ಸಾರಾಂಶ
ಹೊಸಪೇಟೆಯ ತುಂಗಭದ್ರಾ ಜಲಾಶಯದಲ್ಲಿ ಹೆಚ್ಚುವರಿ ನೀರು ಶೇಖರಣೆ ದೃಷ್ಟಿಯಿಂದ ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಾಣ ಸಂಬಂಧ ಕರ್ನಾಟಕದೊಂದಿಗೆ ಸಭೆ ನಡೆಸಲು ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರೊಂದಿಗೆ ಚರ್ಚಿಸಿ ದಿನಾಂಕ ನಿಗದಿ ಮಾಡಲಾಗುವುದು ಎಂದು ಆಂಧ್ರಪ್ರದೇಶ ಡಿಸಿಎಂ ಪವನ್ ಕಲ್ಯಾಣ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಹೊಸಪೇಟೆಯ ತುಂಗಭದ್ರಾ ಜಲಾಶಯದಲ್ಲಿ ಹೆಚ್ಚುವರಿ ನೀರು ಶೇಖರಣೆ ದೃಷ್ಟಿಯಿಂದ ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಾಣ ಸಂಬಂಧ ಕರ್ನಾಟಕದೊಂದಿಗೆ ಸಭೆ ನಡೆಸಲು ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರೊಂದಿಗೆ ಚರ್ಚಿಸಿ ದಿನಾಂಕ ನಿಗದಿ ಮಾಡಲಾಗುವುದು ಎಂದು ಆಂಧ್ರಪ್ರದೇಶ ಡಿಸಿಎಂ ಪವನ್ ಕಲ್ಯಾಣ್ ತಿಳಿಸಿದರು.ವಿಧಾನಸೌಧದಲ್ಲಿ ರಾಜ್ಯದ ಕುಮ್ಕಿ ಆನೆಗಳನ್ನು ಆಂಧ್ರಪ್ರದೇಶಕ್ಕೆ ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು, ನವಲಿ ಸಮಾನಾಂತರ ಜಲಾಶಯ ನಿರ್ಮಾಣ ಸಂಬಂಧ ಚಂದ್ರಬಾಬು ನಾಯ್ಡು ಅವರೊಂದಿಗೆ ಸಭೆ ನಡೆಸಲು ದಿನಾಂಕ ನಿಗದಿ ಮಾಡಿಕೊಡುವಂತೆ ಮನವಿ ಮಾಡಿದರು.
ಅದಕ್ಕೆ ಪ್ರತಿಯಾಗಿ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಭರವಸೆ ನೀಡಿದ ಪವನ್ ಕಲ್ಯಾಣ್, ಕರ್ನಾಟಕವು ನಮ್ಮ ಸಹೋದರ ರಾಜ್ಯ. ಆಂಧ್ರಪ್ರದೇಶದ ಮಾನವ-ಆನೆ ಸಂಘರ್ಷ ತಡೆಯಲು ಕುಮ್ಕಿ ಆನೆಗಳನ್ನು ನೀಡುವ ಮೂಲಕ ಕರ್ನಾಟಕ ಸೌಹಾರ್ದಯುತವಾಗಿ ನಡೆದುಕೊಂಡಿದೆ. ಅದರ ಮುಂದಿನ ಭಾಗವಾಗಿ ತುಂಗಭದ್ರಾ ಜಲಾಶಯದಲ್ಲಿ ಶೇಖರಣೆಯಾಗಿರುವ ಹೂಳು ತೆಗೆಯಲು ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಆಂಧ್ರ ಸಿಎಂ ಅವರೊಂದಿಗೆ ಸಭೆ ನಡೆಸಲು ದಿನಾಂಕ ನಿಗದಿ ಮಾಡುವಂತೆ ಡಿ.ಕೆ.ಶಿವಕುಮಾರ್ ಕೋರಿದ್ದಾರೆ. ಅದರಂತೆ ನಾಯ್ಡು ಅವರೊಂದಿಗೆ ಚರ್ಚೆ ನಡೆಸಿ ಸಭೆಯ ದಿನಾಂಕ ನಿಗದಿ ಮಾಡಲಾಗುವುದು ಹಾಗೂ ಕರ್ನಾಟಕಕ್ಕೆ ಅಗತ್ಯ ನೆರವನ್ನೂ ನೀಡಲಾಗುವುದು ಎಂದು ಭರವಸೆ ನೀಡಿದರು.====
ಅದಕ್ಕೂ ಮುನ್ನ ಮಾತನಾಡಿದ ಡಿ.ಕೆ.ಶಿವಕುಮಾರ್, ತುಂಗಭದ್ರ ನದಿಯ ನಮ್ಮ ಪಾಲಿನ ನೀರು ಬಳಕೆಗೆ ಜಲಾಶಯದಲ್ಲಿ ಶೇಖರಣೆಯಾಗಿರುವ ಹೂಳು ತೆಗೆಯಬೇಕಿದೆ. ಅದಕ್ಕಾಗಿ ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಿಸಬೇಕಿದ್ದು, ಅದಕ್ಕಾಗಿ ಆಂಧ್ರಪ್ರದೇಶ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಬೇಕಿದೆ. ಹೀಗಾಗಿ ದಿನಾಂಕ ನಿಗದಿ ಮಾಡುವಂತೆ ಈಗಾಗಲೇ ಕೋರಿದ್ದು, ಪವನ್ ಕಲ್ಯಾಣ್ ಅವರು ಚಂದ್ರಬಾಬು ನಾಯ್ಡು ಅವರೊಂದಿಗೆ ಚರ್ಚಿಸಿ ಸಭೆ ನಿಗದಿ ಮಾಡಬೇಕು ಎಂದು ಮನವಿ ಮಾಡಿದರು.