ಸಾರಾಂಶ
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ನವಿಲು ಅಡ್ಡ ಬಂದು ಸಾವಿಗೀಡಾದ ವ್ಯಕ್ತಿ ಕುಟುಂಬಕ್ಕೆ 15 ಲಕ್ಷ ಪರಿಹಾರ ನೀಡಿ, ಕೆರೆ ಒತ್ತುವರಿ ತೆರವುಗೊಳಿಸಿ, ಗ್ರಾಮೀಣ ಭಾಗಕ್ಕೆ ಹೆಚ್ಚು ಬಸ್ ನಿಯೋಜಿಸಿ ಹೀಗೆ ಹತ್ತು ಹಲವು ಸಮಸ್ಯೆಗಳ ಕುರಿತು ಅಧಿಕಾರಿಗಳ ಗಮನ ಸೆಳೆದ ರೈತರು ಈ ಸಮಸ್ಯೆಗಳಿಗೆ ಶೀಘ್ರ ಪರಿಹಾರ ನೀಡುವಂತೆ ಆಗ್ರಹಿಸಿದರು.ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ತಹಸೀಲ್ದಾರ್ ಮಂಜುಳಾ ನೇತೃತ್ವದಲ್ಲಿ ಕರೆಯಲಾಗಿದ್ದ ರೈತ ಮುಖಂಡರ ಕುಂದುಕೊರತೆ ನಿವಾರಣೆ ಸಭೆಯಲ್ಲಿ ತಾಲೂಕಿನ ರೈತರ ಸಮಸ್ಯೆಗಳನ್ನು ಒಂದೊಂದಾಗಿ ತೆರೆದಿಟ್ಟು, ಆಡಳಿತ ವ್ಯವಸ್ಥೆಯ ನೈಜ ಪರಿಚಯ ಮಾಡಿಸಿದರು.
ಸಭೆಯಲ್ಲಿ ಮಾತನಾಡಿದ ಮುಖಂಡ ಅಣಗಳ್ಳಿ ಬಸವರಾಜು, ಬೆಳೆ ವಿಮೆ ಕಂಪನಿಗಳು ರೈತರಿಗೆ ವಂಚನೆ ಮಾಡುತ್ತಿವೆ, ಬೆಳೆ ವಿಮೆಯಲ್ಲಿನ ಲೋಪ ಸರ್ಕಾರದ ಗಮನಕ್ಕೆ ತಂದು ಚರ್ಚಿಸಿ ರೈತರಿಗೆ ವರದಾಯಕ ದೃಷ್ಟಿಯಲ್ಲಿ ಗಮನಹರಿಸಬೇಕು. ರೈತರಿಗೆ ಬೆಳೆ ನಷ್ಟಕ್ಕೆ ವಿತರಿಸಲಾದ ಪರಿಹಾರ ಹಾಗೂ ನೀಡದ ಮೊತ್ತದ ಕುರಿತು ಮಾಹಿತಿ ನೀಡಿ ಎಂದರು.ಇದಕ್ಕೆ ಪ್ರತಿಕ್ರಿಯಿಸಲು ಅಧಿಕಾರಿಗಳು ತಡಕಾಡಿದ್ದರಿಂದ ಬಸವರಾಜು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಧ್ಯ ಪ್ರವೇಶಿಸಿದ ತಹಸೀಲ್ದಾರ್ ಮಂಜುಳಾ, ಕೃಷಿ ಇಲಾಖೆಯ ಅಧಿಕಾರಿ ಸುಂದ್ರಮ್ಮ, ಬರಪರಿಹಾರ ವಿತರಣೆ ಸಂಬಂಧಿಸಿದ ಮಾಹಿತಿ ಪೋರ್ಟನಲ್ಲಿದೆ. ಡಾಟಾ ಎಂಟ್ರಿಯಾಗುತ್ತಿದೆ. ಡಿಬಿಟಿ ಮೂಲಕ ನೇರವಾಗಿ ರೈತರ ಖಾತೆಗಳಿಗೆ ಹಾಕಲಾಗುವುದು, ತಾಲೂಕಿಗೆ 24.53 ಲಕ್ಷ ರು. ಪರಿಹಾರ ಬಿಡುಗಡೆಯಾಗಿದೆ. ಶೀಘ್ರ ವಿತರಣೆಯಾಗಲಿದೆ ಎಂದು ಮಾಹಿತಿ ನೀಡಿದರು.ವಿಶೇಷ ಪ್ರಕರಣ: ಸಭೆಯಲ್ಲಿ ರೈತ ಸಂಘದ ಜಿಲ್ಲಾ ಮುಖಂಡ ಶೈಲೇಂದ್ರ ಮಾತನಾಡಿ, ಇತ್ತೀಚೆಗೆ ಕುಂತೂರು ಬಳಿ ಬೈಕ್ ಸವಾರ ರೇವಣ್ಣ ಎಂಬ ಯುವಕನಿಗೆ ನವಿಲು ಅಡ್ಡ ಬಂದ ಪರಿಣಾಮ ಆತ ಹಾಗೂ ನವಿಲು ಸ್ಥಳದಲ್ಲಿಯೇ ಮೖತಪಟ್ಟಿದೆ. ಒಂದು ವೇಳೆ ಯುವಕ ಬದುಕಿ ನವಿಲು ಮೃತಪಟ್ಟಿದ್ದರೆ, ಆತನ ಮೇಲೆ ಪ್ರಕರಣ ದಾಖಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿ, ಮೖತ ರೇವಣ್ಣ ಕುಟುಂಬಕ್ಕೆ 15ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಈ ವೇಳೆ ಅರಣ್ಯಾಧಿಕಾರಿ ಭರತ್ ಮಾತನಾಡಿ, ಇದು ವಿಶೇಷ ಪ್ರಕರಣವೆಂದು ಪರಿಗಣಿಸಿ ಈಗಾಗಲೇ ಹಿರಿಯ ಅಧಿಕಾರಿಗಳಿಗೆ ವರದಿ ನೀಡಲಾಗಿದೆ ಎಂದರು.
ಸಭೆಯಲ್ಲಿ ಮಾತನಾಡಿದ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಶ್ರೀಕಂಠಸ್ವಾಮಿ ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದ ತಳ ಮಹಡಿಯಲ್ಲಿ ಪಾರ್ಕಿಂಗ್ ಇದೆ. ಆದರೆ ಅಲ್ಲಿ ನಿಗದಿಪಡಿಸಿರುವ ಶುಲ್ಕ ಅತ್ಯಂತ ದುಬಾರಿಯಾಗಿದೆ. ಗ್ರಾಮೀಣ ಭಾಗದ ಜನರು ಈ ಸೇವೆಯನ್ನು ಪಡೆಯಲು ಸಾಧ್ಯವಾಗಿಲ್ಲ, ದರ ಮರುಪರಿಶೀಲಿಸಿ ಎಂದರು. ಇದಕ್ಕೆ ಕೊಳ್ಳೇಗಾಲ ಡಿಪೋ ಮ್ಯಾನೇಜರ್ ವೆಂಕಟರಮಣ ಮಾತನಾಡಿ, ನಗರಸಭೆ ಹಾಗೂ ಕೆಎಸ್‍ಆರ್‌ಟಿಸಿ ಸೇರಿ ಟೆಂಡರ್ ಪ್ರಕ್ರಿಯೆ ಮಾಡಿದ್ದೇವೆ ಎಂದರು. ಈ ವೇಳೆ ತಹಸೀಲ್ದಾರ್ ಮಂಜುಳಾ ಮಾತನಾಡಿ, ಜನ ಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ಶುಲ್ಕ ನಿಗದಿ ಪಡಿಸುವಂತೆ ಸೂಚಿಸಿದರು.ರೈತ ಮುಖಂಡರಾದ ಶಿವರಾಮ್, ವಿರುಪಾಕ್ಷ, ಮಹದೇವಪ್ಪ ಇನ್ನಿತರರು ಮಾತನಾಡಿ, ಕೆಎಸ್‍ಆರ್‌ಟಿಸಿ ಬಸ್ ಗ್ರಾಮೀಣ ಭಾಗಕ್ಕೆ ಸಮರ್ಪಕವಾಗಿಲ್ಲ, ಮುಳ್ಳೂರು ಮಾರ್ಗ, ಸತ್ತೇಗಾಲದಿಂದ ಉಗನೀಯ ಪಾಳ್ಯ ಮಾರ್ಗವಾಗಿ ಸಂಚರಿಸುವ ಜನರು ಸಮಸ್ಯೆಪಡುವಂತಾಗಿದೆ. ಬಸ್‍ಗಳು ಗ್ರಾಮದೊಳಗೆ ಬಾರದೆ ಬೈಪಾಸ್ ರಸ್ತೆಯಲ್ಲಿಯೇ ಸಂಚರಿಸುತ್ತವೆ. ಒಂದು ಬಸ್‍ನಲ್ಲಿ 120 ಜನರು ಸಂಚರಿಸುವ ಪರಿಸ್ಥಿತಿ ಇದೆ. ಬಸ್ ನಿಲ್ದಾಣದಲ್ಲಿ ಬಸ್‍ಗಳ ಸಂಚಾರ ಮಾರ್ಗ ನಾಮಫಲಕ ಅಳವಡಿಸುತ್ತಿಲ್ಲ. ಖಾಸಗಿ ಬಸ್‍ಗಳ ಜತೆ ಹೊಂದಾಣಿಕೆ ಮಾಡಿಕೊಂಡು ಬಸ್‍ಗಳನ್ನು ಓಡಿಸಲಾಗುತ್ತಿದೆ. ಬೆಂಗಳೂರು, ಮಹದೇಶ್ವರ ಬೆಟ್ಟ, ಚಾಮರಾಜನಗರ, ಮೈಸೂರು ಜನರಿಗೆ ಹೋಗುವ ಜನರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಬಸ್ ಕೊರತೆ ಇರುವುದರಿಂದ ಈ ಸಮಸ್ಯೆ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಉತ್ತರಿಸಿದ ತಹಸೀಲ್ದಾರ್ ಮಂಜುಳಾ ಅವರು, ಗ್ರಾಮೀಣ ಭಾಗದ ಜನರು, ವಿದ್ಯಾರ್ಥಿಗಳ ಸೌಲಭ್ಯಕ್ಕಾಗಿ ಹೆಚ್ಚು ಬಸ್‍ಗಳನ್ನು ಒದಗಿಸಲು ಕೆಎಸ್‍ಆರ್‌ಟಿಸಿ ಡಿಸಿ ಅವರಿಗೆ ಪತ್ರ ಬರೆಯಬೇಕು, ತಕ್ಷಣ ಹೆಚ್ಚುವರಿ ಬಸ್ ನಿಯೋಜನೆ ಕ್ರಮವಹಿಸಬೇಕು ಎಂದು ಕೊಳ್ಳೇಗಾಲ ಡಿಪೋ ವ್ಯವಸ್ಥಾಪಕರಿಗೆ ಸೂಚಿಸಿದರು. ಇದೇ ವೇಳೆ ಮುಳ್ಳೂರು ಗ್ರಾಮದಲ್ಲಿ ಟಿಸಿ ಅಳವಡಿಸಿ ಆರು ವರ್ಷವಾಗಿದ್ದರೂ ವಿದ್ಯುತ್ ಸಂಪರ್ಕ ನೀಡಿಲ್ಲ , ಜೋತು ಬಿದ್ದ ತಂತಿಗಳ ದುರಸ್ತಿ ಆಗಿಲ್ಲ. ವಿದ್ಯುತ್ ತಂತಿ ತಗುಲಿ ನಷ್ಟವಾದ ಬೆಳೆಗೆ ಪರಿಹಾರವನ್ನು ನೀಡಿಲ್ಲ. ನಿಮ್ಮಿಂದ ನಮಗೆ ನ್ಯಾಯ ಸಿಗುವುದಿಲ್ಲ ಇಇ ಕರೆಯಿಸಿ ಎಂದು ಎಇಇ ರಾಜು ಅವರಿಗೆ ರೈತರು ತರಾಟೆಗೆ ತೆಗೆದುಕೊಂಡ ಪ್ರಸಂಗ ಜರುಗಿತು. ಈ ವೇಳೆ ಸಾಮಾಜಿಕ ಕಾರ್ಯಕರ್ತ ದಶರಥ್ ಮಾತನಾಡಿ ಸರಕಾರಿ ಆಸ್ತಿ ರಕ್ಷಿಸುವಲ್ಲಿ ನಗರಸಭೆ ವಿಫಲವಾಗಿದೆ. ಅದೇ ರೀತಿ ಚಿಕ್ಕರಂಗನಾಥ, ದೊಡ್ಡರಂಗನಾಥ ಕೆರೆಗಳಲ್ಲಿ ನಿರ್ಮಿಸಿರುವ ಅತಿಕ್ರಮ ಕಟ್ಟಡಗಳನ್ನು ತೆರವುಗೊಳಿಸಲು ನೀರಾವರಿ ಇಲಾಖೆ ವಿಫಲವಾಗಿದೆ ಎಂದು ದೂರಿದರು.