ಸಾರಾಂಶ
ರಾಜ್ಯ ಸರ್ಕಾರದ ಈ ಧೋರಣೆ ಖಂಡಿಸಿ ರಾಜ್ಯಾದ್ಯಂತ ಜು. 25ರಂದು ಹೋರಾಟ ಮಾಡಲು ರಾಜ್ಯ ಸಮಿತಿ ಸಭೆಯಲ್ಲಿ ತಿರ್ಮಾನ
ಗದಗ: ರಾಜ್ಯ ಸರ್ಕಾರ ಶೋಷಿತ ಸಮುದಾಯಗಳ ಆಶಯ ಈಡೇರಿಸುವ ಜತೆಗೆ ಶಿಕ್ಷಣಕ್ಕೆ ಪ್ರಾತಿನಿಧ್ಯ ನೀಡಬೇಕಿತ್ತು. ಶಿಕ್ಷಣದಿಂದ ತಮ್ಮ ಬದುಕು ಹಸನು ಮಾಡಿಕೊಳ್ಳುವ ಮೂಲಕ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತಿತ್ತು. ಈ ಕಾರಣಕ್ಕಾಗಿಯೇ ಡಾ. ಬಿ.ಆರ್. ಅಂಬೇಡ್ಕರ್ ಶಿಕ್ಷಣಕ್ಕೆ ಮಹತ್ವ ನೀಡಿದ್ದರು. ಆದರೆ, ರಾಜ್ಯ ಸರ್ಕಾರ ಸಂವಿಧಾನದ ಆಶಯ ಬದಿಗೊತ್ತಿ ಎಸ್ಸಿ,ಎಸ್ಟಿ ಪಂಗಡದ ವಿದ್ಯಾರ್ಥಿಗಳಿಗೆ ಮೋಸ ಮಾಡಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಹನುಮಂತಪ್ಪ ದೊಡ್ಡಮನಿ ಆಕ್ರೋಶ ವ್ಯಕ್ತಪಡಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್ಸಿ,ಎಸ್ಟಿ ಹಣ ದುರುಪಯೋಗಪಡಿಸಿಕೊಂಡ ಸರ್ಕಾರದ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಕೂಡಲೇ ರಾಜೀನಾಮೆ ನೀಡಬೇಕು. ಬಡ ವಿದ್ಯಾರ್ಥಿಗಳ ಪ್ರೋತ್ಸಾಹ ಧನ ಸರ್ಕಾರ ಕಿತ್ತುಕೊಂಡಿದೆ. ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸಾಮಾಜಿಕ ನ್ಯಾಯದ ವಿರುದ್ಧ ಆಡಳಿತ ನಡೆಸುತ್ತಿದೆ. ಪಿ.ಎಚ್.ಡಿ ಹಾಗೂ ಉನ್ನತ ವ್ಯಾಸಂಗ ಮಾಡಲು ವಿದೇಶಕ್ಕೆ ಹೋಗುವ ವಿದ್ಯಾರ್ಥಿಗಳ ಸಹಾಯಧನಕ್ಕೂ ಸರ್ಕಾರ ಕತ್ತರಿ ಹಾಕಿದ್ದು,ಈ ಯೋಜನೆ ಕೂಡಲೇ ಮುಂದುವರಿಸಬೇಕು ಎಂದು ಮನವಿ ಮಾಡಿದರು.ರಾಜ್ಯ ಸರ್ಕಾರದ ಈ ಧೋರಣೆ ಖಂಡಿಸಿ ರಾಜ್ಯಾದ್ಯಂತ ಜು. 25ರಂದು ಹೋರಾಟ ಮಾಡಲು ರಾಜ್ಯ ಸಮಿತಿ ಸಭೆಯಲ್ಲಿ ತಿರ್ಮಾನಿಸಲಾಗಿದ್ದು, ಕೂಡಲೇ ಸಮಾಜ ಕಲ್ಯಾಣ ಇಲಾಖೆಯ ಸಚಿವರು ರಾಜೀನಾಮೆ ನೀಡುವವರೆಗೂ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಪರಸಪ್ಪ ಮೆಣಸಗಿ, ಈಶ್ವರ ದೊಡ್ಡಮನಿ, ಸೋಮಯ್ಯ ದೊಡ್ಮನಿ, ಶಿವು ಭೂಮದ, ಶರಣು ಎಂ.ಹಲಗಿ ಉಪಸ್ಥಿತರಿದ್ದರು.