ಶಿರಾಡಿಯಲ್ಲಿ ಅಲ್ಲಲ್ಲಿ ಭೂ ಕುಸಿತ: ವಾಹನ ಸಂಚಾರ ಅಸ್ತವ್ಯಸ್ತ

| Published : Jul 30 2024, 12:40 AM IST

ಶಿರಾಡಿಯಲ್ಲಿ ಅಲ್ಲಲ್ಲಿ ಭೂ ಕುಸಿತ: ವಾಹನ ಸಂಚಾರ ಅಸ್ತವ್ಯಸ್ತ
Share this Article
  • FB
  • TW
  • Linkdin
  • Email

ಸಾರಾಂಶ

ಸೋಮವಾರ ಮಧ್ಯಾಹ್ನ ಕೂಡ ರಸ್ತೆ ಮೇಲೆ ಮಣ್ಣು ಕುಸಿದಿದ್ದರಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ರಸ್ತೆಯುದ್ದಕ್ಕೂ ಹಲವು ಭಾಗಗಳಲ್ಲಿ ರಸ್ತೆ ಮೇಲೆ ಮಣ್ಣು ಕುಸಿದಿದ್ದರಿಂದ ಕೆಲಕಾಲ ವಾಹನ ಸಂಚಾರ ಸ್ಥಗಿತವಾಗಿತ್ತು.

ಹಾಸನ: ಕಳೆದ ಎರಡು ದಿನಗಳಿಂದ ಬಿಡುವು ನೀಡಿದ್ದ ಮಳೆ ಮತ್ತೆ ಆರಂಭವಾಗಿದೆ. ಪರಿಣಾಮವಾಗಿ ಸೋಮವಾರ ಶಿರಾಡಿಯಲ್ಲಿ ಅಲ್ಲಲ್ಲಿ ಭೂ ಕುಸಿತವಾಗಿದ್ದು, ವಾಹನ ಸಂಚಾರಕ್ಕೆ ತೊಡಕಾಗಿದೆ. ಸಕಲೇಶಪುರ ತಾಲೂಕಿನ ದೊಡ್ಡತಪ್ಪಲು ಬಳಿ ಈ ಹಿಂದೆ ಕೂಡ ಹಲವಾರು ಬಾರಿ ರಾಷ್ಟ್ರೀಯ ಹೆದ್ದಾರಿ 75 ರ ಮೇಲೆ ಗುಡ್ಡ ಕುಸಿತವಾಗಿತ್ತು. ಅಂತೆಯೇ ಸೋಮವಾರ ಮಧ್ಯಾಹ್ನ ಕೂಡ ರಸ್ತೆ ಮೇಲೆ ಮಣ್ಣು ಕುಸಿದಿದ್ದರಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ರಸ್ತೆಯುದ್ದಕ್ಕೂ ಹಲವು ಭಾಗಗಳಲ್ಲಿ ರಸ್ತೆ ಮೇಲೆ ಮಣ್ಣು ಕುಸಿದಿದ್ದರಿಂದ ಕೆಲಕಾಲ ವಾಹನ ಸಂಚಾರ ಸ್ಥಗಿತವಾಗಿತ್ತು. ಶಿರಾಡಿಯಲ್ಲಿ ನಾಲ್ಕು ಪಥಗಳ ರಸ್ತೆ ನಿರ್ಮಾಣಕ್ಕಾಗಿ ರಸ್ತೆ ಅಗಲೀಕರಣ ಮಾಡುವ ಸಲುವಾಗಿ ರಸ್ತೆ ಬದಿಯ ಗುಡ್ಡಗಳನ್ನು ಅವೈಜ್ಞಾನಿಕವಾಗಿ ಕಡಿದಾಗಿ ಕತ್ತರಿಸಿರುವುದರಿಂದ ಹೀಗೆ ಗುಡ್ಡ ಕುಸಿಯುತ್ತಿದೆ ಎಂದು ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರ ಸಹಿತವಾಗಿ ಎಲ್ಲಾ ಅಧಿಕಾರಿಗಳು ಹೇಳಿದ್ದಾಗಿದೆ. ಆದರೂ ಕಾಮಗಾರಿ ಮಾತ್ರ ಅದೇ ವಿಧಾನದಲ್ಲಿ ನಡೆಯುತ್ತಿದೆ. ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರು ರಸ್ತೆ ಮೇಲೆ ಬಿದ್ದ ಮಣ್ಣನ್ನು ತೆರವು ಮಾಡುವ ಕೆಲಸ ಮಾಡುತ್ತಿದ್ದು, ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡುತ್ತಿದ್ದಾರೆ. ಆದರೂ ಒಂದು ಕಡೆ ಮಣ್ಣು ತೆರವು ಮಾಡುತ್ತಿದ್ದಂತೆ ಮತ್ತೊಂದು ಕಡೆ ಮಣ್ಣು ಕುಸಿಯುತ್ತಲೇ ಇದೆ. ಹಾಗಾಗಿ ವಾಹನ ಸಂಚಾರಕ್ಕೆ ತೀವ್ರ ತೊಂದರೆ ಆಗಿದ್ದು, ಯಾವ ಸಮಯದಲ್ಲಿ ಏನು ಬೇಕಾದರೂ ಆಗಬಹುದು ಎನ್ನುವಂತಹ ಪರಿಸ್ಥಿತಿ ಇದೆ.