ಸಾರಾಂಶ
ಬಿಜೆಪಿ ಸರ್ಕಾರ ಅವಧಿಯಲ್ಲಿ ೪೦ ಪರ್ಸೆಂಟೆಜ್ ಹಗರಣದಿಂದ ಹಿಡಿದು, ಪಿಎಸ್‌ಐ ನೇಮಕಾತಿ ಎಂಜಿಯನಿಯರ್ ನೇಮಕಾತಿ ಸೇರಿ ಅನೇಕ ಹಗರಣಗಳ ಸರಮಾಲೆಯೇ ಇದೆ.
ಹೊಸಪೇಟೆ: ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ ನಡೆದ ಹಗರಣಗಳಿಗಿಂತಲೂ ನಮ್ಮ (ಕಾಂಗ್ರೆಸ್) ಸರ್ಕಾರದಲ್ಲಿ ಆದ ಹಗರಣಗಳು ತೀರಾ ಕಡಿಮೆ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗರೆಡ್ಡಿ ಸಮರ್ಥನೆ ಮಾಡಿಕೊಂಡಿದ್ದಾರೆ.
ನಗರದ ಹೊರವಲಯದ ಶನೈಶ್ಚರ ದೇವಾಲಯ ಬಳಿ ನಿರ್ಮಾಣ ಹಂತದಲ್ಲಿರುವ ಟ್ರಕ್ ಟರ್ಮಿನಲ್ ಕಾಮಗಾರಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಅವಧಿಯಲ್ಲಿ ೪೦ ಪರ್ಸೆಂಟೆಜ್ ಹಗರಣದಿಂದ ಹಿಡಿದು, ಪಿಎಸ್‌ಐ ನೇಮಕಾತಿ ಎಂಜಿಯನಿಯರ್ ನೇಮಕಾತಿ ಸೇರಿ ಅನೇಕ ಹಗರಣಗಳ ಸರಮಾಲೆಯೇ ಇದೆ. ಇದರ ಮುಂದೆ ರಾಜ್ಯ ಸರ್ಕಾರದ ಹಗರಣ ಏನೇನು ಇಲ್ಲ ಎಂದರು.ಮೂರು ತಿಂಗಳಲ್ಲಿ ಟ್ರಕ್ ಟರ್ಮಿನಲ್ ಪೂರ್ಣ:
ಹೊಸಪೇಟೆ ಹೊರವಲಯದಲ್ಲಿ ೩೫ ಎಕರೆ ಪ್ರದೇಶದಲ್ಲಿ ₹30 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಟ್ರಕ್ ಟರ್ಮಿನಲ್ ನಿರ್ಮಾಣ ಮಾಡಲಾಗಿದೆ. ಮೂರು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ೧೯೪ ವಾಹನಗಳು ನಿಲುಗಡೆ ಅವಕಾಶ ಇದೆ. ವ್ಯವಸ್ಥಿತ ೩೮ ಕೊಠಡಿಗಳನ್ನು ನಿರ್ಮಿಸಲಾಗಿದೆ. ಇಲ್ಲಿ ಡಾಮಿಟ್ರಿ ಹಾಲ್, ಶೌಚಾಲಯ, ಕ್ಯಾಂಟಿನ್‌ಗಳು ಇವೆ. ಅಧಿಕಾರಿ, ಸಿಬ್ಬಂದಿ ಸೇರಿದಂತೆ ಚಾಲಕರು ಮತ್ತು ಕ್ಲೀನರ್‌ಗಳು ವಿಶ್ರಾಂತಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದರು.ಈ ಸಂದರ್ಭದಲ್ಲಿ ಶಾಸಕ ಎಚ್.ಆರ್.ಗವಿಯಪ್ಪ, ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ, ಹುಡಾ ಅಧ್ಯಕ್ಷ ಎಚ್.ಎನ್.ಮೊಹಮ್ಮದ್ ಇಮಾಮ್ ನಿಯಾಜಿ ಇದ್ದರು.