ಸಾರಾಂಶ
ಮಂಡ್ಯ ಮಂಜುನಾಥ
ಕನ್ನಡಪ್ರಭ ವಾರ್ತೆ ಮಂಡ್ಯಕೃಷ್ಣರಾಜಸಾಗರ ಜಲಾಶಯದ ಎಲ್ಲಾ ಕ್ರೆಸ್ಟ್ ಗೇಟುಗಳನ್ನು ಸ್ವಯಂಚಾಲಿತ ಗೇಟುಗಳನ್ನಾಗಿ ಮಾರ್ಪಾಡು ಮಾಡುವ ಉದ್ದೇಶದಿಂದ ಸ್ಕಾಡಾ ತಂತ್ರಜ್ಞಾನವನ್ನು ಅಳವಡಿಸಲಾಗುತ್ತಿದೆ. ಸ್ಕಾಡಾ ತಂತ್ರಜ್ಞಾನ ಕಾರ್ಯಗತಗೊಂಡರೆ ಕಚೇರಿಯಲ್ಲಿಯೇ ಕುಳಿತು ಜಲಾಶಯದ ಕ್ರಸ್ಟ್‌ಗೇಟ್‌ಗಳನ್ನು ನಿರ್ವಹಿಸುವ ಹೈಟೆಕ್ ತಂತ್ರಜ್ಞಾನ ಹೊಂದಿರುವ ರಾಜ್ಯದ ಮೊದಲ ಜಲಾಶಯ ಎಂಬ ಕೀರ್ತಿಗೆ ಕೆಆರ್‌ಎಸ್ ಪಾತ್ರವಾಗಲಿದೆ.
ಈ ತಂತ್ರಜ್ಞಾನ ಅಳವಡಿಕೆಯಿಂದ ಅಣೆಕಟ್ಟೆಗೆ ನೀರಿನ ಒಳಹರಿವು ಮತ್ತು ಕ್ರೆಸ್ಟ್ ಗೇಟ್‌ಗಳ ಮುಖಾಂತರ ಹೊರಹರಿವಿನ ನಿರ್ವಹಣೆ ಮಾಡಲು ಸಹಕಾರಿಯಾಗಲಿದೆ. ಪ್ರಸ್ತುತ ಅಣೆಕಟ್ಟೆಯ ಕ್ರಸ್ಟ್‌ಗೇಟ್‌ಗಳನ್ನು ಭೌತಿಕವಾಗಿ ನಿರ್ವಹಣೆ ಮಾಡಲಾಗುತ್ತಿದ್ದು. ಈ ತಂತ್ರಜ್ಞಾನ ಅಳವಡಿಕೆಯಿಂದ ತಾಂತ್ರಿಕವಾಗಿ ನಿರ್ವಹಣೆಯಾಗಲಿದೆ.ಈ ತಂತ್ರಜ್ಞಾನ ಅಳವಡಿಸುವುದಕ್ಕಾಗಿ ಸ್ಕಾಡಾ ಕಂಟ್ರೋಲ್ ರೂಮ್‌ನ್ನು ತೆರೆಯಲಾಗುತ್ತಿದ್ದು, ಅದರ ನಿರ್ಮಾಣ ಕಾಮಗಾರಿಯೂ ಪ್ರಗತಿಯಲ್ಲಿದೆ. ಈ ಕೊಠಡಿಯ ನಿರ್ಮಾಣ ಪೂರ್ಣವಾದ ನಂತರ ಗೇಟುಗಳ ಆಧುನೀಕರಣ ಕಾಮಗಾರಿಯನ್ನು ಪೂರ್ಣ ಪ್ರಮಾಣದಲ್ಲಿ ಮುಕ್ತಾಯಗೊಳಿಸಿದಂತಾಗುತ್ತದೆ.
ಅಣೆಕಟ್ಟೆಯ ಕಾರ್ಯಗಳನ್ನು ನಿಯಂತ್ರಿಸಲು ಮತ್ತು ಮೇಲ್ವಿಚಾರಣೆ ಮಾಡಲು ಸ್ಕಾಡಾ ಉತ್ತಮ ಸಾಧನವಾಗಿದೆ ಮತ್ತು ಇದು ಹೆಚ್ಚಿನ ಕಾರ್ಯಕ್ಷಮತೆ ಹೊಂದಿದ್ದು, ಪ್ರತಿಯೊಂದು ಕ್ರೆಸ್ಟ್‌ಗೇಟ್‌ಗಳಿಂದ ನೀರಿನ ಮಟ್ಟ, ಒಳಹರಿವು ಮತ್ತು ಹೊರಹರಿವುಗಳನ್ನು ನೈಜ ಸಮಯದಲ್ಲಿ ವಿಶ್ಲೇಷಿಸಲು ನಮಗೆ ಸಹಾಯ ಮಾಡುತ್ತದೆ ಎಂದು ಹಿರಿಯ ಅOfಕಾರಿಯೊಬ್ಬರು ಕನ್ನಡಪ್ರಭ ಪತ್ರಿಕೆಗೆ ತಿಳಿಸಿದರು.ಕೋವಿಡ್-19ರ ಮೊದಲನೇ ಅಲೆ ಮತ್ತು ಎರಡನೇ ಅಲೆಯಿಂದ ಕಾಮಗಾರಿಗಾಗಿ ಅವಶ್ಯವಿರುವ ಆಕ್ಸಿಜನ್ ಕೊರತೆ, ಕೇಂದ್ರ ಜಲ ಆಯೋಗದಿಂದ ಕಾಮಗಾರಿಯ ವಿನ್ಯಾಸಕ್ಕೆ ಅನುಮೋದನೆ ದೊರೆಯುವಲ್ಲಿ ವಿಳಂಬವಾಗಿದ್ದರಿಂದ ಈ ಕಾಮಗಾರಿಯನ್ನು ಪೂರ್ಣಗೊಳಿಸುವಲ್ಲಿ ವಿಳಂಬವಾಗಿರುವುದಾಗಿ ಹೇಳಿದ್ದಾರೆ.
ಕೃಷ್ಣರಾಜಸಾಗರ ಜಲಾಶಯಕ್ಕೆ 173 ಗೇಟುಗಳು 90 ವರ್ಷ ಹಳೆಯದಾಗಿದ್ದು, ಇವುಗಳನ್ನು 2011ರಲ್ಲಿ +80 ಮಟ್ಟದ 16 ಹೊಸ ಗೇಟುಗಳನ್ನು 8.50 ಕೋಟಿ ರು. ವೆಚ್ಚದಲ್ಲಿ ನವೀಕರಿಸಲಾಗಿದೆ. 2013-14ರಲ್ಲಿ + 60 ಮಟ್ಟದ ಹೊಸ ಗೇಟುಗಳು ಮತ್ತು+50 ಮಟ್ಟದ 3 ಹೊಸ ಗೇಟುಗಳನ್ನು 2.70 ಕೋಟಿ ರು. ವೆಚ್ಚದಲ್ಲಿ ಅಳವಡಿಸಲಾಗಿದೆ. 2019-20ರಲ್ಲಿ ಡ್ರಿಪ್ -ಫೇಸ್-1 ಯೋಜನೆಯಡಿ 136 ಗೇಟುಗಳ ಆಧುನೀಕರಣ ಕಾಮಗಾರಿಯನ್ನು65.60 ಕೋಟಿ ರು. ವೆಚ್ಚದಲ್ಲಿ ಕೈಗೆತ್ತಿಕೊಂಡು ಕಾಮಗಾರಿ ಪ್ರಗತಿಯಲ್ಲಿದೆ. ಗೇಟುಗಳ ಆಧುನೀಕರಣಕ್ಕೆ ಒಟ್ಟು 76.80 ಕೋಟಿ ರು. ಖರ್ಚು ಮಾಡಿರುವುದಾಗಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಜಲಾಶಯದ +12 ಮಟ್ಟದ 8 ಗೇಟುಗಳನ್ನು ತಾಂತ್ರಿಕ ಕಾರಣದಿಂದ ಮುಚ್ಚಲಾಗಿದೆ. ಈ ಗೇಟುಗಳು ಹಲವಾರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿಲ್ಲ. ಹೂಳು ತೆಗೆಯುವ ಉದ್ದೇಶದಿಂದ ಗೇಟುಗಳನ್ನು ಮುಚ್ಚಲಾಗಿತ್ತು. ಅಣೆಕಟ್ಟೆಯಲ್ಲಿ ಕಡಿಮೆ ಹೂಳು ಇದ್ದ ಕಾರಣ 2007-08ರ ನಂತರ ಈ ಗೇಟುಗಳನ್ನು ಶಾಶ್ವತವಾಗಿ ಮುಚ್ಚಲಾಗಿದೆ. ಅಣೆಕಟ್ಟೆಯ +53 ಮಟ್ಟದ 4 ಗೇಟುಗಳು ಮೊದಲಿನಿಂದಲೂ ತೆರೆದಿರುವುದಿಲ್ಲ ಎಂದು ತಿಳಿಸಲಾಗಿದೆ.ಏನಿದು ಸ್ಕಾಡಾ ತಂತ್ರಜ್ಞಾನ?
ಕೆಆರ್‌ಎಸ್ ಕ್ರಸ್ಟ್ ಗೇಟ್‌ಗಳನ್ನು ತೆರೆಯುವುದಕ್ಕೆ ಮತ್ತು ಮುಚ್ಚುವುದಕ್ಕೆ ಈ ಮೊದಲು ಜಲಾಶಯದ ಬಳಿಗೆ ತೆರಳಿ ಮೋಟಾರುಗಳನ್ನು ಬಳಸಲಾಗುತ್ತಿತ್ತು. ಈಗ ಆ ಪ್ರಮೇಯವಿಲ್ಲ. ಸ್ಕಾಡಾ ತಂತ್ರಜ್ಞಾನವನ್ನು ಉಪಯೋಗಿಸಿ ಕಂಟ್ರೋಲ್ ರೂಮ್‌ನಲ್ಲೇ ಕುಳಿತು ಬಟನ್ ಒತ್ತಿದರೆ ಮೋಟಾರ್ ಆನ್ ಆಗಿ ಗೇಟುಗಳನ್ನು ತೆರೆಯಬಹುದು, ಮುಚ್ಚಬಹುದು. ಕುಳಿತಲ್ಲೇ ನೀರಿನ ಮಟ್ಟ, ಒಳಹರಿವು-ಹೊರಹರಿವನ್ನು ನಿಖರವಾಗಿ ಗುರುತಿಸಬಹುದು.