

ಸೆ.16ರಂದು ಸಂಜೆ ಚಡಚಣದ ಎಸ್‌ಬಿಐಗೆ ನುಗ್ಗಿದ್ದ ದರೋಡೆಕೋರರು ಪಿಸ್ತೂಲು ತೋರಿಸಿ, ಸಿಬ್ಬಂದಿಯ ಕೈಕಾಲು ಕಟ್ಟಿಹಾಕಿ, 20 ಕೆಜಿ ಚಿನ್ನ, 1.4 ಕೋಟಿ ನಗದು ದೋಚಿದ್ದರು. ಬಳಿಕ, ಇವರ ಕಾರು ಹುಲಜಂತಿ ಗ್ರಾಮದಲ್ಲಿ ಬೈಕ್‌ಗೆ ಡಿಕ್ಕಿ ಹೊಡೆದಿತ್ತು. ಇದನ್ನು ಪ್ರಶ್ನಿಸಿದ ಗ್ರಾಮಸ್ಥರಿಗೆ ದರೋಡೆಕೋರರು ಬಂದೂಕು ತೋರಿಸಿ, ಬೆದರಿಸಿ, ವಾಹನ ಬಿಟ್ಟು ಪರಾರಿಯಾಗಿದ್ದರು.

ಕಾರಿನಲ್ಲಿ ಚಿನ್ನ ಮತ್ತು ನಗದು ತುಂಬಿದ್ದ ಒಂದು ಬ್ಯಾಗ್ ಇತ್ತು. ಕೆಲವೊಂದು ಚಿನ್ನಾಭರಣಗಳು ಮತ್ತು ಹಣ ರಸ್ತೆಯಲ್ಲಿ ಬಿದ್ದಿದ್ದವು. ಗ್ರಾಮಸ್ಥರು ಈ ಹಣ ಮತ್ತು ಬ್ಯಾಗ್‌ಅನ್ನು ತೆಗೆದುಕೊಂಡು ಹೋಗಿದ್ದರು. ಬಳಿಕ, ಗ್ರಾಮಕ್ಕೆ ಭೇಟಿ ನೀಡಿದ ಪೊಲೀಸರು ಗ್ರಾಮಸ್ಥರ ಸಭೆ ನಡೆಸಿ, ಬ್ಯಾಗ್ ನೀಡದಿದ್ದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು.

ಇದರಿಂದ ಹೆದರಿದ ಒಬ್ಬ ಗ್ರಾಮಸ್ಥ, ತಾನು ಬಚ್ಚಿಟ್ಟಿದ್ದ ಬ್ಯಾಗ್‌ನ್ನು ಪಾಳುಬಿದ್ದ ಮನೆಯೊಂದರ ಮೇಲ್ಛಾವಣಿಯಲ್ಲಿ ತಂದು ಇರಿಸಿದ್ದ ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಬ್ಯಾಗ್‌ನ್ನು ವಶಕ್ಕೆ ಪಡೆದಿದ್ದಾರೆ.

Read more Articles on