ಸಾರಾಂಶ
ಉಪವಿಭಾಗ ಮಟ್ಟದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಕುಂದುಕೊರತೆ ಸಭೆಯು ಡಿವೈಎಸ್ಪಿ ಧರ್ಮೇಂದ್ರ ಅಧ್ಯಕ್ಷತೆಯಲ್ಲಿ ಭಾನುವಾರ ಉಪವಿಭಾಗ ಪೊಲೀಸ್ ಕಚೇರಿಯ ಸಭಾಂಗಣದಲ್ಲಿ ಜರುಗಿತು.
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲಇಲ್ಲಿನ ಉಪವಿಭಾಗ ಮಟ್ಟದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಕುಂದುಕೊರತೆ ಸಭೆಯು ಡಿವೈಎಸ್ಪಿ ಧರ್ಮೇಂದ್ರ ಅಧ್ಯಕ್ಷತೆಯಲ್ಲಿ ಭಾನುವಾರ ಉಪವಿಭಾಗ ಪೊಲೀಸ್ ಕಚೇರಿಯ ಸಭಾಂಗಣದಲ್ಲಿ ಜರುಗಿತು.
ಸಭೆಯಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಬಸ್ತಿಪುರ ಶಾಂತರಾಜು ಮಾತನಾಡಿ, ದೌರ್ಜನ್ಯಕ್ಕೊಳಗಾದವರಿಗೆ ಸೂಕ್ತ ರೀತಿಯಲ್ಲಿ ನ್ಯಾಯ ಸಲ್ಲಿಸಬೇಕು, ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖಾಧಿಕಾರಿಗಳು ಮುಂದಾಗಬೇಕು, ದೌರ್ಜನ್ಯಕ್ಕೊಳಗಾಗಿ ಬಂದವರನ್ನು ಅಧಿಕಾರಿಗಳು ಗೌರವದಿಂದ ಕಾಣುವಂತಾಗಬೇಕು, ಎಸ್ಸಿ, ಎಸ್ಟಿ ವಿದ್ಯಾರ್ಥಿ ಸಮೂಹಕ್ಕೆ ಕಾನೂನು ಅರಿವು ಮೂಡಿಸಬೇಕು, ಪ್ರೌಢಾವಸ್ಥೆಯಲ್ಲಿರುವ ಹೆಣ್ಣು ಮಕ್ಕಳಿಗೂ ಹೆಚ್ಚಿನ ಅರಿವು ಮೂಡಿಸುವಲ್ಲಿ ಇಲಾಖೆ ಮುಂದಾಗಬೇಕು ಎಂದರು.ಈ ವೇಳೆ ಛಲವಾದಿ ಮಹಾಸಭೆ ರಾಜ್ಯ ಉಪಾಧ್ಯಕ್ಷ ಅಣಗಳ್ಳಿ ಬಸವರಾಜು ಮಾತನಾಡಿ, ದೌರ್ಜನ್ಯಕ್ಕೊಳಗಾದವರು ಪೊಲೀಸ್ ಠಾಣೆಗೆ ನೇರವಾಗಿ ದೂರು ನೀಡಲು ಹಿಂಜರಿಕೆ ಇದ್ದು ಅದನ್ನು ಸಂಘಟನೆಗಳ ಮುಖಂಡರೆ ದೌರ್ಜನ್ಯಕ್ಕೊಳಗಾದವರನ್ನು ಕರೆತಂದು ದೂರು ಕೊಡಿಸಬೇಕಾದ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಬೀಟ್ ಪೊಲೀಸರು ಹಾಗೂ ಇಲಾಖೆ ಕ್ರಮವಹಿಸಬೇಕು , ಕೆಲ ಪ್ರಕರಣಗಳನ್ನು ಡಿವೈಎಸ್ಪಿ ಹಾಗೂ ಎಸ್ಪಿಯವರು ಬಗೆಹರಿಸಿದ್ದಾರೆ, ಮುಂದಿನ ದಿನಗಳಲ್ಲಿ ನೊಂದವರು ನೇರವಾಗಿ ದೂರು ನೀಡುವ ಮುಕ್ತ ವಾತಾವರಣ ನಿರ್ಮಾಣ ನಿಟ್ಟಿನಲ್ಲಿ ಅಧಿಕಾರಿಗಳು ಕೈಜೋಡಿಸಬೇಕು ಎಂದರು.ಸಮಸ್ಯೆ ನಿವಾರಣೆಗೆ ಆದ್ಯತೆ-ಡಿವೈಎಸ್ಪಿ: ಅಧ್ಯಕ್ಷತೆ ವಹಿಸಿದ್ದ ಡಿವೈಎಸ್ಪಿ ಧರ್ಮೇಂದ್ರ ಮಾತನಾಡಿ, ಪರಿಶಿಷ್ಟ ಜಾತಿ ಹಾಗೂ ಪಂಗಡದವರು ಎದುರಿಸುತ್ತಿರುವ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಪೊಲೀಸ್ ಇಲಾಖೆಯ ಮಟ್ಟದಲ್ಲಿ ಯಾವುದೇ ರೀತಿಯ ಅನ್ಯಾಯ ನಡೆಯದಂತೆ ಇಲಾಖೆ ನಿಗಾ ಇಡಲಾಗುತ್ತದೆ. ಕಾನೂನು ಬದ್ಧವಾಗಿ ಹಕ್ಕುಗಳನ್ನು ರಕ್ಷಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಉಂಟಾಗುವ ಅನ್ಯಾಯದ ಕುರಿತು ಸರಿಯಾದ ಮಾಹಿತಿಯನ್ನು ಪೊಲೀಸರಿಗೆ ನೀಡುವ ಮೂಲಕ ಸಮಸ್ಯೆಗಳನ್ನು ಬಗೆಹರಿಸಲು ಇಲಾಖೆ ಜೊತೆ ಎಲ್ಲರೂ ಸಹಕರಿಸಬೇಕು ಎಂದರು.
ಮಲೆಮಹದೇಶ್ವರ ಬೆಟ್ಟ ಪೊಲೀಸ್ ಇನ್ಸ್‌ಪೆಕ್ಟರ್ ಜಗದೀಶ್, ಕೊಳ್ಳೇಗಾಲ ಪಟ್ಟಣ ಠಾಣೆಯ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ವರ್ಷ, ನಗರಸಭೆ ಸ್ಥಾಯಿ ಸಮಿತಿಯ ಅಧ್ಯಕ್ಷ ಜಿಎಂ ಸುರೇಶ್, ಡಾ.ಬಿ.ಆರ್.ಅಂಬೇಡ್ಕರ್ ಸ್ಮಾರಕ ಸಂಘದ ಅಧ್ಯಕ್ಷ ಆನಂದಮೂರ್ತಿ, ಕಾರ್ಯದರ್ಶಿ ಪಾಪಣ್ಣ, ನಾಯಕ ಸಮುದಾಯದ ಹಿರಿಯ ಮುಖಂಡ ಕೊಪ್ಪಾಳಿ ಮಹದೇವನಾಯಕ, ಚಿಕ್ಕಮಾದು, ಸುರೇಂದ್ರ, ದಲಿತ ಮುಖಂಡರಾದ ನಟರಾಜ್ ಮಾಳಿಗೆ, ಮುಳ್ಳೂರು ಮಂಜು, ಬಸವರಾಜು ,ನಾಗರಾಜು, ಪ್ರಕಾಶ್ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.