ಇಂದಿನಿಂದ ಪರಿಶಿಷ್ಟ ಜಾತಿ ಮೀಸಲು ವರ್ಗೀಕರಣ ಸಮೀಕ್ಷೆ

| Published : May 05 2025, 12:47 AM IST

ಸಾರಾಂಶ

ಸಮೀಕ್ಷೆ ಹಿನ್ನಲೆ ಮಾಜಿ ಸಚಿವ ಎಚ್.ಆಂಜನೇಯ ತಮ್ಮ ನಿವಾಸದ ಮುಂಭಾಗ ಇದು ಮಾದಿಗರ ಮನೆ ಎಂಬ ಸ್ಟಿಕ್ಕರ್ ಅಂಟಿಸಿಕೊಂಡರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಪರಿಶಿಷ್ಟ ಜಾತಿ ಒಳ ಮೀಸಲಾತಿ ವರ್ಗೀಕರಣ ಸಂಬಂಧ ಮೇ 5ರಂದು ಸೋಮವಾರದಿಂದ ಜಿಲ್ಲೆಯಾದ್ಯಂತ ಮನೆ ಮನೆ ಭೇಟಿ ನೀಡಿ ಸಮೀಕ್ಷೆ ನಡೆಸುವ ಕಾರ್ಯ ಆರಂಭವಾಗಲಿದೆ. ಸಮೀಕ್ಷೆ ವೇಳೆ ಎದುರಾಗುವ ಸಮಸ್ಯೆಗಳ ಪರಿಹಾರಕ್ಕಾಗಿ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ನಿಯಂತ್ರಣಾ ಕೊಠಡಿ (ಕಂಟ್ರೋಲ್ ರೂಂ) ಗಳ ಸ್ಥಾಪಿಸಲಾಗಿದೆ.

ಪ.ಜಾತಿ ಒಳ ಮೀಸಲಾತಿ ವರ್ಗೀಕರಣ ಕುರಿತು ನ್ಯಾ.ಎಚ್.ಎನ್.ನಾಗಮೋಹನ್‌ ದಾಸ್ ಅವರ ಏಕ ಸದಸ್ಯ ವಿಚಾರಣಾ ಆಯೋಗವನ್ನು ಸರ್ಕಾರ ರಚಿಸಿದ್ದು, ಒಳ ಮೀಸಲಾತಿ ವರ್ಗೀಕರಣ ಸಂಬಂಧ ವಿವಿಧ ಅಂಶಗಳ ಬಗ್ಗೆ ದತ್ತಾಂಶ ಸಂಗ್ರಹಣೆಗಾಗಿ ಸಮೀಕ್ಷೆ ನಡೆಸಲಾಗುತ್ತಿದೆ. ಇದಕ್ಕಾಗಿ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿಯೂ ಸಮನ್ವಯ ಸಮಿತಿ ರಚಿಸಲಾಗಿದೆ. ಗಣತಿದಾರರು ಮೇ5 ರಿಂದ 17ರವರೆಗೆ ಮನೆ ಮನೆ ಭೇಟಿ ನೀಡಿ ಸಮೀಕ್ಷಾ ಕಾರ್ಯ ಕೈಗೊಳ್ಳಲಿರುವುದರಿಂದ ಸಮೀಕ್ಷೆಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಪರಿಹರಿಸಲು ಚಿತ್ರದುರ್ಗ ಜಿಲ್ಲಾ ಕಚೇರಿ ಹಾಗೂ 6 ತಾಲೂಕುಗಳಲ್ಲಿನ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಗಳಲ್ಲಿ ಕಂಟ್ರೋಲ್ ರೂಂ ಸ್ಥಾಪಿಸಿ, ಇದಕ್ಕಾಗಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ.

ಜಿಲ್ಲಾ ಮಟ್ಟದಲ್ಲಿ ಸಮಾಜ ಕಲ್ಯಾಣ ಇಲಾಖೆ ಜಂಟಿನಿರ್ದೇಶಕರ ಕಚೇರಿ, ಚಿತ್ರದುರ್ಗ, ಲಕ್ಷ್ಮಿ ಪಿ.ಟಿ.-9480843029, ತಾಲೂಕು ಮಟ್ಟದಲ್ಲಿ ಚಿತ್ರದುರ್ಗ ದೀಪಾ ಎಂ.-9480843107, ಚಳ್ಳಕೆರೆ ವೇದಾವತಿ- 9480843106, ಹೊಳಲ್ಕೆರೆ ಮೋಹನ್ ಶಾಗೋಟಿ-9480843109, ಹಿರಿಯೂರು ಹನುಮಂತಪ್ಪ ಚಿಕ್ಕೇರಿ- 9480843108, ಹೊಸದುರ್ಗ ಓಂಕಾರಪ್ಪ- 9480843110 ಹಾಗೂ ಮೊಳಕಾಲ್ಮೂರು ನವೀನ್ ಕಟ್ಟಿ- 9480843111 ಕಾರ್ಯನಿರ್ವಹಿಸುವರು.

ಕಂಟ್ರೋಲ್ ರೂಂ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ತೆರೆದಿರುತ್ತದೆ. ಸಮೀಕ್ಷಾ ಕಾರ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಕಂಟ್ರೋಲ್ ರೂಂಗೆ ಕರೆ ಮಾಡಿ ಸಂಪರ್ಕಿಸಬಹುದಾಗಿದೆ.

ಪರಿಶಿಷ್ಟ ಜಾತಿ ಒಳ ಮೀಸಲಾತಿ ಜಾರಿ ಸಂಬಂಧ ಜಾತಿ ಕುಟುಂಬಗಳ ಸಮೀಕ್ಷೆ ಈ ಸಮೀಕ್ಷೆ ಮೂರು ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತದಲ್ಲಿ ಮೇ 5ರಿಂದ 17ರವರೆಗೆ ಮನೆ-ಮನೆ ಭೇಟಿ ನೀಡಿ ಸಮೀಕ್ಷಾ ಕಾರ್ಯ ಕೈಗೊಳ್ಳಲಾಗುತ್ತದೆ. 2ನೇ ಹಂತದಲ್ಲಿ ಮೇ 19ರಿಂದ 21ರವರೆಗೆ ಬ್ಲಾಕ್‍ಗಳಲ್ಲಿ ವಿಶೇಷ ಶಿಬಿರ ಕೈಗೊಂಡು, ಮನೆ ಭೇಟಿಯಲ್ಲಿ ಬಿಟ್ಟು ಹೋದ ಪರಿಶಿಷ್ಟ ಜಾತಿ ಕುಟುಂಬಗಳ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. 3ನೇ ಹಂತ ಮೇ19 ರಿಂದ 21 ರವರೆಗೆ ಸ್ವಯಂ ಘೋಷಣೆ (ಆನ್‍ಲೈನ್ ಮೂಲಕ) ಸಮೀಕ್ಷೆಗೆ ಮಾಹಿತಿ ಒದಗಿಸಬಹುದಾಗಿದೆ.

ಜಾತಿ ಗಣತಿ ಹಿನ್ನೆಲೆಯಲ್ಲಿ ಆಯಾ ಸಮುದಾಯಗಳು ಸಜ್ಜಾಗಿದ್ದು ಗಣತಿ ವೇಳೆ ಇಂತದ್ದೇ ಜಾತಿ ಬರೆಯಿಸುವಂತೆ ತಾಕೀತು ಮಾಡಿವೆ. ಪ್ರಮುಖವಾಗಿ ಮಾದಿಗ, ಲಂಬಾಣಿ, ಛಲವಾದಿ ಹಾಗೂ ಭೋವಿ ಸಮುದಾಯಗಳು ಮುಂಚೂಣಿಯಲ್ಲಿವೆ. ಹಳ್ಳಿಗಳಿಗೆ ಹೋಗಿ ಜನ ಜಾಗೃತಿಯಲ್ಲಿತೊಡಗಿವೆ. ಮಾದಿಗ ಸಮುದಾಯ ಈ ವಿಚಾರದಲ್ಲಿ ಒಂದು ಹೆಜ್ಜೆ ಮುಂದಿದ್ದು ತಮ್ಮ ಮನೆಗಳ ಮುಂಭಾಗದ ಗೋಡೆಗಳಿಗೆ ಇದು ಮಾದಿಗರ ಮನೆ ಎಂಬ ಸ್ಟಿಕ್ಕರ್ ಅಂಟಿಸಿಕೊಂಡಿದ್ದಾರೆ.