ಸಾರಾಂಶ
ರಾಣಿಬೆನ್ನೂರು ನಗರದ ಶಿಕ್ಷಕರ ಸಹಕಾರಿ ಸಂಘದಲ್ಲಿ ಭಾನುವಾರ ರಾಜ್ಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ನೌಕರರ ತಾಲೂಕು ಸಮಿತಿಯ ಆಶ್ರಯದಲ್ಲಿ ಒಳ ಮೀಸಲಾತಿ ಕುರಿತ ಜಿಲ್ಲಾಮಟ್ಟದ ವಿಚಾರ ಸಂಕಿರಣ ನಡೆಯಿತು.
ರಾಣಿಬೆನ್ನೂರು: ಎಸ್‌ಸಿ ಒಳ ಮೀಸಲಾತಿ ಕುರಿತು ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಬೇಕು ಎಂದು ಕೇಂದ್ರೀಯ ಅಬಕಾರಿ ಮತ್ತು ಕಸ್ಟಮ್ಸ್ ನಿವೃತ್ತ ಮುಖ್ಯ ಆಯುಕ್ತ ಭೀಮಾಶಂಕರ್ ಒತ್ತಾಯಿಸಿದರು.
ನಗರದ ಶಿಕ್ಷಕರ ಸಹಕಾರಿ ಸಂಘದಲ್ಲಿ ಭಾನುವಾರ ರಾಜ್ಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ನೌಕರರ ತಾಲೂಕು ಸಮಿತಿಯ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಒಳ ಮೀಸಲಾತಿ ಕುರಿತ ಜಿಲ್ಲಾಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.ಕಾಂಗ್ರೆಸ್ ಸರ್ಕಾರ 2023ರ ಚುನಾವಣಾ ಪ್ರಣಾಳಿಕೆಯಲ್ಲಿ 6ನೇ ಗ್ಯಾರಂಟಿಯಾಗಿ ಒಳ ಮೀಸಲಾತಿ ಘೋಷಿಸಿತ್ತು. ಅದನ್ನು ಕಾರ್ಯರೂಪಕ್ಕೆ ತರುವ ಗುರುತರ ಜವಾಬ್ದಾರಿ ರಾಜ್ಯ ಸರ್ಕಾರದ ಮೇಲಿದೆ. ಕಳೆದ ಮೂರು ದಶಕಗಳಿಂದ ಎಸ್‌ಸಿ ಮೀಸಲಾತಿ ವರ್ಗೀಕರಿಸಿ ಒಳ ಮೀಸಲಾತಿ ಜಾರಿಗೊಳಿಸಬೇಕು ಎಂದು ವಿವಿಧ ಹಂತಗಳಲ್ಲಿ ಪ್ರತಿಭಟನೆ, ಹೋರಾಟಗಳನ್ನು ನಡೆಸುತ್ತ ಬಂದಿದ್ದು, ಈ ವರೆಗೂ ಮೀಸಲಾತಿ ಜಾರಿಗೊಳಿಸಿಲ್ಲ ಎಂದರು.ಗುಲ್ಬರ್ಗ ವಿಶ್ವವಿದ್ಯಾನಿಲಯದ ವಿಶ್ರಾಂತ ಹಿರಿಯ ಪ್ರಾಧ್ಯಾಪಕ ಡಾ. ಎಂ.ಟಿ. ಕಟ್ಟಿಮನಿ ಮಾತನಾಡಿ, ಒಳ ಮೀಸಲಾತಿ ಜಾರಿಯಾಗುವ ವರೆಗೂ ಬ್ಯಾಕ್‌ಲಾಗ್ ಹುದ್ದೆ ಸೇರಿದಂತೆ ಯಾವುದೇ ನೇಮಕಾತಿ ಭರ್ತಿ ಮಾಡಬಾರದು ಹಾಗೂ ಮುಂಬಡ್ತಿ ನೀಡಬಾರದು. ಒಳ ಮೀಸಲಾತಿ ಜಾರಿಗೊಳಿಸಲು ಹಿಂದೇಟು ಹಾಕಿದರೆ ಮತ್ತೆ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.
ಒಳ ಮೀಸಲಾತಿ ಜಾರಿಗೊಳಿಸುವವರಿಗೆ ಎಸ್‌ಸಿಪಿ, ಟಿಎಸ್‌ಪಿ 2024- 25ನೇ ಸಾಲಿನ ಬಜೆಟ್‌ನಲ್ಲಿ ಹಣವನ್ನು ಬಳಸಬಾರದು. 36000 ನೇಮಕಾತಿಗಳಿಗೆ ಹೊರಡಿಸಿರುವ ರಾಜ್ಯಪತ್ರ ಹಿಂಪಡೆಯಬೇಕು ಎಂದು ಆಗ್ರಹಿಸಿದರು.ವಿಚಾರ ಸಂಕಿರಣದಲ್ಲಿ ಒಳ ಮೀಸಲಾತಿ ಮುಂದಿನ ಹೆಜ್ಜೆಗಳು, ಒಳ ಮೀಸಲಾತಿ ನಡೆದು ಬಂದ ದಾರಿ, ಜನಾಂಗ ಮತ್ತು ಮೀಸಲಾತಿ ಆಚೆಯ ಬದುಕು ಮುಂತಾದ ಗೋಷ್ಠಿಗಳು ಹಾಗೂ ಪ್ರಶ್ನೋತ್ತರ ಕಾರ್ಯಕ್ರಮ ಜರುಗಿದವು.
ತಾಪಂ ಮಾಜಿ ಅಧ್ಯಕ್ಷ ನೀಲಕಂಠಪ್ಪ ಕುಸಗೂರ, ನಗರಸಭಾ ಸದಸ್ಯರಾದ ಪುಟ್ಟಪ್ಪ ಮರಿಯಮ್ಮನವರ, ಪ್ರಕಾಶ ಪೂಜಾರ, ಮಾದಿಗ ನೌಕರರ ಸಂಘದ ತಾಲೂಕಾಧ್ಯಕ್ಷ ಮಂಜಪ್ಪ ಇಟಗೇರ, ಎಸ್. ಮಾರಪ್ಪ, ಡಾ. ಸರಸ್ವತಿ ಬಮ್ಮನಾಳ, ಸಿ.ಕೆ ಮಹೇಶ, ಮೈಲಪ್ಪ ದಾಸಪ್ಪನವರ, ಗುರುರಾಜ ಹುಚ್ಚಣ್ಣನವರ, ಹನುಮಂತಪ್ಪ ಕಬ್ಬಾರ, ಮೈಲಪ್ಪ ಗೋಣಿಬಸಮ್ಮನವರ, ಗುತ್ತೆಪ್ಪ ಹರಿಜನ, ಡಾ. ವಿನಾಯಕ ಕೆಂಪಳ್ಳೇರ, ಮೋಹನ ಬೆಣಗೇರಿ, ನಿಂಗಪ್ಪ ಅಡಿವೆಪ್ಪನವರ ಮತ್ತಿತರರು ಇದ್ದರು.