ಎಸ್‌ಸಿ, ಎಸ್‌ಟಿ ಜನರಿಗೆ ರಾಜ್ಯ ಸರ್ಕಾರದಿಂದ ದ್ರೋಹ: ಡಾ.ಕೆ.ಅನ್ನದಾನಿ

| Published : Jul 02 2024, 01:40 AM IST

ಎಸ್‌ಸಿ, ಎಸ್‌ಟಿ ಜನರಿಗೆ ರಾಜ್ಯ ಸರ್ಕಾರದಿಂದ ದ್ರೋಹ: ಡಾ.ಕೆ.ಅನ್ನದಾನಿ
Share this Article
  • FB
  • TW
  • Linkdin
  • Email

ಸಾರಾಂಶ

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಭ್ರಷ್ಟಾಚಾರ ಪ್ರಕರಣದಲ್ಲಿ ಎಸ್‌ಸಿ, ಎಸ್‌ಟಿ ಸದನ ಸಮಿತಿ ಏನು ಮಾಡುತ್ತಿದೆ ಎಂಬ ಅನುಮಾನ ಕಾಡುತ್ತಿದೆ. ನಿಗಮದ ಕೋಟ್ಯಂತರ ರು. ಹಣ ತೆಲಂಗಾಣ, ಆಂಧ್ರಪ್ರದೇಶದ ಯಾರ್ಯಾರದೋ ಖಾತೆಗಳಿಗೆ ವರ್ಗಾವಣೆಯಾಗಿದೆ. ಚುನಾವಣೆ ಉದ್ದೇಶಕ್ಕೆ ಹಣ ವರ್ಗಾವಣೆಯಾಗಿರುವುದಾಗಿ ಹಲವರು ಹೇಳುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಭ್ರಷ್ಟಾಚಾರ ನಡೆಸುವ ಮೂಲಕ ರಾಜ್ಯದ ಎಸ್‌ಸಿ, ಎಸ್‌ಟಿ ಜನರಿಗೆ ರಾಜ್ಯ ಸರ್ಕಾರ ದ್ರೋಹ ಬಗೆದಿದೆ. ಅರಣ್ಯ ಪ್ರದೇಶದಲ್ಲಿ ವಾಸ ಮಾಡುವ ಗಿರಿ ಜನರಿಗೆ ಮೀಸಲಿಟ್ಟ ಹಣ ದುರ್ಬಳಕೆ ಮಾಡಿಕೊಂಡಿರುವ ಈ ಸರ್ಕಾರಕ್ಕೆ ನಾಚಿಕೆಯೂ ಇಲ್ಲ, ಮಾನವೀಯತೆಯೂ ಇಲ್ಲ ಎಂದು ಮಾಜಿ ಶಾಸಕ ಡಾ.ಕೆ.ಅನ್ನದಾನಿ ಕಿಡಿಕಾರಿದರು.

೧೧ ಸಾವಿರ ಕೋಟಿ ರು. ಹಣ ವರ್ಗಾವಣೆ ಮಾಡಿಕೊಂಡು ಪರಿಶಿಷ್ಟ ಜಾತಿಗೆ ಸೇರಿದ ಜನರಿಗೆ ಅನ್ಯಾಯ ಮಾಡಿದ್ದೀರಿ. ಈಗ ವಾಲ್ಮೀಕಿ ನಿಗಮದ ೧೮೭ ಕೋಟಿ ಹಣ ದುರ್ಬಳಕೆಯಾಗಿದೆ. ಸಚಿವರ ರಾಜೀನಾಮೆ ಕೊಡಿಸಿದರೆ ಎಲ್ಲಾ ಮುಗಿಯುವುದಿಲ್ಲ. ಸಾವನ್ನಪ್ಪಿದವರಿಗೆ ನ್ಯಾಯ ಸಿಗಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಭ್ರಷ್ಟಾಚಾರ ಪ್ರಕರಣದಲ್ಲಿ ಎಸ್‌ಸಿ, ಎಸ್‌ಟಿ ಸದನ ಸಮಿತಿ ಏನು ಮಾಡುತ್ತಿದೆ ಎಂಬ ಅನುಮಾನ ಕಾಡುತ್ತಿದೆ. ನಿಗಮದ ಕೋಟ್ಯಂತರ ರು. ಹಣ ತೆಲಂಗಾಣ, ಆಂಧ್ರಪ್ರದೇಶದ ಯಾರ್ಯಾರದೋ ಖಾತೆಗಳಿಗೆ ವರ್ಗಾವಣೆಯಾಗಿದೆ. ಚುನಾವಣೆ ಉದ್ದೇಶಕ್ಕೆ ಹಣ ವರ್ಗಾವಣೆಯಾಗಿರುವುದಾಗಿ ಹಲವರು ಹೇಳುತ್ತಿದ್ದಾರೆ. ಇದರ ಬಗ್ಗೆ ಸದನ ಸಮಿತಿ ಅಧ್ಯಕ್ಷರು ತುಟಿಬಿಚ್ಚದೆ ಮೌನವಾಗಿರುವುದು ಅವರನ್ನೇ ಅನುಮಾನದ ದೃಷ್ಟಿಯಿಂದ ನೋಡುವಂತಾಗಿದೆ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಹೆಸರೇಳದೆ ಚುಚ್ಚಿದರು.

ನಿಗಮದಿಂದ ಕೋಟ್ಯಂತರ ರು. ಹಣ ವರ್ಗಾವಣೆಯಾಗಬೇಕಾದರೆ ಸಿಎಂ ಗಮನಕ್ಕೆ ಬಾರದೆ ಹೋಗುವುದಿಲ್ಲ. ಅದಕ್ಕಾಗಿ ಇದಕ್ಕೆ ಸಿಎಂ ಅವರನ್ನೇ ಹೊಣೆಗಾರರನ್ನಾಗಿ ಮಾಡಬೇಕಾಗುತ್ತದೆ. ಒಮ್ಮೆ ಸಿಎಂ ಅವರ ಪಾತ್ರ ಇಲ್ಲವೆಂದಾದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲು ಹಿಂದೇಟೇಕೆ ಎಂದು ಪ್ರಶ್ನಿಸಿದರು.

ರಾಹುಲ್‌ ಗಾಂಧಿ ಎಲ್ಲಿಗೇ ಹೋದರೂ ಸಂವಿಧಾನದ ಪುಸ್ತಕ ಹಿಡಿದುಕೊಳ್ಳುತ್ತಾರೆ. ಸಂವಿಧಾನ ಪುಸ್ತಕ ಹಿಡಿಯಲು ಕಾಂಗ್ರೆಸ್‌ಗೆ ಯೋಗ್ಯತೆ ಇಲ್ಲ. ಕಾಂಗ್ರೆಸ್ ೯೮ ಬಾರಿ ಸಂವಿಧಾನ ತಿದ್ದುಪಡಿ ಮಾಡಿದೆ. ಸಂವಿಧಾನವನ್ನು ಮೂಲೆಗೆಸೆದು ಇಂದಿರಾ ಗಾಂಧಿ ದೇಶದೊಳಗೆ ತುರ್ತುಪರಿಸ್ಥಿತಿ ಜಾರಿಗೊಳಿಸಿದ್ದರು. ಅಂಬೇಡ್ಕರ್ ಅವರಿಗೆ ಅಗೌರವ ತೋರಿದವರು ಕಾಂಗ್ರೆಸ್. ಹಾಗಾಗಿ ಕಾಂಗ್ರೆಸ್‌ನವರಿಗೆ ಸಂವಿಧಾನದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಜರಿದರು.