ನಾಯಿಗಳಿಗೆ ಹುರುಕು, ಕಜ್ಜಿ ರೋಗ

| Published : Dec 10 2024, 12:32 AM IST

ಸಾರಾಂಶ

ಕೆಲ ತಿಂಗಳಿಂದ ಬೀದಿನಾಯಿಗಳಿಗೆ ಹುರುಕು, ಕಜ್ಜಿ ರೋಗ ಕಾಣಿಸಿಕೊಂಡಿದೆ.

ರಿಯಾಜಅಹ್ಮದ ಎಂ ದೊಡ್ಡಮನಿ

ಡಂಬಳ: ಹೋಬಳಿಯ ಗ್ರಾಮಗಳಲ್ಲಿ ಬೀದಿನಾಯಿಗಳು ಚರ್ಮರೋಗದಿಂದ (ಹುರುಕು, ಕಜ್ಜಿ) ಬಳಲುತ್ತಿವೆ. ಕೆಲ ತಿಂಗಳಿಂದ ಬೀದಿನಾಯಿಗಳಿಗೆ ಹುರುಕು, ಕಜ್ಜಿ ರೋಗ ಕಾಣಿಸಿಕೊಂಡಿದೆ. ಒಂದು ನಾಯಿಯಲ್ಲಿ ಕಾಣಿಸಿಕೊಂಡಿದ್ದ ಈ ರೋಗ ಹಂತ ಹಂತವಾಗಿ ಇತರ ನಾಯಿಗಳಿಗೂ ಹರಡುವ ಮೂಲಕ ವ್ಯಾಪಕವಾಗಿದ್ದು, ಜನತೆ ಭಯಭೀತರಾಗಿದ್ದಾರೆ.

ಡಂಬಳ ಹೋಬಳಿಯ ಬಹುತೇಕ ಗ್ರಾಮಗಳಲ್ಲಿ ಬೀದಿನಾಯಿಗಳಲ್ಲಿ ಚರ್ಮರೋಗ ಕಾಣಿಸಿಕೊಂಡಿದೆ. ನಾಯಿಗಳ ಮೈ-ಕುತ್ತಿಗೆ ತುಂಬ ರಕ್ತದ ಕಲೆಗಳು ಕಂಡುಬರುತ್ತಿವೆ. ದೇಹದಲ್ಲಿ ಗುಳ್ಳೆಗಳು ಎದ್ದು ಹುಳುಗಳಿಂದ ನರಳುತ್ತಿವೆ. ಈ ರೋಗ ಸಾಕು ನಾಯಿಗಳಿಗೂ ತಗುಲುವ ಸಂಭವ ಇದೆ. ಬೀದಿನಾಯಿಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ವಿಚಿತ್ರವಾಗಿ ವರ್ತಿಸುತ್ತಿರುವ ನಾಯಿಗಳಿಂದಾಗಿ ವಿದ್ಯಾರ್ಥಿಗಳು ಶಾಲೆಗಳಿಗೆ ತೆರಳಲು ಮತ್ತು ರಸ್ತೆಯಲ್ಲಿ ಸಂಚರಿಸಲು ಹೆದರುವಂತಾಗಿದೆ. ಮುನ್ನೆಚ್ಚರಿಕೆಯ ಕ್ರಮವಾಗಿ ನಾಯಿಗಳಿಗೆ ರೇಬಿಸ್ ಲಸಿಕೆಯನ್ನೂ ಹಾಕಬೇಕು ಎಂದು ಜನ ಆಗ್ರಹಿಸಿದ್ದಾರೆ.

ಗ್ರಾಮದ ರೈತ ರಾಮಣ್ಣ ಪಾರಪ್ಪನವರ ಪೇಠಾಆಲೂರ ಗ್ರಾಮದ ರಸ್ತೆಯಲ್ಲಿರುವ ತಮ್ಮ ಜಮೀನಿಗೆ ತೆರಳುವಾಗ ಭಾನುವಾರ ಹೊಟ್ಟೆಯ ಭಾಗಕ್ಕೆ ನಾಯಿ ಕಚ್ಚಿದ್ದು, ಜನ ಮತ್ತಷ್ಟು ಆತಂಕಗೊಂಡಿದ್ದು, ಹೊಲಗಳಿಗೆ ತೆರಳಲು ಭಯಪಡುತ್ತಿದ್ದಾರೆ.

ಸ್ವಚ್ಛತೆ ಕೈಗೊಳ್ಳಿ

ಗ್ರಾಮೀಣ ಪ್ರದೇಶಗಳಲ್ಲಿರುವ ಚಿಕನ್ ಹಾಗೂ ಮಟನ್ ಸೆಂಟರ್‌ಗಳು ಸ್ವಚ್ಛತೆ ಕಾಪಾಡುತ್ತಿಲ್ಲ. ಹೀಗಾಗಿ ನಾಯಿಗಳ ಹಿಂಡು ಅಂಗಡಿಗಳ ಮುಂದೆ ಜಮಾಯಿಸುತ್ತವೆ. ಇದರಿಂದ ಒಂದು ನಾಯಿಗೆ ಅಂಟಿರುವ ಚರ್ಮರೋಗ ಬೇರೆ ನಾಯಿಗಳಿಗೂ ತಗಲುತ್ತಿದೆ. ಅಂಗಡಿಗಳ ಸುತ್ತ ಸ್ವಚ್ಛತೆ ಕಾಪಾಡಬೇಕಿದೆ.ಶೀಘ್ರ ಚಿಕಿತ್ಸೆ

ಡಂಬಳ ಮತ್ತು ಮತ್ತು ಸುತ್ತಲಿನ ಗ್ರಾಮೀಣ ಭಾಗದಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಅವುಗಳಿಗೆ ಕಜ್ಜಿಯಂತಹ ಚರ್ಮರೋಗ ತಗಲುತ್ತಿದೆ. ಸಂಬಂಧಪಟ್ಟ ಇಲಾಖೆಯವರು ಪಶು ವೈದ್ಯರನ್ನು ಕರೆಯಿಸಿ ಶೀಘ್ರ ಚಿಕಿತ್ಸೆ ಕೊಡಿಸಲು ಮುಂದಾಗಬೇಕು.

ವಿನಾಯಕ ಕಟ್ಟೆಣ್ಣವರ, ಸಮಾಜ ಸೇವಕಸಂತಾನ ಹರಣ

ಈಗಾಗಲೇ ಸಾಕು ನಾಯಿಗಳಿಗೆ ಎಆರ್‌ವಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಿಯ ಗ್ರಾಮ ಪಂಚಾಯಿತಿಗಳು ಬೀದಿ ನಾಯಿಗಳಿಗೆ ಸಂತಾನ ಹರಣ ಅಥವಾ ಎಆರ್‌ವಿ ಚಿಕಿತ್ಸೆ ಕೊಡಿಸಲು ಮುಂದಾದರೆ ಚಿಕಿತ್ಸೆ ನೀಡಲಾಗುವುದು. ಒಂದು ವೇಳೆ ನಾಯಿ ಕಚ್ಚಿದರೆ ತಕ್ಷಣ ಚಿಕಿತ್ಸೆಗೆ ಮುಂದಾಗಬೇಕು.

ಡಾ. ಎಸ್.ವಿ. ತಿಗರಿಮಠ, ಮುಂಡರಗಿ ತಾಲೂಕು ಪಶು ವೈದ್ಯಾಧಿಕಾರಿ.